ನ್ಯೂಯಾರ್ಕ್ನಲ್ಲಿ ಭಾರತೀಯ ಲೇಖಕ ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ಹಲ್ಲೆ
ನ್ಯೂಯಾರ್ಕ್ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡುತ್ತಿದ್ದ ಭಾರತ ಮೂಲದ ಲೇಖಕ ಸಲ್ಮಾನ್ ರಶ್ದಿ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ದಾಳಿಕೋರ ಲೇಖಕ ಸಲ್ಮಾನ್ ರಶ್ದಿಯವರಿಗೆ ಅನೇಕ ಸಲ ಚಾಕುವಿನಿಂದ ಇರಿದಿದ್ದಾನೆ. ಈ ಸಮಾರಂಭದಲ್ಲಿ 75 ವರ್ಷದ ಸಲ್ಮಾನ್ ರಶ್ದಿ ಉಪನ್ಯಾಸ ನೀಡಬೇಕಿತ್ತು. ದಾಳಿಯಲ್ಲಿ ಗಾಯಗೊಂಡ ಸಲ್ಮಾನ್ ರಶ್ದಿ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು. ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆ.
ದಿ ಸಟಾನಿಕ್ ವರ್ಸಸ್ ಕಾದಂಬರಿ ಬರೆದ ನಂತರ ಹಲವು ವರ್ಷಗಳ ಕಾಲ ಇವರು ಜೀವ ಬೆದರಿಕೆ ಎದುರಿಸುತ್ತಿದ್ದರು. ಪ್ರತಿಷ್ಟಿತ ಬೂಕರ್ ಪ್ರಶಸ್ತಿ ವಿಜೇತ ರಶ್ದಿ, ಚೌಟಕಾ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ದಾಳಿ ನಡೆದಿದೆ. ವ್ಯಕ್ತಿಯೋರ್ವ ವೇದಿಕೆ ಮೇಲೆ ಓಡಿ ಬಂದು ಚಾಕುವಿನಿಂದ ಇರಿದಿದ್ದಾನೆ ಪ್ರತ್ಯಕ್ಷದರ್ಶಿಗಳು ಹೇಳಿದರು.
ಅಹ್ಮದ್ ಸಲ್ಮಾನ್ ರಶ್ದಿ ಭಾರತ ಮೂಲದ ಬ್ರಿಟಿಷ್-ಅಮೆರಿಕನ್ ಕಾದಂಬರಿಕಾರ. ಇವರ ಮಿಡ್ನೈಟ್ಸ್ ಚಿಲ್ಡ್ರನ್ (1981)ಗೆ ಬೂಕರ್ ಪ್ರಶಸ್ತಿ ಬಂದಿತ್ತು. ಜೂನ್ 19, 1947 ರಂದು ಕಾಶ್ಮೀರಿ ಮುಸ್ಲಿಂ ಕುಟುಂಬದಲ್ಲಿ ಜನಿಸಿರುವ ಇವರು, ಕೇಂಬ್ರಿಡ್ಜ್ನಲ್ಲಿ ವಿದ್ಯಾಭ್ಯಾಸ ಮುಗಿಸಿ ಪ್ರಸಿದ್ಧ ಬರಹಗಾರರಾಗಿ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿದ್ದಾರೆ.