ಮುಂಗಾರು ಅಬ್ಬರ; ಕರ್ನಾಟಕದಲ್ಲಿ ವಾಡಿಕೆಗಿಂತಲೂ ಅಧಿಕ ಮಳೆ!
ಮುಂಗಾರು ಮಳೆ ಕರ್ನಾಟಕದಾದ್ಯಂತ ಅಬ್ಬರಿಸಿದ ಪರಿಣಾಮ ಜೂನ್ 1ರಿಂದ ಜು.11ರ ಈವರೆಗೆ ವಾಡಿಕೆಗಿಂತ ಅಧಿಕ ಶೇ.17ರಷ್ಟು ಅಧಿಕ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಮಳೆ ಆರಂಭವಾದ ನಂತರ ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ಅಷ್ಟಾಗಿ ಮಳೆ ಆಗಿರಲಿಲ್ಲ. ನಂತರ ಕರಾವಳಿ ಸೇರಿದಂತೆ ಕೆಲವು ಕಡೆಗಳಲ್ಲಿ ಎರಡು ಮೂರು ದಿನ ಭಾರೀ ಪ್ರಮಾಣದಲ್ಲಿ ಮಳೆ ಆಗಿದ್ದು ಬಿಟ್ಟರೆ ಯಾವ ಭಾಗದಲ್ಲೂ ದಾಖಲೆಯ ಮಳೆ ಬಿದ್ದಿಲ್ಲ.
ಜೂನ್ ಅಂತ್ಯಕ್ಕೆ ಹವಾಮಾನದಲ್ಲಿ ಉಂಟಾದ ವೈಪರಿತ್ಯಗಳಿಂದಾಗಿ ರಾಜ್ಯಾದ್ಯಂತ ಮುಂಗಾರು ಮಳೆ ಚರುಕಾಯಿತು. ಇದರ ಪರಿಣಾಮವಾಗಿ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಮಲೆನಾಡಿನ ಭಾಗದಲ್ಲಿ ವಾಡಿಕೆಗಿಂತಲೂ ಅತ್ಯಧಿಕ ಮಳೆ ದಾಖಲಾಗಿದೆ ಎಂದು ‘ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ’ (ಕೆಎಸ್ಎನ್‌ಡಿಎಂಸಿ) ವರದಿ ಮಾಹಿತಿ ನೀಡಿದೆ.
ರಾಜ್ಯಕ್ಕೆ 42 ದಿನದಲ್ಲಿ ಶೇ.17ರಷ್ಟು ಅಧಿಕ ಮಳೆ
ಮುಂಗಾರು ಆರಂಭದ ತಿಂಗಳಾದ ಜೂನ್ 1ರಿಂದ ಜು.11ರ ಈವರೆಗಿನ ಈ 42ದಿನದಲ್ಲಿ ರಾಜ್ಯದಕ್ಕೆ ವಾಡಿಕೆ 292 ಮಿ.ಮೀ. ಮಳೆ ಆಗಬೇಕು. ಆದರೆ ಸದ್ಯ ವಾಡಿಕೆಗಿಂತಲೂ ಅಧಿಕ 340 ಮಿ. ಮೀ. ಮಳೆ ದಾಖಲಾಗಿದೆ. ಇದು ವಾಡಿಕೆಗಿಂತಲೂ ಶೇ.17ರಷ್ಟು ಅಧಿಕವಾಗಿದೆ. ಈ ಮೂಲಕ ಆರಂಭದಲ್ಲಿ ಉಂಟಾಗಿದ್ದ ಮಳೆ ಕೊರತೆಯನ್ನು ಜುಲೈ ಆರಂಭದ ಮಳೆ ನೀಗಿಸಿದೆ ಎಂದು ತಿಳಿದು ಬಂದಿದೆ. ಜುಲೈ ತಿಂಗಳುಪೂರ್ತಿ ರಾಜ್ಯಕ್ಕೆ ಉತ್ತಮ ಮಳೆ ನಿರೀಕ್ಷೆ ಇದೆ.
ವಿಭಾಗವಾರು ವಾಡಿಕೆಗಿಂತ ಅಧಿಕ ಮಳೆ ದಾಖಲು
ಮುಂಗಾರು ಆರಂಭವಾಗಿ ಕಳೆದ 42ದಿನದಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ ಉತ್ತಮ ಮಳೆ ದಾಖಲಾಗಿದೆ. ಈ ಪೈಕಿ ದಕ್ಷಿಣ ಒಳನಾಡಿನಲ್ಲಿ ವಾಡಿಕೆ 88.8 ಮಿ.ಮೀ. ಗಿಂತಲೂ 164.8 ಮಿ.ಮೀ. ಆಗುವ ಮೂಲಕ ಈ ಭಾಗದಲ್ಲಿ ಒಟ್ಟು ಶೇ.86ರಷ್ಟು ಹೆಚ್ಚು ಮಳೆ ಆಗಿದೆ. ಅದೇ ರೀತಿ ಉತ್ತರ ಒಳನಾಡಿನ ಭಾಗದಲ್ಲಿ ನಿರೀಕ್ಷಿತ ವಾಡಿಕೆ (139.4ಮಿ.ಮೀ.) ಮಳೆಗಿಂತಲೂ ಅಧಿಕ ಅಂದರೆ 156.7 ಮಿ.ಮೀ. ಮಳೆ ದಾಖಲಾಗಿದೆ. ಈ ಮೂಲಕ ಇಲ್ಲಿ ಶೇ.12ರಷ್ಟು ಅಧಿಕ ಮಳೆ ಬಿದ್ದಂತಾಗಿದೆ.
ಇನ್ನು ಮಲೆನಾಡಿನ ಭಾಗದಲ್ಲಿ ವಾಡಿಕೆ (575.7ಮಿ.ಮೀ.) ಮಳೆ ಬೀಳುವ ಬದಲು 600.6 ಮಿ.ಮೀ. ಹೆಚ್ಚು ಮಳೆ ಸುರಿದಿದೆ. ಇದರಿಂದಾಗಿ ಈ ಭಾಗದಲ್ಲಿ ಒಟ್ಟು ಶೇ. 4ರಷ್ಟು ಹೆಚ್ಚು ಮಳೆ ದಾಖಲಾದಂತಾಗಿದೆ. ಉಳಿದಂತೆ ಕರಾವಳಿ ಭಾಗದಲ್ಲಿಈ ಹನ್ನೊಂದು ದಿನದಲ್ಲಿ ಅತೀ ಹೆಚ್ಚು ಮಳೆ ಆಗಿದೆ. ಕರಾವಳಿಯಲ್ಲಿ ವಾಡಿಕೆ (1229.3) ಮಳೆಗೆ ಬದಲಾಗಿ 1381.2ಮಿ.ಮೀ. ಅತ್ಯಧಿಕ ಮಳೆ ಬೀಳುವ ಮೂಲಕ ಶೇ.12ರಷ್ಟು ಭಾರಿ ಮಳೆ ಕರಾವಳಿಯಲ್ಲಿ ದಾಖಲಾದಂತಾಗಿದೆ. ಈ ಅಂಕಿ ಅಂಶಗಳಿಂದಾಗಿ ಒಟ್ಟು 42 ದಿನದಲ್ಲಿ ರಾಜ್ಯದಲ್ಲಿ ಶೇ.17ರಷ್ಟು ಹೆಚ್ಚು ಮಳೆ ದಾಖಲಾಗಿದೆ.
11ದಿನ ಯಾವ ಭಾಗಕ್ಕೆ ಎಷ್ಟು ಮಳೆ ಆಗಿದೆ?
ಕಳೆದ 11 ದಿನದಲ್ಲಿ (ಜು.1-11ರವರೆಗೆ) ಸುರಿದ ಮಳೆಗೆ ರಾಜ್ಯದಲ್ಲಿ ಎಲ್ಲ ಭಾಗಗಳಲ್ಲೂ ಆವಾಂತರ ಸೃಷ್ಟಿಯಾಗಿದೆ. ಇದರಲ್ಲಿ ದಕ್ಷಿಣ ಒಳನಾಡಿನಲ್ಲಿ ವಾಡಿಕೆ 23.3 ಮಿ. ಮೀ. ಮಳೆಗಿಂತಲೂ ಅಧಿಕವಾಗಿ 45.2 ಮಿ.ಮೀ. ಬಿದ್ದಿದೆ. ಇದು ವಾಡಿಕೆಗಿಂತ ಶೇ. 94 ರಷ್ಟು ಅಧಿಕವಾಗಿದೆ. ಅದೇ ರೀತಿ ಉತ್ತರ ಒಳನಾಡಿನಲ್ಲಿ ವಾಡಿಕೆ (36.4ಮಿ.ಮೀ.) ಗೂ ಅಧಿಕವಾಗಿ 66.7 ಮಿ. ಮೀ. ಮಳೆ ಸುರಿಯುವ ಮೂಲಕ ಈ ಭಾಗಕ್ಕೆ ಶೇ.83 ರಷ್ಟು ಹೆಚ್ಚು ಮಳೆ ಆದಂತಾಗಿದೆ.
ಇನ್ನು ಮಲೆನಾಡಿನ ಭಾಗದಲ್ಲಿ ವಾಡಿಕೆ ಮಳೆ (212.7ಮಿ.ಮೀ.) ಗಿಂತಲೂ ಹೆಚ್ಚು ಎಂದರೆ ಒಟ್ಟು 411.2 ಮಿ. ಮೀ. ವರ್ಷಧಾರೆ ದಾಖಲಾಗುವ ಮೂಲಕ ಇಲ್ಲಿ ಶೇ.93ರಷ್ಟು ಮಳೆ ಹೆಚ್ಚಾಗಿದೆ. ಉಳಿದಂತೆ ಕರಾವಳಿಗೆ ವಾಡಿಕೆ (397.8 ಮಿ. ಮೀ.) ಗಿಂತಲೂ 847.9 ಮಿ. ಮೀ. ಮಳೆ ಆಗಿದೆ. ಈ ಮೂಲಕ ಕರಾವಳಿ ಭಾಗ ಶೇ.113ರಷ್ಟು ಅತ್ಯಧಿಕ ಮಳೆ ಕಂಡಿದೆ ಎಂದು ಕೆಎಸ್ಎನ್‌ಡಿಎಂಸಿ ವರದಿ ಮಾಡಿದೆ.
ಈ ಎಲ್ಲ ಭಾಗಗಳನ್ನು ಒಳಗೊಂಡ ಕರ್ನಾಟಕದಲ್ಲಿ ಕಳೆದ 11 ದಿನದಲ್ಲಿ ವಾಡಿಕೆ ಮಳೆ 92 ಮಿ.ಮೀ. ಗಿಂತಲೂ ಅಧಿಕ ಅಂದರೆ 184.1 ಮಿ.ಮೀ. ವರ್ಷಧಾರೆ ಬಿದ್ದಿದೆ. ಇದರಿಂದ ಕೇವಲ ಹನ್ನೊಂದು ದಿನದಲ್ಲಿ ರಾಜ್ಯವು ಒಟ್ಟು ಶೇ.99.7ರಷ್ಟು ಹೆಚ್ಚು ಮಳೆ ಕಂಡಿದೆ ಎಂದು ತಿಳಿದು ಬಂದಿದೆ.
ಜು.17ರವರೆಗೂ ರಾಜ್ಯದಲ್ಲಿ ಭಾರಿ ಮಳೆಯ ಎಚ್ಚರಿಕೆ
ರಾಜ್ಯದಲ್ಲಿ ಜು.17ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗಗಳ ಹಲವೆಡೆ ಭಾರೀ ಮಳೆ ಬೀಳಲಿದೆ. ಹೀಗಾಗಿ ಜು.14ರವರೆಗೆ ‘ಆರೆಂಜ್ ಅಲರ್ಟ್’ ನಂತರ ಜು.17ರವರೆಗೆ ‘ಯೆಲ್ಲೋ ಅಲರ್ಟ್’ ಕೊಡಲಾಗಿದೆ.
ಅದೇ ರೀತಿ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣದಿಂದ ಭಾರೀ ಪ್ರಮಾಣ ಮಳೆ ಬೀಳುವ ಸಂಭವವಿದ್ದು, ಅವುಗಳಿಗೆ ‘ಯೆಲ್ಲೋ ಅಲರ್ಟ್’ ಕೊಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.