ಸಾರ್ವಜನಿಕ ಉದ್ದಿಮೆಗಳ ಇಲಾಖೆ ರದ್ದುಗೊಳಿಸಲು ಆದೇಶ!
ಕರ್ನಾಟಕ ಸರ್ಕಾರ ಆಡಳಿತ ವೆಚ್ಚ ತಗ್ಗಿಸಲು ವಿವಿಧ ಇಲಾಖೆಗೆಳ ರದ್ದು/ ವಿಲೀನದ ಕುರಿತು ಈ ಹಿಂದೆಯೇ ಚಿಂತನೆ ನಡೆಸಿತ್ತು. ಈ ಕುರಿತು ವರದಿ ನೀಡಲು ಸಚಿವ ಸಂಪುಟ ಉಪ ಸಮಿತಿಯನ್ನು ಸಹ ರಚನೆ ಮಾಡಿತ್ತು.
ಈ ಸಂಪುಟ ಉಪ ಸಮಿತಿಯ ಶಿಫಾರಸಿನ ಅನ್ವಯ ಸಾರ್ವಜನಿಕ ಉದ್ದಿಮೆಗಳ ಇಲಾಖೆ ರದ್ದುಗೊಳಿಸಲು ಆದೇಶಿಸಿದೆ. ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ನಾಗಪ್ಪ. ಎಸ್. ಪರೀಟ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಸಚಿವ ಸಂಪುಟ ಉಪ ಸಮಿತಿಯ ನಡಾವಳಿ 18/2/2021. ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಕಡತ ಸಂಖ್ಯೆ ಡಿಪಿಇ/62/ಎಂಇಎ/2020 ಶಿಫಾರಸುಗಳನ್ನು ಉಲ್ಲೇಖಿಸಿ ಈ ಆದೇಶ ನೀಡಲಾಗಿದೆ. ಕರ್ನಾಟಕ ಸರ್ಕಾರ ಸಚಿವಾಲಯದ ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರದ್ದುಗೊಳಿಸುವ ಬಗ್ಗೆ ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.
ಪ್ರಸ್ತಾವನೆ; ಸರ್ಕಾರದ ವಿವಿಧ ಇಲಾಖೆ/ ಕಚೇರಿಗಳ ವಿಲೀನ/ ರದ್ದುಗೊಳಿಸುವಿಕೆ, ಮಂಜೂರಾಗಿರುವ ವಿವಿಧ ವೃಂದ ಬಲದ ವೈಜ್ಞಾನಿಕ ಪರಿಷ್ಕರಣೆ/ ಹುದ್ದೆಗಳ ರದ್ದತಿ/ ಮರು ವಿನ್ಯಾಸ ಇವುಗಳ ಕುರಿತು ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ರಚಿಸಿದ ಸಚಿವ ಸಂಪುಟ ಉಪ ಸಮಿತಿಯು ಕರ್ನಾಟಕ ಸರ್ಕಾರ ಸಚಿವಾಲಯದ ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರದ್ದು ಪಡಿಸಲು ಶಿಫಾರಸು ಮಾಡಿರುತ್ತದೆ
ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರದ್ದು ಪಡಿಸಲು ಶಿಫಾರಸು ಮಾಡಿದ ಕಡತ ಹಾಗೂ ಸದರಿ ಇಲಾಖೆಯ ವಿಷಯಗಳನ್ನು ಕರ್ನಾಟಕ ಸಚಿವಾಲಯದಲ್ಲಿನ ಬೇರೆ ಇಲಾಖೆಗೆ ವರ್ಗಾಯಿಸುವ ಬಗ್ಗೆ ಕಡತದಲ್ಲಿ ಶಿಫಾರಸು ಮಾಡಲಾಗಿತ್ತು. ಈ ಪ್ರಸ್ತಾವೆಯನ್ನು ವಿವರವಾಗಿ ಪರಿಶೀಲನೆ ನಡೆಸಿ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರದ ಆದೇಶ;
ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 145 ಸಉಸೇ 2022, ಬೆಂಗಳೂರು. ದಿನಾಂಕ25/05/2022. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಕರ್ನಾಟಕ ಸಚಿವಾಲಯದ ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರದ್ದುಗೊಳಿಸಿ ಆದೇಶಿಸಿದೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯಲ್ಲಿ ನಿರ್ವಹಿಸಲಾಗುತ್ತಿದ್ದ ವಿಷಯಗಳನ್ನು ಆರ್ಥಿಕ ಇಲಾಖೆಗೆ ವರ್ಗಾಯಿಸಿ ಆದೇಶಿಸಿದೆ.