ಇತ್ತೀಚಿನ ಸುದ್ದಿ

ಪಿಒಪಿ ಗಣೇಶ ಮೂರ್ತಿ ತಯಾರಿಕೆ ನಿಷೇಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ನಗರದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳೆಲ್ಲ ಸೇರಿ ಪಾಲಿಕೆಯ 63 ಉಪ ವಿಭಾಗಗಳಲ್ಲಿ ಏಕಗವಾಕ್ಷಿ ಕೇಂದ್ರ ತೆರೆಯಲು ಸೂಚಿಸಲಾಗಿದೆ. ರಾಸಾಯನಿಕ ಬಣ್ಣಗಳು, ಥರ್ಮಕೋಲ್ ಹಾಗೂ ಪಿಒಪಿ ಗಣೇಶ ಮೂರ್ತಿ ತಯಾರಿಕೆ ನಿಷೇಧ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ಪಾಲಿಕೆಯ ಸಿದ್ಧತೆ ಕುರಿತು ತುಷಾರ್ ಗಿರಿನಾಥ್ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ವಾರ್ಡ್‌ಗೆ ಒಂದೇ ಗಣೇಶ ಕೂರಿಸಲು ಅನುಮತಿ ನೀಡಲಾಗಿತ್ತು. ಈ ವರ್ಷ ವಿಜೃಂಭಣೆಯ ಗಣೇಶೋತ್ಸವ ಮಾಡಲು ಸಾರ್ವಜನಿಕರು ಉತ್ಸುಕರಾಗಿದ್ದಾರೆ. ಹೀಗಾಗಿ, ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕಾದ ಬಿಬಿಎಂಪಿ, ಪೊಲೀಸ್ ಇಲಾಖೆ, ಬೆಸ್ಕಾಂ ಮತ್ತು ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಒಟ್ಟಿಗೆ ಸೇರಿ ಪಾಲಿಕೆಯ 63 ಉಪ ವಿಭಾಗಗಳಲ್ಲಿ ಏಕಗವಾಕ್ಷಿ ಕೇಂದ್ರ ಆರಂಭಿಸಲಾಗುವುದು. ಅನುಮತಿ ನೀಡುವ ವೇಳೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರಿಗೆ ಪಾಲನೆ ಮಾಡಬೇಕಾದ ನಿಯಮಾವಳಿ ಬಗ್ಗೆ ತಿಳಿಸಲಾಗುವುದು. ಜೊತೆಗೆ ಗಣೇಶ ನಿಮಜ್ಜನ ಮಾಡುವ ಸ್ಥಳದ ಬಗ್ಗೆಯೂ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದ್ದಾರೆ.

ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ನಗರದ ಕೇಂದ್ರ ಭಾಗದಲ್ಲಿರುವ 4 ಕೆರೆಗಳಾದ ಸ್ಯಾಂಕಿ ಕೆರೆ, ಹಲಸೂರು, ಯಡಿಯೂರು ಮತ್ತು ಹೆಬ್ಬಾಳ ಕೆರೆಯನ್ನು ಮೀಸಲಿಟ್ಟಿದ್ದೇವೆ. ಸಣ್ಣ ಕೆರೆ ಮತ್ತು ಕಲ್ಯಾಣಿಗಳಲ್ಲಿಯೂ ವ್ಯವಸ್ಥೆ ಮಾಡಿದ್ದೇವೆ. ವಾರ್ಡ್‌ವಾರು ಸಂಚಾರಿ ನಿಮಜ್ಜನ ಘಟಕ (ಮೊಬೈಲ್ ಟ್ಯಾಂಕ್) ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪಿಒಪಿ ಗಣೇಶ ಮಾರಾಟಕ್ಕೆ ದಂಡ: ರಾಸಾಯನಿಕ ಬಣ್ಣಗಳು, ಥರ್ಮಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣೇಶ ಮೂರ್ತಿ ತಯಾರಿಕೆಯನ್ನು ನಿಷೇಧಿಸಲಾಗಿದೆ. ಪರಿಸರ ಮಾರಕ ವಸ್ತುಗಳಿಂದ ಗಣೇಶ ತಯಾರಿಸುವ, ಮಾರಾಟ ಮಾಡುವ ಸ್ಥಳಗಳನ್ನು ಗುರುತಿಸಿ ದಂಡ ವಿಧಿಸಲಾಗುವುದು. ಗಣೇಶ ಮೂರ್ತಿ ಪ್ರತಿಷ್ಠಾಪನೆ, ನಿಮಜ್ಜನ, ಸ್ವಚ್ಛತೆ ಕಾಪಾಡುವ ಹಾಗೂ ಇನ್ನಿತರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಅನುಮತಿಯ ಆದೇಶ ಪತ್ರದಲ್ಲಿ ಈ ಎಲ್ಲ ವಿವರಣೆ ಸಮೇತ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ.

ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ನಿಷೇಧ: ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ ವೇಳೆ ಪಟಾಕಿ, ಸಿಡಿಮದ್ದು ಸಿಡಿಸುವುದು ಸೇರಿ ಜನರಿಗೆ ತೊಂದರೆ ಆಗುವ ಚಟುವಟಿಕೆಗಳಿಗೆ ಅವಕಾಶವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಕುರಿತ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ನಿಮಜ್ಜನ ಕೇಂದ್ರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ನಿಗದಿತ ಕಂಟೈನರ್‌ಗಳ ಮೂಲಕ ತಕ್ಷಣ ತೆರವುಗೊಳಿಸಲು ಸ್ವಚ್ಛತಾ ಸಿಬ್ಬಂದಿ ಹಾಗೂ ಸಾಗಣೆ ವಾಹನ ಸಜ್ಜುಗೊಳಿಸಲಾಗಿದೆ. ಕೆಲವೆಡೆ ಅಗತ್ಯವಿದ್ದಲ್ಲಿ ದೋಣಿಗಳ ವ್ಯವಸ್ಥೆ, ನೀರೆತ್ತುವ ಪಂಪ್‌ಗಳು, ಕ್ರೇನ್‌ಗಳ ವ್ಯವಸ್ಥೆ ಕೂಡ ಮಾಡಿದ್ದೇವೆ. ಹೆಚ್ಚಿನ ಜನರು ಗುಂಪು ಸೇರದಂತೆ ಕ್ರಮವಹಿಸಲು ಪೊಲೀಸ್​​ ಬಂದೋಬಸ್ತ್ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button