ಇತ್ತೀಚಿನ ಸುದ್ದಿರಾಜ್ಯ

ಕನ್ನಡ ಕಡ್ಡಾಯ ಅನುಷ್ಠಾನಕ್ಕೆ ಈ ಅಧಿವೇಶನದಲ್ಲೇ ಸಿಹಿ ಸುದ್ದಿ: ಸಿಎಂ ಬೊಮ್ಮಾಯಿ ಹೇಳಿದ್ದೇನು?

ವಿಧಾನಸಭೆ: ಕನ್ನಡ ಅನುಷ್ಠಾನ ವಿಚಾರದಲ್ಲಿ ಎಂದಿಗೂ ಹಿಂದೆ ಬೀಳುವುದಿಲ್ಲ ಎಂದಿರುವ ಸಿಎಂ ಬಸವರಾಜ ಬೊಮ್ಮಾಯಿ, ಕನ್ನಡ ಕಡ್ಡಾಯದ ಕುರಿತು ಈ ಅಧಿವೇಶನದಲ್ಲೇ ಸಮಗ್ರ ಭಾಷಾ ಕಾಯ್ದೆಯ ಮಸೂದೆ ಮಂಡನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಈ ಮಾತನ್ನು ಹೇಳಿದರು.

ಪ್ರಶ್ನೋತ್ತರ ಅವಧಿಯ ನಂತರ ನಿಯಮ 69ರ ಅಡಿಯಲ್ಲಿ, ರಾಜ್ಯದಲ್ಲಿ ಮಳೆ ಹಾನಿ ಕುರಿತು ಚರ್ಚೆ ಆರಂಭಿಸುವಂತೆ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಆಹ್ವಾನಿಸಿದರು. ಈ ವೇಳೆ ಜೆಡಿಎಸ್‌ ಶಾಸಕರು ಎದ್ದುನಿಂತು, ಹಿಂದಿ ದಿವಸ್‌ ಆಚರಣೆ ಕುರಿತು ಮಾತನಾಡಬೇಕು ಎಂದು ಹಠ ಹಿಡಿದರು.

ಈ ಕುರಿತು ಸ್ಪೀಕರ್‌ ಅವರಿಗೆ ವಿವರಣೆ ನೀಡಿದ ಕುಮಾರಸ್ವಾಮಿ, ಇವತ್ತು ಆಚರಣೆ ಮಾಡಲಾಗುತ್ತಿರುವ ಹಿಂದಿ ದಿವಸ್‌ ಕುರಿತು ನಮ್ಮ ಪಕ್ಷದಿಂದ ಪ್ರತಿಭಟನೆ ನಡೆಸುತ್ತಿರುವ ಕುರಿತು ಸದಸ್ಯರು ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ದೇಶದಲ್ಲಿ ಹಲವು ಭಾಷೆಗಳಿವೆ. ಆದರೆ ಒಂದು ಭಾಷೆ, ಒಂದು ರಾಷ್ಟ್ರ ಎನ್ನುವುದನ್ನು ಗುರಿಯಾಗಿಸಿಕೊಂಡು ಪ್ರಯತ್ನಗಳು ನಡೆಯುತ್ತಿವೆ ಎಂಬ ಭಾವನೆಯಿದೆ. ಯಾವುದೇ ಭಾಷೆಯ ಕತ್ತು ಹಿಸುಕುವ ಕೆಲಸ ಆಗಬಾರದು ಎಂದು ಸದಸ್ಯರು ಮನವಿ ಮಾಡುತ್ತಿದ್ದಾರೆ ಎಂದರು.

ಈ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು. ಭಾರತ ಒಂದು ಒಕ್ಕೂಟ ರಾಷ್ಟ್ರ. ಇಲ್ಲಿ ಅನೇಕ ಭಾಷೆಗಳಿವೆ. ಇಲ್ಲಿ ಯಾವುದೇ ಭಾಷೆಯನ್ನು ಹೇರಲು ಅವಕಾಶವಿಲ್ಲ. ಕನ್ನಡ ಭಾಷೆಯನ್ನು ಬೆಳೆಸಲು ನಮ್ಮ ಸರ್ಕಾರ ಬದ್ಧವಾಗಿದೆ. ನೆಲ-ಜಲ-ಜನ-ಭಾಷೆ ವಿಚಾರದಲ್ಲಿ ರಾಜಕೀಯವನ್ನು ಮೀರಿ ಅನೇಕ ಬಾರಿ ನಿರ್ಧಾರವನ್ನು ಕೈಗೊಂಡಿದ್ದೇವೆ.

ಕನ್ನಡ ಬಳಕೆಯನ್ನು ಹೆಚ್ಚಿಸಬೇಕು ಎಂದು ಈ ಹಿಂದಿನಿಂದಲೇ ಕೇಳುತ್ತಿದ್ದೇವೆ. ಆದರೆ ಇದೇ ಪ್ರಥಮ ಬಾರಿಗೆ ಇದಕ್ಕಾಗಿ ಕಾಯ್ದೆ ಜಾರಿ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಕನ್ನಡ ಬಳಕೆಗೆ ಇದೇ ಮೊದಲ ಬಾರಿಗೆ ಕಾನೂನು ಮಾನ್ಯತೆ ನೀಡುತ್ತಿದ್ದೇವೆ. ಆಡಳಿತದಲ್ಲಿ ಕನ್ನಡ ಅನುಷ್ಠಾನದ ಜತೆಗೆ, ಅನ್ಯಭಾಷಿಕರಿಗೂ ಕನ್ನಡ ಕಲಿಸುವ ಕೆಲಸ ಮಾಡುತ್ತೇವೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ, ಕನ್ನಡದಲ್ಲೇ ಇಂಜಿನಿಯರಿಂಗ್‌ ಶಿಕ್ಷಣವನ್ನು ಒದಗಿಸುತ್ತಿದ್ದೇವೆ. ಈಗಾಗಲೆ ಒಂದು ಸೆಮಿಸ್ಟರ್‌ ಸಹ ಮುಕ್ತಾಯವಾಗಿದೆ. ಕನ್ನಡ ಅನುಷ್ಠಾನದಲ್ಲಿ ಸರ್ಕಾರ ಬದ್ಧತೆ ಹೊಂದಿದೆ ಎಂದರು.

ಕನ್ನಡದ ಕುರಿತು ಎಲ್ಲ ದೃಷ್ಟಿಕೋನದಿಂದಲೂ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಮಗ್ರ ಭಾಷಾ ಕಾಯ್ದೆಯನ್ನು ಜಾರಿ ಮಾಡಬೇಕು ಎಂಬ ಆಗ್ರಹ ಅನೇಕ ಸಮಯದಿಂದ ಇದೆ. ಈಗಾಗಲೆ ಭಾಷಾ ಕಾಯ್ದೆಯ ಕರಡು ಸಿದ್ಧವಾಗಿ ಎರಡು ವರ್ಷವಾದರೂ, ಅದು ಕಾಯ್ದೆ ಆಗದಂತೆ ಕೆಲವರು ತಡೆಯುತ್ತಿದ್ದಾರೆ ಎಂಬ ಆರೋಪವೂ ಇದೆ. ಇದೀಗ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಇದೇ ಅಧಿವೇಶನದಲ್ಲಿ ಮಂಡನೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button