ಹವಾಮಾನ ಆಧಾರಿತ ಬೆಳೆವಿಮೆ; ಅಡಿಕೆ, ದಾಳಿಂಬೆ, ವೀಳ್ಯದೆಲೆ ಸೇರ್ಪಡೆ
ದಾವಣಗೆರೆ ಜಿಲ್ಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು 2022-23ನೇ ಸಾಲಿಗೆ ಮರುವಿನ್ಯಾಸಗೊಳಿಸಲಾಗಿದೆ. ಈ ಕುರಿತು ಜಿಲ್ಲಾಡಳಿತ ಮಾಹಿತಿ ನೀಡಿದ್ದು, ರೈತರು ಯೋಜನೆ ಅನುಕೂಲ ಪಡೆಯಬೇಕು ಎಂದು ಕರೆ ನೀಡಿದೆ.
ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಮರುವಿನ್ಯಾಸಗೊಳಿಸಲಾಗಿದ್ದು, ಹಲವಾರು ಬೆಳೆಗಳನ್ನು ತಾಲೂಕುವಾರು ಸೇರಿಸಲಾಗಿದೆ. ರೈತರು ತಮ್ಮ ತಾಲೂಕಿನಲ್ಲಿ ಬೆಲೆ ವಿಮೆಗೆ ಅರ್ಹವಾಗಿರುವುದನ್ನು ಬೆಳೆದಿದ್ದರೆ ಪ್ರಿಮಿಯಮ್ ಪಾವತಿಸಿ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ
ಜಿಲ್ಲೆಯ ಜಗಳೂರು ತಾಲೂಕಿಗೆ ಅಡಿಕೆ, ದಾಳಿಂಬೆ ಬೆಳೆಗಳನ್ನು ಅಧಿಸೂಚಿಸಲಾಗಿದೆ. ರೈತರಿಗೆ ವಿಮೆ ಮಾಡಿಸಲು ಅವಕಾಶವಿದೆ ಹವಾಮಾನ ವೈಪರೀತ್ಯ/ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆಗಳಿಗೆ ವಿಮೆ ಮೂಲಕ ಪರಿಹಾರ ಪಡೆಯಬಹುದಾಗಿದೆ.
ರೈತರು ಯೋಜನೆ ಅನುಕೂಲ ಪಡೆಯಲು ತಮ್ಮ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಸೇವಾ ಕೇಂದ್ರಗಳಲ್ಲಿ, ವಿಮೆಯ ಪ್ರಿಮಿಯಮ್ ಪಾವತಿಸಿ ವಿಮಾದಾರರಾಗಬಹುದು. ವಿಮೆ ಮೊತ್ತ ಪಾವತಿಸಲು ಜೂನ್ 30 ಕೊನೆಯ ದಿನ. ಎಸ್‌ಬಿಐ ಜನರಲ್ ಇನ್ಸುರೆನ್ ಕಂಪನಿಯನ್ನು, ವಿಮಾ ಸಂಸ್ಥೆಯನ್ನಾಗಿ ನಿಗದಿಪಡಿಸಲಾಗಿದೆ.
ಪ್ರಿಮಿಯಮ್ ಮೊತ್ತ;
ರೈತರು ತೋಟಗಾರಿಕೆ ಬೆಳೆಯಾದ ಅಡಿಕೆಗೆ ಪ್ರತಿ ಹೆಕ್ಟೇರ್‌ಗೆ ರೂ. 1,28,000 ವಿಮಾ ಮೊತ್ತಕ್ಕೆ 6400 ರೂ., ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ. 1,27,000 ವಿಮಾ ಮೊತ್ತಕ್ಕೆ 6350 ರೂ. ಪಾವತಿಸಬೇಕಾಗಿದೆ. ಯೋಜನೆಗೆ ಅರ್ಜಿ ಸಲ್ಲಿಸುವಾಗ ಪ್ರಸಕ್ತ ಸಾಲಿನ ಪಹಣಿ (RTC), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಅನ್ನು ನೀಡಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಹೋಬಳಿವಾರು ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆಗಳು; ವೆಂಕಟೇಶ್ವರನಾಯ್ಕ ಎಲ್. ಕಸಬ ಮತ್ತು ಸೊಕ್ಕೆ ಹೋಬಳಿ 8904721145. ಪ್ರಸನ್ನ, ಕುಮಾರ್ ಜಿ. ಹೆಚ್. ಬಿಳಿಚೋಡು ಹೋಬಳಿ 7625078047 ಯನ್ನು ಸಂಪರ್ಕಿಸಬಹುದಾಗಿದೆ ಪ್ರಕಟಣೆ ತಿಳಿಸಿದೆ.
ಹೊನ್ನಾಳಿ ತಾಲೂಕು;
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಡಿ ತೋಟಗಾರಿಕೆ ಬೆಳೆಗಳಿಗೆ ವಿಮಾ ನೋಂದಣಿ ಮಾಡಿಸಲು ಸರ್ಕಾರ ಆದೇಶ ಹೊರಡಿಸಿದೆ. ಇದರ ಅನ್ವಯ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿಗೆ ಸಂಬಂಧಿಸಿದಂತೆ ಫಸಲು ಬಿಡುತ್ತಿರುವ ಅಡಿಕೆ ಮತ್ತು ವೀಳ್ಯೆದೆಲೆ ಬೆಳೆಗಳು ಯೋಜನೆಗೆ ಒಳಪಟ್ಟಿರುತ್ತವೆ. ಅಡಿಕೆ, ವಿಳ್ಯೇದೆಲೆ ಬೆಳೆಗಳ ವಿಮೆಗೆ ಪ್ರಿಮಿಯಮ್ ತುಂಬಲು ಜೂನ್ 30 ಕೊನೆಯ ದಿನವಾಗಿರುತ್ತದೆ. ರೈತರು ವಿವಿಧ ಬೆಳೆಗಳಿಗೆ ಕಟ್ಟಬೇಕಾದ ವಿಮಾ ಕಂತುಗಳನ್ನು ಸಮೀಪದ ಯಾವುದೇ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಮೊತ್ತ ಪಾವತಿಸಬಹುದೆಂದು ತಿಳಿಸಲಾಗಿದೆ.
ರೈತರಿಗೆ ಅನ್ಯಾಯವಾದರೆ ಕ್ರಿಮಿನಲ್ ಕೇಸ್;
2022ರ ಮುಂಗಾರು ಹಂಗಾಮು ಶುರುವಾಗಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಲು ತಯಾರಿ ಆರಂಭಿಸಿದ್ದಾರೆ. ಬೀಜ, ಗೊಬ್ಬರ ಕೊಳ್ಳಲು ರೈತರು ಅಂಗಡಿಗಳಿಗೆ ಬಂದಾಗ ಅವರುಗಳು ಕೇಳಿದ ಬಿತ್ತನೆ ಬೀಜ ಗೊಬ್ಬರ ನೀಡದೆ, ಹೆಚ್ಚುವರಿಯಾಗಿ ಬೇರೆ ಬೇರೆ ರಸಗೊಬ್ಬರಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರೆ ಅಂತಹ ಅಂಗಡಿ ಮಾಲೀಕರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಕೃಷಿ ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಾತನಾಡಿದ ಕೃಷಿ ನಿರ್ದೇಶಕ ಎಂ. ಎಸ್. ದಿವಾಕರ್, “ಬಿತ್ತನೆ ಬೀಜವನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು” ಎಂದು ಮನವಿ ಮಾಡಿದರು. “ಒಂದು ವೇಳೆ ಕಾಳಸಂತೆಯಲ್ಲಿ ಅಥವ ಅಧಿಕೃತ ಮಾರಾಟಗಾರರಲ್ಲದವರು ಕಳಪೆ ಬೀಜ ಮಾರುವುದು ಕಂಡುಬಂದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದರು. “ನ್ಯಾನೊ ಗೊಬ್ಬರವನ್ನು ಮೇಲುಗೊಬ್ಬರವಾಗಿ ಕೊಡಬಹುದು, ನ್ಯಾನೊ ಗೊಬ್ಬರವನ್ನೂ ಖರೀದಿಸುವಂತೆ ರೈತರನ್ನು ಒತ್ತಾಯಿಸುವಂತಿಲ್ಲ, ರಸಗೊಬ್ಬರ, ಬಿತ್ತನೆ ಬೀಜ ಸಾಕಷ್ಟು ಲಭ್ಯವಿದೆ. ರೈತರು ಆತಂಕಪಡುವ ಅಗತ್ಯವಿಲ್ಲ” ಎಂದು ಹೇಳಿದರು. ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ,
“ರೈತರು ಕೇವಲ ಒಂದೇ ಗೊಬ್ಬರ ಅಥವಾ ಕಾಂಪ್ಲೆಕ್ಸ್ ಬಳಸದೇ ಸಮತೋಲಿತ ಗೊಬ್ಬರಗಳನ್ನು ಬಳಸಬೇಕು. ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬೆಳೆಗಳಿಗೆ ಅಗತ್ಯ ಹಾಗೂ ಪೋಷಕಾಂಶ ಭರಿತ ಗೊಬ್ಬರಗಳನ್ನು ಬಳಸಿ” ಎಂದು ಕರೆ ನೀಡಿದರು. “ರಸಗೊಬ್ಬರ, ಬಿತ್ತನೆ ಬೀಜ ವ್ಯಾಪಾರಸ್ಥರು ರೈತರಿಂದ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯಬಾರದು. ಕೋವಿಡ್ ಸಂದರ್ಭದಲ್ಲಿ ನಿಮ್ಮ ಎಲ್ಲಾ ಅಹವಾಲುಗಳನ್ನು ಪರಿಹರಿಸಿದ್ದೇವೆ, ಹಾಗಾಗಿ ರೈತ ಸ್ನೇಹಿಯಾಗಿ ನಡೆದುಕೊಳ್ಳಿ” ಎಂದರು.