ಪಿಎಸ್ಐ ನೇಮಕಾತಿ ಹಗರಣ: ಎಡಿಜಿಪಿ
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿಯನ್ನು ಬಂಧಿಸಲಾಗಿದೆ. ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ”ಉಪ್ಪು ತಿಂದವರು ನೀರು ಕುಡಿಯಲೇಬೇಕು” ಎಂದಿದ್ದಾರೆ. ಆದರೆ, ಪಿಎಸ್‌ಐ ಹಗರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಸಿಕ್ಕಿಬಿದ್ದರುವುದರಿಂದ ರಾಜಕಾರಣಿಗಳ ಬುಡವೂ ಶೇಕ್ ಆಗುತ್ತಿದೆ.
ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಅಕ್ರಮದ ವಹಿವಾಟು ಸಿಐಡಿ ಬಗೆದಷ್ಟೂ ಒಂದೊಂದೆ ಭ್ರಷ್ಟಾಚಾರದ ಮುಖವಾಡ ಬೆಳಕಿಗೆ ಬರುತ್ತಿದೆ ನೇಮಕಾತಿ ವಿಭಾಗದ ಕಚೇರಿಯಲ್ಲೇ ನಡೆದಿರುವ ಅನುಮಾನಕ್ಕೆ ಎಡಿಜಿಪಿ ಬಂಧನ ಪುಷ್ಟಿಯನ್ನು ನೀಡಿದೆ.
ಪರೀಕ್ಷೆಗೆ ಒಂದು ದಿನ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ ಜತೆಗೆ, ಡೀಲ್ ಕುದುರಿದ ನಂತರ ಅಭ್ಯರ್ಥಿಗಳು ಬರೆದ ಒಎಂಆರ್ ಶೀಟ್ಗಳನ್ನು ಅಧಿಕಾರಿಗಳ ಕಚೇರಿಯಲ್ಲೇ ತಿದ್ದಿರುವುದಕ್ಕೆ ಸಿಐಡಿಗೆ ತನಿಖೆಯ ಸಂದರ್ಭದಲ್ಲಿ ಸಾಕ್ಷಾಧಾರ ಸಿಕ್ಕಿದೆ.
ಹಗರಣ ಬೆಳಕಿಗೆ ಬಂದ ಕೂಡಲೇ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್‌ರನ್ನು ಎತ್ತಂಗಡಿ ಮಾಡಲಾಗಿತ್ತು. ಪಿಎಸ್ಐ ಅಕ್ರಮ ನೇಮಕ ಪ್ರಕರಣದಲ್ಲಿ ಡಿವೈಎಸ್‌ಪಿ, ಎಸಿಪಿ, ಇನ್ಸ್ಪೆಕ್ಟರ್ ದರ್ಜೆಯ ಕೆಲವು ಅಧಿಕಾರಿಗಳೇ ಬ್ರೋಕರ್ ಆಗಿ ಕಾರ್ಯನಿರ್ವಹಿಸಿರುವ ಸಂಗತಿಯನ್ನು ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಸಿಐಡಿ ವಿಚಾರಣೆ ವೇಳೆ ಬಾಯಿಬಿಟಟ್ಟಿದ್ದ.
ಕೆಲವು ಪೊಲೀಸ್ ಅಧಿಕಾರಿಗಳೇ ನನ್ನ ಬಳಿಗೆ ಪಿಎಸ್‌ಐ ಗಿರಾಕಿಗಳನ್ನು ಕಳುಹಿಸಿ, ಇವರಿಗೆ ಎಲ್ಲ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಆ ಗಿರಾಕಿಗಳು ನೇರವಾಗಿ ನನಗೆ ಹಣ ನೀಡಿರಲಿಲ್ಲ. ಬದಲು, ಪೊಲೀಸ್ ಅಧಿಕಾರಿಗಳ ಮೂಲಕವೇ ಸಂದಾಯ ಮಾಡಿದ್ದರು,” ಎಂಬ ಸಂಗತಿಯನ್ನು ಆರೋಪಿ ರುದ್ರಗೌಡ ತನಿಖೆ ವೇಳೆ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿದು ಬಂದಿತ್ತು.
ಏನೆಲ್ಲ ಸಾಕ್ಷ್ಯ ಲಭ್ಯ?
ಬೆಂಗಳೂರಿನ ಸಿಐಡಿ ಕಚೇರಿ ಆವರಣದಲ್ಲಿರುವ ಪೊಲೀಸ್ ನೇಮಕಾತಿ ವಿಭಾಗದಲ್ಲೇ ಅಕ್ರಮ ನಡೆದಿರುವುದಕ್ಕೆ ಕೆಲ ಸಾಕ್ಷ್ಯಗಳು ಲಭಿಸಿವೆ. 12 ಅಭ್ಯರ್ಥಿಗಳ ತೀವ್ರ ವಿಚಾರಣೆ ಸಂದರ್ಭದಲ್ಲಿ ನೇಮಕಾತಿ ವಿಭಾಗದಲ್ಲಿರುವ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಪುತ್ರರ ಹೆಸರನ್ನು ಹೇಳಿದ್ದರು ಎನ್ನಲಾಗಿತ್ತು. ಅಭ್ಯರ್ಥಿಗಳ ಹೇಳಿಕೆ ಆಧರಿಸಿ ತನಿಖೆ ಮುಂದುವರೆಸಲಾಗಿತ್ತು.ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ ಎಲ್ಲ ಅಭ್ಯರ್ಥಿಗಳ ಒಎಂಆರ್ ಶೀಟ್ ಕಾರ್ಬನ್ ಪ್ರತಿ ಹಾಗೂ ಮೂಲ ಉತ್ತರ ಪತ್ರಿಕೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಭ್ಯರ್ಥಿಗಳಿಂದ ತೆಗೆದುಕೊಂಡಿರುವ ಒಎಂಆರ್ ಶೀಟ್ ಕಾರ್ಬನ್ ಪ್ರತಿಯಲ್ಲಿರುವ ಪ್ರಶ್ನೆಗಳ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಮೂಲ ಉತ್ತರ ಪತ್ರಿಕೆಯಲ್ಲಿ ಉತ್ತರ ತಿದ್ದಿರುವುದು ಬೆಳಕಿಗೆ ಬಂದಿತ್ತು.
ಅಕ್ರಮದಲ್ಲಿ ಅಧಿಕಾರಿಗಳ ಶಾಮೀಲು
ಅರ್ಜಿ ಆಹ್ವಾನಿಸಿದ ಬಳಿಕ ಏಜೆಂಟ್ಗಳು ಡೀಲ್ ಕುದುರಿಸಿದ್ದಾರೆ. ನಂತರ ರಾಜಕೀಯ ಮುಖಂಡರು, ಅಧಿಕಾರಿಗಳ ಮುಖೇನ ಅಕ್ರಮ ಎಸಗಿದ್ದಾರೆ. ಹಣ ಕೊಟ್ಟವರ ಹೆಸರು, ನೋಂದಣಿ ಸಂಖ್ಯೆ, ಮೊಬೈಲ್ ನಂಬರ್ ಪಡೆದ ಏಜೆಂಟ್ಗಳು ನೇಮಕಾತಿ ವಿಭಾಗದ ಪ್ರಧಾನ ಕಚೇರಿಗೆ ಪಟ್ಟಿ ಕಳುಹಿಸಿದ್ದಾರೆ. ಬೇಕಾದ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿ ನೋಂದಣಿ ಸಂಖ್ಯೆ ಬರುವಂತೆ ಮಾಡಿದ್ದಾರೆ. ಪರೀಕ್ಷೆಯ ಹಿಂದಿನ ದಿನವೇ ಅಧಿಕಾರಿಗಳೇ ಪ್ರಶ್ನೆ ಪತ್ರಿಕೆಯನ್ನು ಮೊಬೈಲ್ನಲ್ಲಿ ಸೆರೆಹಿಡಿದು ಏಜೆಂಟ್ಗಳಿಗೆ ಕಳುಹಿಸಿದ್ದಾರೆ. ಅದಕ್ಕೆ ಸರಿ ಉತ್ತರ ಕೊಟ್ಟು ಮಾರನೇ ದಿನ ನಿಗದಿತ ಪರೀಕ್ಷಾ ಕೊಠಡಿಯಲ್ಲಿ ಅಭ್ಯರ್ಥಿಗಳಿಗೆ ಬ್ಲೂಟೂತ್ನಲ್ಲಿ ಉತ್ತರ ಬರೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಎಡಿಜಿಪಿ ಬಂಧನಕ್ಕೂ ಇದೇ ಕಾರಣ
ಮೊದಲೇ ಸೂಚಿಸಿರುವಂತೆ ಅಭ್ಯರ್ಥಿಗಳು ಒಎಂಆರ್ ಶೀಟ್ ಖಾಲಿ ಬಿಟ್ಟು ಬಂದಿದ್ದಾರೆ. ಕೇಂದ್ರದ ಮೇಲ್ವಿಚಾರಕರು ಶೀಟ್ ಪ್ಯಾಕ್ ಮಾಡಿ ಸೀಲ್ ಮಾಡಿ ಪ್ರಧಾನ ಕಚೇರಿಗೆ ರವಾನಿಸಬೇಕು. ಆದರೆ, ಕೆಲವು ಸೆಂಟರ್ಗಳಲ್ಲಿ ಮೇಲ್ವಿಚಾರಕರೇ ಅಭ್ಯರ್ಥಿಯ ಒಎಂಆರ್ ಶೀಟ್ ತೆಗೆದು ಸರಿ ಉತ್ತರ ಬರೆದು ನಂತರ ಕಳುಹಿಸಿದ್ದಾರೆ.ಕೆಲ ಕೇಂದ್ರಗಳಲ್ಲಿ ಖಾಲಿ ಉತ್ತರ ಪತ್ರಿಕೆ ನೇಮಕಾತಿ ವಿಭಾಗಕ್ಕೆ ಬಂದ ಮೇಲೆ ನಿಗದಿತ ಅಭ್ಯರ್ಥಿಗಳ ಒಎಂಆರ್ ಶೀಟ್ ಬದಲಾವಣೆ ಮತ್ತು ತಿದ್ದುಪಡಿ ಮಾಡಿದ್ದಾರೆ. ಪ್ರತಿ ಅಭ್ಯರ್ಥಿಗಳ ಕಾರ್ಬನ್ ಶೀಟ್, ಒಎಂಆರ್ ಶೀಟ್ ಪಡೆದು ತಾಳೆ ಮಾಡಿದಾಗ ಸಾಕಷ್ಟು ವ್ಯತ್ಯಾಸ ಕಂಡು ಬಂದಿವೆ. ಬೇರೆ ಪೆನ್ ಬಳಸಿರುವುದು, ಬರವಣಿಗೆ ಬದಲಾಗಿರುವುದು, ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಿರುವುದರಿಂದ ಸಿಕ್ಕಿಬಿದ್ದಿದ್ದರು. ಈ ಒಎಂಆರ್ ತಿದ್ದುಪಡಿಗೆ ಅವಕಾಶವನ್ನು ಮಾಡಿಕೊಟ್ಟ ಆರೋಪ ಎಡಿಜಿಪಿ ಅಮೃತ್ ಪೌಲ್ ಮೇಲಿದೆ.
ರಾಜಕಾರಣಿಗಳಿಗೂ ಅಕ್ರಮದ ಉರುಳು..?
ನೇಮಕಾತಿ ವಿಭಾಗದಲ್ಲಿ 50 & 60 ಸಿಬ್ಬಂದಿ ಇದ್ದಾರೆ. ಈ ಹಿಂದೆ ಕಾನ್ಸ್ಟೇಬಲ್ ಹುದ್ದೆ ನೇಮಕ ಹಗರಣ ಬೆಳಕಿಗೆ ಬಂದಾಗ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದ ಎಸ್ಡಿಎ ಮತ್ತು ಎಡಿಎ ಸಿಬ್ಬಂದಿ ಎತ್ತಂಗಡಿ ಮಾಡಲಾಗಿತ್ತು. ಆದರೆ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಿರಲಿಲ್ಲ. ಕೆಲ ಅಧಿಕಾರಿಗಳು ರಾಜಕೀಯ ಪ್ರಭಾವ ಬೀರಿ ಅಲ್ಲೇ ಉಳಿದುಕೊಂಡಿದ್ದರು.12 ವರ್ಷಗಳಿಂದ ನೇಮಕಾತಿ ವಿಭಾಗದಲ್ಲೇ ಸೇವೆ ಸಲ್ಲಿಸುತ್ತಿದ್ದ ಡಿವೈಎಸ್‌ಪಿ ಶಾಂತಕುಮಾರ್ ಎಲ್ಲ ರಾಜಕಾರಣಿಗಳಿಗೂ ಆತ್ಮೀಯರಾಗಿದ್ದರು ಎಂದು ಹೇಳಲಾಗುತ್ತಿದೆ. ಇದೇ ಡೀಲ್‌ನ ಮೂಲ ವ್ಯಕ್ತಿ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ಬಿಜೆಪಿಯ ಪ್ರಭಾವಿ ರಾಜಕಾರಣಿಯ ಹೆಸರು ಅಕ್ರಮದಲ್ಲಿ ಕೇಳಿಬಂದಿದ್ದು ಎನ್ನಲಾಗಿದೆ. ಕೆಲವು ರಾಜಕಾರಣಿಗಳು ಅಕ್ರಮದ ಉರುಳಲ್ಲಿ ಸಿಕ್ಕಿ ಬೀಳಬಹುದು ಎನ್ನಲಾಗುತ್ತಿದೆ.