ಇತ್ತೀಚಿನ ಸುದ್ದಿಸುದ್ದಿ

ವೀರಭದ್ರೇಶ್ವರ ದೇವಾಲಯ-ಜೀರ್ಣೋದ್ದಾರ ಸಂಬಂಧ ಸಮಗ್ರ ಪರಿಶೀಲನೆ

ಚಾಮರಾಜನಗರ:ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರ ಸೂಚನೆ ಮೇರೆಗೆ ಹಿರಿಯ ಅಧಿಕಾರಿಗಳು, ವಾಸ್ತು ತಜ್ಞರು, ಎಂಜಿನಿಯರ್ ಗಳ ತಂಡ ಇಂದು ಅಮಚವಾಡಿಯ ಚೆನ್ನಪ್ಪನಪುರದ ಗುಡ್ಡದ ಮಠದ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಜೀರ್ಣೋದ್ದಾರ ಕಾರ್ಯ ಸಂಬಂಧ ಪರಿಶೀಲಿಸಿ ಕೈಗೆತ್ತಿಕೊಳ್ಳಬೇಕಿರುವ ಕೆಲಸಗಳ ಪಟ್ಟಿ ಮಾಡಿಕೊಂಡರು.

ದೇವಾಲಯದ ಅಭಿವೃದ್ದಿ ಸಂಬಂಧ ದೇವಾಲಯದ ಸೇವಾ ಸಮಿತಿಯ ಅಧ್ಯಕ್ಷರು, ಸದಸ್ಯರು ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಇಂದೇ ವಾಸ್ತು ಎಂಜಿನಿಯರ್, ಹಿರಿಯ ಅಧಿಕಾರಿಗಳು ಭೇಟಿ ನೀಡಿ ಜೀರ್ಣೋದ್ದಾರ ಕಾರ್ಯ ಸಂಬಂಧ ಪರಿಶೀಲಿಸಿ ಕೈಗೊಳ್ಳಬೇಕಿರುವ ಕೆಲಸಗಳ ಕುರಿತು ವರದಿ ಸಲ್ಲಿಸಿ ಕ್ರಮವಹಿಸಲು ನಿರ್ದೇಶನ ನೀಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಉಪವಿಭಾಗಾಧಿಕಾರಿಗಳಾದ ಗೀತಾ ಹುಡೇದ, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್ ಕುಮಾರ್, ತಹಶೀಲ್ದಾರ್ ಬಸವರಾಜು, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷಾಧಿಕಾರಿ ಸ್ವಾಮಿ, ಬೆಂಗಳೂರಿನ ವಾಸ್ತುತಜ್ಞ ಎಂಜಿನಿಯರ್ ಚಿದಾನಂದ, ಶಿಲ್ಪಿಗಳಾದ ರಾಜಶೇಖರ್ ಅವರು ಇಂದು ದೇವಾಲಯಕ್ಕೆ ಭೇಟಿ ನೀಡಿದರು.

ಎಂಜಿನಿಯರ್ ಹಾಗೂ ವಾಸ್ತು ತಜ್ಞ ಶಿಲ್ಪಿಗಳ ತಂಡ ದೇವಾಲಯದ ಸಮಗ್ರ ವೀಕ್ಷಣೆ ಮಾಡಿದರು. ದೇವಾಲಯದಲ್ಲಿ ಆಗಬೇಕಿರುವ ಜೀರ್ಣೋದ್ದಾರದ ಪ್ರಮುಖ ಕಾರ್ಯಗಳ ಬಗ್ಗೆ ವಿವರವಾಗಿ ಪರಿಶೀಲನೆ ಮಾಡಿದರು. ಸ್ಥಳೀಯ ಮುಖಂಡರು ದೇವಾಲಯದ ಸೇವಾ ಸಮಿತಿಯ ಅಧ್ಯಕ್ಷರು, ಅರ್ಚಕರು, ಗ್ರಾಮದ ಹಿರಿಯರೊಂದಿಗೆ ಇತರರೊಂದಿಗೆ ದೇವಾಲಯದ ಇತಿಹಾಸ ಇತರೆ ಮಾಹಿತಿಗಳನ್ನು ಪಡೆದುಕೊಂಡರು.

ದೇವಾಲಯದ ಒಳ ಆವರಣ, ಹೊರ ಆವರಣ, ಸುತ್ತುಗೋಡೆ, ದೇವಾಲಯದ ಕಳಶಗಳು, ಗೋಪುರ, ಕೆತ್ತನೆ ಹಾಗೂ ಇತರೆ ಭಾಗಗಳನ್ನು ಎಂಜಿನಿಯರ್ ಹಾಗೂ ವಾಸ್ತು ತಜ್ಞ ಶಿಲ್ಪಿಗಳ ತಂಡ ಕೂಲಂಕಶವಾಗಿ ವೀಕ್ಷಿಸಿದರು. ಅಧಿಕಾರಿಗಳು ಹಾಗೂ ಸ್ಥಳದಲ್ಲಿದ್ದ ದೇವಾಲಯ ಸಮಿತಿಯವರು ಹಾಗೂ ಗ್ರಾಮದ ಮುಖಂಡರೊಂದಿಗೆ ಜೀರ್ಣೋದ್ದಾರ ಕುರಿತು ಕೈಗೊಳ್ಳಬೇಕಿರುವ ಕಾರ್ಯಗಳ ಬಗ್ಗೆ ವಿಸೃತವಾಗಿ ಚರ್ಚಿಸಿ ಪಟ್ಟಿ ಮಾಡಿಕೊಂಡರು.

ದೇವಾಲಯದ ಸೇವಾ ಸಮಿತಿಯ ಪ್ರಮುಖರಾದ ಶ್ರೀಕಾಂತ ಅರಸ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹೇಶ್, ದಯಾನಿಧಿ, ರಾಜಣ್ಣ, ಕೊಂಗಳ್ಳಿಶೆಟ್ಟಿ, ಗೋಪಾಲಶೆಟ್ಟಿ, ಕಂದಾಯ ಇಲಾಖೆಯ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button