ಬೆಂಗಳೂರಲ್ಲಿ ಭಾರಿ ಮಳೆ: ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ಬಂದ್.. ಅಪಾರ್ಟ್ಮೆಂಟ್ಗಳು ಜಲಾವೃತ
ಬೆಂಗಳೂರು: ಬೆಂಗಳೂರಲ್ಲಿ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಮಹಾದೇವಪುರ ವಲಯದಲ್ಲಿ ಹಲವು ಮನೆಗಳು ಹಾಗೂ ರಸ್ತೆಗಳು ಜಲಾವೃತಗೊಂಡು ರಸ್ತೆ ಸಂಚಾರ ಬಂದ್ ಆಗಿದೆ. ಫೋರಂ ವ್ಯಾಲ್ಯೂ ಮಾಲ್‌ನಲ್ಲಿ ನೀರು ತುಂಬಿದ್ದರಿಂದ ವೈಟ್‌ಫೀಲ್ಡ್ ಮುಖ್ಯ ರಸ್ತೆ ಹಾಗೂ ಸ್ಪೈಸ್ ಗಾರ್ಡನ್‌ನಲ್ಲಿ ಪ್ರವಾಹದಿಂದಾಗಿ ಒಎಆರ್ ಮತ್ತು ಪಾಣತ್ತೂರು ಆರ್‌ಯುಬಿಯಲ್ಲಿ ನೀರು ತುಂಬಿದ್ದರಿಂದ ಬಳಗೆರೆ ಮುಖ್ಯರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಬೆಳ್ಳಂದೂರು ರೈನ್ಬೋ ಡ್ರೈವ್, ಸರ್ಜಾಪುರ ಬಳಿ ಭಾರಿ ಟ್ರಾಫಿಕ್ ಜಾಮ್ ಆಗಿದೆ. ಮಹಾದೇವಪುರ ವ್ಯಾಪ್ತಿಯ 30ಕ್ಕೂ ಅಧಿಕ ಅಪಾರ್ಟ್ಮೆಂಟ್ಗಳ ಜಲಾವೃತವಾಗಿವೆ. ಮತ್ತೊಂದೆಡೆ, ಬಿಬಿಎಂಪಿ, ಅಗ್ನಿಶಾಮಕ ಇಲಾಖೆ ಮತ್ತು ನೂರಾರು ಸ್ವಯಂಸೇವಕರು ಈಗಾಗಲೇ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ನಗರದ ರಾಜಾಕಾಲುವೆಗಳಲ್ಲಿ ತುಂಬಿ ಹರಿಯುತ್ತಿವೆ. ಮಳೆ ನೀರಿನ ಜೊತೆಗೆ ನಗರದ ಕೊಳಚೆ ನೀರುಗಳು ರಾಜಕಾಲುವೆ ಸೇರಿವೆ. ಜೊತೆಗೆ ಕಸ ಕಡ್ಡಿಗಳು ಸಿಕ್ಕಿ ಬಿದ್ದಿದ್ದು, ನಗರದ ಒಳಕ್ಕೆ ನೀರು ನುಗ್ಗುತ್ತಿವೆ. ಬಸ್ಸು, ಕಾರು, ಬೈಕ್, ಲಾರಿ ಸೇರಿದಂತೆ ವಾಹನಗಳೆಲ್ಲ ಮಳೆ ನೀರಲ್ಲಿ ಮುಳುಗುತ್ತಿವೆ, ರಸ್ತೆ ಮಧ್ಯೆ ವಾಹನ ಸಿಲುಕಿಕೊಂಡು ಪ್ರಯಾಣಿಕರು, ಸಾರ್ವಜನಿಕರೇ ಅದನ್ನು ಎಳೆಯಬೇಕಾದ ಪರಿಸ್ಥಿತಿ ಇದೆ. ವಿವಿಧ ಪ್ರದೇಶಗಳಲ್ಲಿ ಇನ್ನೂ ಅನೇಕ ಮನೆಗಳು, ಕಾರುಗಳು, ದೀಪಸ್ತಂಭಗಳು ಜಲಾವೃತವಾಗಿವೆ.
ಸಂಜೆಯ ನಂತರ ನಿರಂತರವಾಗಿ ಮಳೆಯಾಗುತ್ತಿದ್ದು, ನಗರದ ಜೀವನ ಅಸ್ತವ್ಯಸ್ತವಾಗಿದೆ. ಮಹಾಮಳೆ ಗೆ ಜನರು ನಲುಗಿ ಹೋಗಿದ್ದಾರೆ. ಹಲವೆಡೆ ಮರದ ಕೊಂಬೆಗಳು ಮುರಿದು ರಸ್ತೆಗೆ ಬಿದ್ದಿದೆ. ಇದರ ನಡುವೆ ಈಗ ಮತ್ತೆ ಬೆಂಗಳೂರಿನಲ್ಲಿ ಭಾರೀ ಮಳೆ ಶುರುವಾಗಿದೆ. ಅದರಲ್ಲೂ ಆಫೀಸ್ ಬಿಡೋ ಟೈಮ್ ಆಗಿರೋದ್ರಿಂದ ವಾಹನ ಸವಾರರಿಗೆ ಕಿರಿಕಿರಿ ಆಗಿದೆ. ಮಳೆಯಲ್ಲಿ ಸಿಲುಕಿ ವಾಹನ ಸವಾರರು ಪರದಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಂಜೆ ಆಗ್ತಿದ್ದಂತೆ ಮತ್ತೆ ಮಳೆ ಆರಂಭವಾಗಿದೆ. ಪ್ರಮುಖ ಏರಿಯಾಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಾರ್ಪೋರೇಷನ್, ವಿಧಾನಸೌಧ, ಲಾಲ್ ಬಾಗ್, ಟೌನ್ ಹಾಲ್, ಮಾರ್ಕೆಟ್ ಸುತ್ತಲೂ ಮಳೆಯಾಗ್ತಿದೆ. ವಾಹನ ಸವಾರರು ಮಳೆಗೆ ಪರದಾಡುತ್ತಿದ್ದಾರೆ.