ಪ್ರಥಮ ಪಿಯುಸಿ ದಾಖಲಾಗುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!
ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸುವ ಮೂಲಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶುಭಸುದ್ದಿಯನ್ನು ನೀಡಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ದಾಖಲೆಯ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ. ಜೊತೆಗೆ ಸಿಬಿಎಸ್ಇ ಮತ್ತು ಐಸಿಎಸ್‌ಸಿಯ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿಲ್ಲ. ಇದರಿಂದಾಗಿ ಪ್ರಥಮ ಪಿಯುಸಿ ದಾಖಲಾತಿಯ ದಿನಾಂಕವನ್ನು ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶವನ್ನು ನೀಡಿದೆ.
2022-23ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ದಾಖಲಾತಿಯ ದಿನಾಂಕವನ್ನು ದಂಡ ಶುಲ್ಕವಿಲ್ಲದೇ ದಿನಾಂಕ 15/06/2022ವರಗೂ ಮತ್ತು ದಂಡ ಶುಲ್ಕದೊಂದಿದೆ 30/06/2022 ವೆರಗೂ ನಿಗದಿ ಪಡಿಸಲಾಗಿತ್ತು. ಆದರೆ ಸಿಬಿಎಸ್ಇ ಹಾಗೂ ಐಸಿಎಸ್‌ಸಿ ಬೋರ್ಡ್‌ಗಳಲ್ಲಿ ಹತ್ತನೇ ತರಗತಿಯ ಫಲಿತಾಂಶ ಪ್ರಕಟಣೆ ತಡವಾಗುತ್ತಿರುವುದರಿಂದ ಅನೇಕ ಪೋಷಕರು ವಿದ್ಯಾರ್ಥಿಗಳು ದಾಖಲಾತಿ ದಿನಾಂಕವನ್ನು ವಿಸ್ತರಿಸುವಂತೆ ಮನವಿಯನ್ನು ಮಾಡಿದ್ದರು.
ಇನ್ನು ಹೊಸ ಕಾಲೇಜು ಮತ್ತು ಹೊಸ ಸಂಯೋಜನೆಗಳಿಗೆ ಅನುಮತಿ ನೀಡುವ ಕಾರ್ಯ ಪ್ರಗತಿಯಲ್ಲಿರುವುದರಿಂದ ದಂಡ ಶುಲ್ಕರಹಿತವಾಗಿ ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು 16/06/2022 ರಿಂದ 11/07/2022ವೆರಗೂ ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟನೆ
ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಕೇವಲ ಪ್ರಥಮ ಪಿಯುಸಿಗೆೆ ಮಾತ್ರ ಅನ್ವಯವಾಗಲಿದೆ. ಇನ್ನು ದ್ವಿತೀಯ ಪಿಯುಸಿಗೆ ನೀಡಲಾಗಿರುವ ಮಾರ್ಗಸೂಚಿ ಅನ್ವಯ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ದ್ವಿತೀಯ ಪಿಯುಸಿ ದಾಖಲಾತಿ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಕಾಲೇಜು ವಿದ್ಯಾರ್ಥಿಗಳಿಗೆ ಹೊಸ ಅನುಭವ
ಇನ್ನು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಇಂದಿನಿಂದ (ಜೂನ್ 09) ತರಗತಿಗಳು ಪ್ರಾರಂಭವಾಗುತ್ತಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕವನ್ನು ಪಡೆದು ಪ್ರಥಮ ಪಿಯುಸಿಗೆ ಹೆಜ್ಜೆಯಿಡುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಜೀವನದಿಂದ ಕಾಲೇಜು ಜೀವನಕ್ಕೆ ಪ್ರವೇಶ ಪಡೆಯುವ ಹೊಸ ಅನುಭವ ಸಿಗಲಿದೆ. “”ಶಾಲೆಯಿಂದ ಕಾಲೇಜಿಗೆ ಹೋಗುತ್ತಿರುವುದು ಸಂತೋಷವನ್ನು ನೀಡಿದೆ. ಹೊಸ ಸ್ನೇಹಿತರು ಹೊಸ ವಾತಾವರಣದ ಅನುಭವ ಸಿಗಲಿದೆ. ಕಾಲೇಜಿನಲ್ಲಿ ಚೆನ್ನಾಗಿ ಓದುವ ಹಂಬಲವನ್ನಿಟ್ಟುಕೊಂಡಿದ್ದೇನೆ” ಎಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ ತಿಳಿಸಿದ್ದಾಳೆ.
ಜೂನ್ 27 ಜುಲೈ 4ರ ವರೆಗೂ ಪರೀಕ್ಷೆ
ಎಸ್‌ಎಸ್ಎಲ್‌ಸಿ 2021-22 ಸಾಲಿನಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳ ಪೂರಕ ಪರೀಕ್ಷೆ ಜೂನ್ 27 ಜುಲೈ 4ರವರೆಗೂ ನಡೆಯಲಿದೆ. ಈ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೂ ಪ್ರಥಮ ಪಿಯುಸಿಗೆ ಸೇರಲು ಅನುಕೂಲವಾಗಲಿದೆ.
ಜುಲೈ 25ರಂದು ಕೊನೆಯ ದಿನಾಂಕ
*11/07/2022 – ದಂಡ ಶುಲ್ಕವಿಲ್ಲದೇ ದಾಖಲಾತಿ ವಿಸ್ತರಿಸಿದ ಕೊನೆಯ ದಿನ
*18/07/2022 -ವಿಳಂಬ ದಾಖಲಾತಿ 670 ರೂ. ದಂಡ ಶುಲ್ಕದೊಂದಿಗೆ ವಿಸ್ತರಿಸಿದ ಕೊನೆೆಯ ದಿನ.
* 25/07/2022 – ವಿಶೇಷ ದಂಡ ಶುಲ್ಕ 2890ರೊಂದಿಗೆ ದಾಖಲಾತಿ ವಿಸ್ತರಿಸಿದ ಕೊನೆಯ ದಿನವಾಗಿರುತ್ತದೆ.