ಯಾವ ಮೀಟಿಂಗ್‌ನಲ್ಲೂ ಭಾಗವಹಿಸದ ದಕ್ಷಿಣದ ನಾಲ್ವರು ಪ್ರಮುಖ ನಾಯಕರು
ಲೋಕಸಭಾ ಚುನಾವಣೆಗೆ ಮುನ್ನ ರಾಷ್ಟ್ರ ರಾಜಕಾರಣ ರಂಗೇರುತ್ತಿದೆ. ಬಿಜೆಪಿಯನ್ನು ಹಣಿಯಲು ವಿಪಕ್ಷಗಳು ಒಗ್ಗಟ್ಟಾಗಿದ್ದು, ಎರಡನೇ ಸುತ್ತಿನ ಸಭೆ ನಡೆಸುತ್ತಿವೆ. ಪಾಟ್ನಾದಲ್ಲಿ 16 ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ ಬಳಿಕ ಬೆಂಗಳೂರಿನಲ್ಲಿ 26 ಪಕ್ಷಗಳ ನಾಯಕರು ಭೇಟಿಯಾಗಿ ಸಭೆ ನಡೆಸುತ್ತಿದ್ದಾರೆ.
ವಿಪಕ್ಷಗಳು ಒಗ್ಗಟ್ಟಾದ ಬೆನ್ನಲ್ಲೇ ಎನ್‌ಡಿಎ ಕೂಡ ಬಲ ಪ್ರದರ್ಶನಕ್ಕೆ ಮುಂದಾಗಿದೆ. 28 ಪಕ್ಷಗಳು ಬೆಂಬಲ ಸೂಚಿಸಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಎರಡೂ ಬಣಗಳ ಸಭೆ ಮುಂದಿನ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
ಎರಡೂ ಬಣಗಳ ಸಭೆ ಭಾರತದ ರಾಜಕೀಯದ ದಿಕ್ಸೂಚಿ ಎನ್ನಲಾಗಿದೆ. ದಕ್ಷಿಣ, ಉತ್ತರ ಭಾರತದ ಹಲವು ಪಕ್ಷಗಳು ಕೂಡ ಸಭೆಯಲ್ಲಿ ಭಾಗವಹಿಸುತ್ತಿವೆ. ಕೆಲವು ಪಕ್ಷಗಳು ವಿಪಕ್ಷಗಳ ಜೊತೆ ಗುರುತಿಸಿಕೊಂಡರೆ ಇನ್ನೂ ಕೆಲವು ಎನ್‌ಡಿಎ ಜೊತೆ ಗುರುತಿಸಿಕೊಂಡಿವೆ. ಆದರೆ ದಕ್ಷಿಣ ಭಾರತ ಈ ನಾಲ್ಕು ಪ್ರಮುಖ ಮುಖಂಡರು ಮಾತ್ರ ಯಾವ ಸಭೆಯಲ್ಲೂ ಭಾಗವಹಿಸಿಲ್ಲ.
ಕೆ.ಚಂದ್ರಶೇಖರ ರಾವ್
ಭಾರತ್ ರಾಷ್ಟ್ರ ಸಮಿತಿ ಸ್ಥಾಪಿಸುವ ಮೂಲಕ ರಾಷ್ಟ್ರ ರಾಜಕಾರಣ ಪ್ರವೇಶಿಸುವ ಕನಸು ಕಂಡಿರುವ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಕೂಡ ಯಾವುದೇ ಸಭೆಯಲ್ಲಿ ಭಾಗವಹಿಸದೆ ಅಂತರ ಕಾಯ್ದುಕೊಂಡಿದ್ದಾರೆ.
ರಾಷ್ಟ್ರಾದ್ಯಂತ ಹಲವು ನಾಯಕರನ್ನು ಭೇಟಿ ಮಾಡಿ ಒಂದು ಗೂಡಿಸಲು ಯತ್ನಿಸಿದ್ದ ಕೆ.ಚಂದ್ರಶೇಕರ್ ರಾವ್, ಬಿಜೆಪಿ ವಿರುದ್ಧ ಕಿಡಿ ಕಾರುತ್ತಿದ್ದರು, ಈ ಕಾಂಗ್ರೆಸ್‌ನಿಂದ ಕೂಡ ಅಂತರ ಕಾಯ್ದುಕೊಂಡಿದ್ದು ಮುಂದಿನ ನಡೆ ಕುತೂಹಲ ಮೂಡಿಸಿದೆ.
ಚಂದ್ರಬಾಬು ನಾಯ್ಡು
ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಕೂಡ ಎರಡೂ ಸಭೆಗಳಿಂದ ದೂರ ಉಳಿದಿದ್ದಾರೆ. ಎನ್‌ಡಿಎ ಅಥವಾ ಯುಪಿಎ ಇಂದ ಯಾವುದೇ ಆಹ್ವಾನ ಬರದ ಕಾರಣ, ಚಂದ್ರಬಾಬು ನಾಯ್ಡು ಮುಂದಿನ ದಿನಗಳಲ್ಲಿ ತಮ್ಮ ನಿರ್ಧಾರವನ್ನು ತಿಳಿಸುವ ಸಾಧ್ಯತೆ ಇದೆ.
ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಎರಡೂ ಬಣಗಳಿಂದ ಯಾವುದೇ ಆಹ್ವಾನ ಬಂದಿಲ್ಲದ ಕಾರಣ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಿರುವ ಕುಮಾರಸ್ವಾಮಿ ಈ ಬಾರಿ ಬಿಜೆಪಿ ಜೊತೆ ಗುರುತಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರು ಹೆಚ್‌ಡಿಕೆ ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸೂಚನೆ ನೀಡಿದೆ. ಚುನಾವಣೆ ಸಮೀಪವಾದಂತೆ ಈ ನಿರ್ಧಾರ ಬರುವ ಸಾಧ್ಯತೆ ಇದ್ದರೂ, ಸದ್ಯಕ್ಕೆ ಅವರು ಸಭೆಯಿಂದ ದೂರ ಉಳಿದಿದ್ದಾರೆ.
ವೈ.ಎಸ್.ಜಗನ್ಮೋಹನ್ ರೆಡ್ಡಿ
ಆಂಧ್ರಪದೇಶದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಕೂಡ ಯಾವುದೇ ಸಭೆಯಲ್ಲಿ ಭಾಗವಹಿಸದೆ ಅಂತರ ಕಾಯ್ದುಕೊಂಡಿದ್ದಾರೆ. ಕಳೆದ ಬಾರಿ ಮೋದಿ ಆಂಧ್ರಪ್ರದೇಶ ಭೇಟಿ ಸಂದರ್ಭದಲ್ಲಿ ಎನ್‌ಡಿಎ ಸೇರುವಂತೆ ನರೇಂದ್ರ ಮೋದಿ ಜಗನ್ಮೋನ್ ರೆಡ್ಡಿಗೆ ಆಹ್ವಾನ ನೀಡಿದ್ದರೂ ಅದನ್ನು ನಿರಾಕರಿಸಿದ್ದರು.
ಚುನಾವಣೆಗೆ ಇನ್ನೂ ಹಲವು ತಿಂಗಳ ಸಮಯ ಇದ್ದು ಈ ನಾಲ್ವರು ಪ್ರಮುಖ ನಾಯಕರು ತಮ್ಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಯಾರು ಯಾವ ನಿರ್ಧಾರ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.