ಚಂದ್ರಶೇಖರ್ ಗುರೂಜಿ ಸಾವಿನ ಸುತ್ತ, ಅನುಮಾನದ ಹುತ್ತ!
ಖ್ಯಾತ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ್ ಗುರೂಜಿಯನ್ನು ಹುಬ್ಬಳ್ಳಿಯ ಹೋಟೆಲ್ನಲ್ಲಿ ಮಂಗಳವಾರ ಅವರ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಮಾಜಿ ಉದ್ಯೋಗಿಗಳೇ ಚಾಕುವಿನ ಚುಚ್ಚಿ ಹತ್ಯೆ ಮಾಡಿದ್ದರು.
ಈ ಹತ್ಯೆ ರಾಜ್ಯಾದ್ಯಂತ ದೊಡ್ಡ ಸುದ್ದಿ ಮಾಡಿದೆ. ಇದೀಗ ಗುರೂಜಿ ಕೊಲೆಗೆ ಬೇನಾಮಿ ಆಸ್ತಿ ಮಾಡಿದ್ದು ಕಾರಣವಾಗಿರಬಹುದೇ? ಎಂಬ ಅನುಮಾನ ಕಾಡಲಾರಂಭಿಸಿದೆ. ಗುರೂಜಿಯನ್ನು ಕೊಲೆ ಮಾಡಿದ ಆರೋಪಿಗಳಲ್ಲಿ ಒಬ್ಬನಾಗಿರುವ ಮಹಾಂತೇಶ್ ಶಿರೂರ ಹೆಸರಲ್ಲಿ ಗುರೂಜಿ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದಾರೆ ಎಂಬ ಸುದ್ದಿ ಇದೆ.
ಆರೋಪಿ ಮಹಾಂತೇಶ್ ಮತ್ತು ಮಂಜುನಾಥ ಇಬ್ಬರೂ ಗುರೂಜಿ ಅವರ ಸರಳ ಜೀವನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದರು. ಮಹಾಂತೇಶ್, ವನಜಾಕ್ತಿ ಎಂಬುವವರನ್ನು ವಿವಾಹವಾಗಿದ್ದ. ಆಕೆಯೂ ಕೂಡ ಸರಳ ಜೀವನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.
ಇನ್ನು ಚಂದ್ರಶೇಖರ್ ಗುರೂಜಿ ವನಜಾಕ್ಷಿಗೆ ಆಪ್ತರಾಗಿದ್ದರು ಎಂದು ತಿಳಿದುಬಂದಿದ್ದು, ಆಕೆಯ ಹೆಸರಿನಲ್ಲಿ ಗೋಕುಲ ರಸ್ತೆಯ ಗುರೂಜಿ ಅಪಾರ್ಟ್ಮೆಂಟ್ ಸೇರಿದಂತೆ ಹಲವು ಕಡೆ ಆಸ್ತಿಗಳನ್ನು ಮಾಡಿದ್ದರು ಎಂಬ ಮಾಹಿತಿ ಇದೆ. ಆರೋಪಿಗಳನ್ನು ನೌಕರಿಯಿಂದ ತೆಗೆದ ನಂತರ ಆಸ್ತಿ ವಾಪಸ್ ಬರೆದುಕೊಡುವಂತೆ ಗುರೂಜಿ ಕೇಳಿದಾಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಸಂಸ್ಥೆಯಿಂದ ಹೊರ ಹಾಕಿದ್ದ ಗುರೂಜಿ
ಇನ್ನು ಆರೋಪಿಗಳು ಸರಳ ಜೀವನ ಸಂಸ್ಥೆಯಲ್ಲಿ ಕೆಲಸ ಮಾಡುವ ವೇಳೆಯೂ ಹಣಕಾಸಿನ ವಿಚಾರದಲ್ಲಿ ಅವ್ಯವಹಾರ ನಡೆಸಿದ್ದರಿಂದ ಅವರನ್ನು ಗುರೂಜಿ ಕೆಲಸದಿಂದ ತೆಗೆದು ಹಾಕಿದ್ದರು. ಜೊತೆಗೆ ಹಣವನ್ನು ಮರಳಿಸಲು ಹೇಳಿದ್ದರು ಎನ್ನಲಾಗಿದೆ. ಜೊತೆಗೆ ಮಹಾಂತೇಶ್ ಹೆಸರಿನಲ್ಲಿ ಹಾಗೂ ಆತನ ಪತ್ನಿ ವನಜಾಕ್ಷಿ ಹೆಸರಿನಲ್ಲಿಯೂ ಆಸ್ತಿ ಮಾಡಿದ್ದಾರೆ ಎನ್ನಲಾಗಿದ್ದು, ಆ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಗುರೂಜಿ ಸೂಚಿಸಿದ್ದರು. ಕಳೆದ ಎರಡು ವರ್ಷಗಳಿಂದ ಪದೇ ಪದೇ ಅದಕ್ಕಾಗಿ ಒತ್ತಡ ಹಾಕುತ್ತಿದ್ದರು. ಆಸ್ತಿ ತಮ್ಮ ಹೆಸರಿಗೆ ಮಾಡಿಕೊಡದಿದ್ದರೆ ಕಾನೂನು ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದರು ಎಂದು ತಿಳಿದುಬಂದಿದೆ.
ಆಸ್ತಿಗೋಸ್ಕರ ಕೊಲೆ ಮಾಡಿರುವ ಶಂಕೆ
ಗುರೂಜಿಯ ಒತ್ತಾಯಕ್ಕೆ ಬೇಸತ್ತಿದ್ದ ಮಹಾಂತೇಶ್ ಗುರೂಜಿ ಜೀವಂತವಿಲ್ಲದಿದ್ದರೆ ಆಸ್ತಿ ಪೂರ್ತಿ ತನ್ನದಾಗಬಹುದು ಎಂಬ ಲೆಕ್ಕಾಚಾರದಲ್ಲಿ ಹತ್ಯೆಗೆ ಸಂಚು ರೂಪಿಸಿರಬಹುದು ಎಂಬುದು ಶಂಕೆ. ಅದಕ್ಕಾಗಿಯೇ ಆತ ಕಳೆದ ಒಂದು ತಿಂಗಳಿನಿಂದಲೂ ಕೊಲೆ ಮಾಡಲು ಸ್ಕೆಚ್ ಹಾಕಿಕೊಂಡಿದ್ದ, ಕೊನೆಗೆ ಗುರೂಜಿಯಿಂದಲೇ ಕರೆ ಬಂದಾಗ, ಭೇಟಿ ಮಾಡುವ ಸಂದರ್ಭದಲ್ಲಿ ಆಯುಧ ಇಟ್ಟುಕೊಂಡೇ ಹೋಗಿದ್ದ ಮಹಾಂತೇಶ್, ಮಂಜುನಾಥ್ ಜೊತೆಗೂಡಿ ಗುರೂಜಿಯನ್ನು ಬರ್ಬರ ಹತ್ಯೆ ಮಾಡಿ ಪರಾರಿಯಾಗಿದ್ದ.
ಗಂಡನ ಹೆಸರಿನಲ್ಲಿ ಆಸ್ತಿ ಮಾಡಿರುವ ಬಗ್ಗೆ ಗೊತ್ತಿಲ್ಲ
ಆದರೆ ಆಸ್ತಿ ಬರೆದುಕೊಡುವ ವಿಚಾರಕ್ಕೆ ಕೊಲೆ ಮಾಡಲಾಗಿದೆಯೇ? ಎಂಬುದರ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಮಹಾಂತೇಶ್ ಪತ್ನಿ ವನಜಾಕ್ಷಿ, ‘ನಮಗೂ ಗುರೂಜಿಗೂ ಹಣಕಾಸಿ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಗಲಾಟೆ ನಡೆದಿರಲಿಲ್ಲ. ಅಪಾರ್ಟ್ಮೆಂಟ್ ನನ್ನ ಹೆಸರಿನಲ್ಲಿದೆ ಎನ್ನುವುದು ಸುಳ್ಳು, ನಾನು ಇರುವ ಪ್ಲಾಟ್ ಅನ್ನ ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಖರೀದಿಸಿದ್ದೇವೆ’ ಎಂದು ತಿಳಿಸಿದ್ದಾರೆ.
‘ನಾನು ಮತ್ತು ನನ್ನ ಪತಿ ಸರಳ ಜೀವನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆವು. 2005ರಲ್ಲಿ ನಾನು ಸಂಸ್ಥೆ ಸೇರಿದ್ದೆ, ಅದರೆ 2019ರಲ್ಲಿ ನನ್ನನ್ನು ಮುಂಬೈಗೆ ವರ್ಗಾಯಿಸಿದರು. ಅಲ್ಲಿಗೆ ಹೋಗಲಾರದೆ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ಪತಿ 2016ರಲ್ಲೇ ಕೆಲಸ ಬಿಟ್ಟಿದ್ದರು. ಆದರೆ ಅವರು ಕೆಲಸ ಬಿಟ್ಟಿದ್ದೇಕೆ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಪತಿ ಹೆಸರಿನಲ್ಲಿ ಗುರೂಜಿ ಆಸ್ತಿ ಮಾಡಿರುವ ಬಗ್ಗೆಯೂ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದು ಹೇಳಿದ್ದಾರೆ.
ಗುರೂಜಿ ಸಾವಿನ ಸುತ್ತ, ಅನುಮಾನದ ಹುತ್ತ
ಇನ್ನು ಮತ್ತೊಬ್ಬ ಆರೋಪಿ ಮಂಜುನಾಥ್ ಹೆಸರಲ್ಲೂ ಕೂಡ ಗುರೂಜಿ ಆಸ್ತಿ ಮಾಡಿದ್ದರು, ಅವರು ವಾಪಸ್ ಬರೆದುಕೊಡು ಎಂದು ಕೇಳಿದಾಗ ವಾಪಸ್ ಬರೆದುಕೊಟ್ಟಿದ್ದ ಎಂದು ಮಂಜುನಾಥ್ ಸಹೋದರ ಸೋಮಲಿಂಗ ಮಾಹಿತಿ ನೀಡಿದ್ದಾರೆ.
ಈ ಕೊಲೆಗೆ ಮೇಲು ನೋಟಕ್ಕೆ ಬೇನಾಮಿ ಆಸ್ತಿ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದ್ದರೂ, ಹಾಡಹಗಲೇ ಅಷ್ಟು ಜನರ ಮುಂದೆ ರಾಜಾರೋಷವಾಗಿ ಕೊಲೆ ಮಾಡಿರುವುದನ್ನು ನೋಡಿದಾಗ, ಕೊಲೆ ಆಸ್ತಿಗೋಸ್ಕರ ನಡೆದಿದಿಯೋ? ಅಥವಾ ಬೇರೆ ಕಾರಣಕ್ಕೆ ನಡೆದಿದಿಯೋ? ಎನ್ನುವ ಅನುಮಾನ ಮೂಡುತ್ತಿದೆ. ಕೊಲೆಗೆ ನೈಜ ಕಾರಣ ಪೊಲೀಸರ ತನಿಖೆಯಿಂದಲೇ ತಿಳಿಯಬೇಕಾಗಿದೆ.