ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ಗೆ 14 ದಿನಗಳ ನ್ಯಾಯಾಂಗ ಬಂಧನ
ಲಂಚ ಪಡೆದ ಆರೋಪದ ಮೇಲೆ ಬಂಧಿಸಲಾಗಿದ್ದ ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಾಳಿ ಮಾಡಿ ಲಂಚ ಸ್ವೀಕರಿಸುವಾಗ ಕಚೇರಿಯ ಅಧಿಕಾರಿಗಳನ್ನು ಬಂಧಿಸಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಲಂಚವನ್ನು ಕೊಟ್ಟಿದ್ದೇ ಎಂದು ದೂರುದಾರ ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್‌ರನ್ನು ವಿಚಾರಣೆ ನಡೆಸಿದ್ದ ಎಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.
ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ಗೆ ಕೆಲ ದಿನಗಳ ಹಿಂದೆ ವಿಚಾರಣೆ ಹಾಜರಾಗುವಂತೆ ನೊಟೀಸ್ ನೀಡಿಲಾಗಿತ್ತು. ಜಿಲ್ಲಾಧಿಕಾರಿಗಳು ಸ್ವತಃ ವಿಚಾರಣೆಗೆ ಹಾಜರಾಗಿ ಎಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ತನಿಖೆಯ ವೇಳೆಯಲ್ಲಿ ಜಿಲ್ಲಾಧಿಕಾರಿ ಲಂಚದ ಬಗ್ಗೆ ಸಾಕ್ಷ್ಯಾಧಾರ ಲಭ್ಯವಾದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಮಂಜುನಾಥ್‌ನನ್ನು ಬಂಧಿಸಿದ್ದಾರೆ.
ಮೇ 21 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಉಪ ತಹಶೀಲ್ದಾರ್ / ಮ್ಯಾನೇಜರ್ ಮಹೇಶ್ ಗುತ್ತಿಗೆ ನೌಕರ ಚೇತನ್ ಆಲಿಯಾಸ್ ಚಂದ್ರು ದೂರುದಾರರಿಂದ 5 ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳು ತೋಡಿದ್ದ ಹಳ್ಳಕ್ಕೆ ಸಿಕ್ಕಿಬಿದ್ದಿದ್ದರು. ಈ ವೇಳೆ ಜಿಲ್ಲಾಧಿಕಾರಿ ಪಾತ್ರದ ಬಗ್ಗೆ ಆರೋಪ ಕೇಳಿಬಂದಿತ್ತು.
ಬೇಗೂರಿನ ನಿವಾಸಿಯೊಬ್ಬರು ಆನೇಕಲ್‌ನ ಕೂಡ್ಲು ಗ್ರಾಮದಲ್ಲಿ 38 ಗುಂಟೆ ಜಮೀನು ಹೊಂದಿದ್ದರು. ಈ ಸಂಬಂಧ ಡಿಸಿ ನ್ಯಾಯಾಲಯದಲ್ಲಿ ವ್ಯಾಜ್ಯವಿತ್ತು. ಅರ್ಜಿದಾರರ ಅರ್ಜಿ ಕ್ಲಿಯರ್ ಮಾಡಿಕೊಡಬೇಕಾದರೆ ಆರೋಪಿ ಮಹೇಶ್ ಆರಂಭದಲ್ಲಿ15 ಲಕ್ಷಕ್ಕೆ ಲಂಚಕ್ಕೆ ಬೇಡಿಕೆಯಿಟ್ಟು ನಂತರ 5 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದರು. ಜಮೀನು ವಿಚಾರ ಸಂಬಂಧ ದೂರುದಾರರು ಎರಡು ಬಾರಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.
ಎಸಿಬಿ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ದಾಳಿ
ಎಸಿಬಿ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿತ್ತು. ಆಜಾಂ ಪಾಷ ಎಂಬುವವರು ಕೊಟ್ಟ ದೂರಿನ ಮೇರೆಗೆ ಎಸಿಬಿ ಟ್ರಾಪ್ ಮಾಡಿತ್ತು. ಜಮೀನಿಗೆ ಸಂಬಂಧಿಸಿದಂತೆ ಎಸಿ ನ್ಯಾಯಾಲಯ ತೀರ್ಪು ನೀಡಿದ್ದು ಡಿಸಿ ನ್ಯಾಯಾಲಯಕ್ಕೆ ವರ್ಗಾವಣೆಯಾಗಿರುತ್ತದೆ. ಈ ಕೇಸ್ ಫೈಲ್ ಅನ್ನು ಕ್ಲಿಯರ್ ಮಾಡುವ ಸಲುವಾಗಿ ಹದಿನೈದು ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಆರೋಪಿಸಲಾಗಿದೆ.
ಹದಿನೈದು ಲಕ್ಷದ ಪೈಕಿ 5 ಲಕ್ಷವನ್ನು ಲಂಚವಾಗಿ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ನೇರವಾಗಿಯೇ ಹಿಡಿದಿದ್ದರು. ಈ ವೇಳೆ ಮಾತನಾಡಿದ್ದ ಆಜಂ ಪಾಷ ಡಿಸಿ ಮಂಜುನಾಥ್ ವಿರುದ್ಧ ಆರೋಪ ಮಾಡಿದ್ದರು.