ಬೆಂಗಳೂರು: ರಸ್ತೆ ಗುಂಡಿ ಮುಚ್ಚಲು ಚದರ ಮೀಟರ್ ಗೆ 551 ರೂ. ನೀಡಲು ಪಾಲಿಕೆ ಒಪ್ಪಿಗೆ
ಅಮೆರಿಕನ್ ರೋಡ್ ಟೆಕ್ನಾಲಜೀಸ್ ಸಂಸ್ಥೆ ಗೆ ಪೈಥಾನ್ ಯಂತ್ರದಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಚದರ ಮೀಟರ್‌ಗೆ 551 ರೂ. ಮೂಲ ದರ ನೀಡಲು ಬಿಬಿಎಂಪಿ ಒಪ್ಪಿದೆ.ಈ ವಿಷಯವನ್ನು ಅಮೆರಿಕನ್ ರೋಡ್ ಟೆಕ್ನಾಲಜೀಸ್ ಸಂಸ್ಥೆ ಮತ್ತು ಬಿಬಿಎಂಪಿ ಎರಡೂ ಸೋಮವಾರ ಹೈಕೋರ್ಟಗೆ ತಿಳಿಸಿದವು.
ಅದನ್ನು ದಾಖಲಿಸಿಕೊಂಡ ನ್ಯಾಯಾಲಯ, ಮಳೆಗಾಲ ಆರಂಭವಾಗಿದೆ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿ, ಸಮಸ್ಯೆಗಳನ್ನು ಹೊತ್ತುಕೊಂಡು ಕೋರ್ಟ್ ಮುಂದೆ ಬರಬೇಡಿ ಎಂದು ಬಿಬಿಎಂಪಿ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪಡೆದಿರುವ ಅಮೆರಿಕನ್ ರೋಡ್ ಟೆಕ್ನಾಲಜೀಸ್ ಸಂಸ್ಥೆ (ಎಆರ್‌ಟಿಸಿ)ಗೆ ಸೂಚಿಸಿದೆ..
ನಗರದ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಎಆರ್‌ಟಿಸಿ ಪರ ವಕೀಲರು, ಪೈಥಾನ್ ಯಂತ್ರದಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಚದರ ಮೀಟರ್‌ಗೆ 551 ರೂ. ಮೂಲ ದರಕ್ಕೆ ಒಪ್ಪಿಗೆ ಇದೆ ಎಂದು ತಿಳಿಸಿ ಅಫಿಡವಿಟ್ ಸಲ್ಲಿಸಿದರು. ಎಆರ್‌ಟಿಸಿ ನಮೂದಿಸಿರುವ ದರಕ್ಕೆ ಕಾಮಗಾರಿ ನೀಡಲು ಮುಖ್ಯ ಆಯುಕ್ತರು ಒಪ್ಪಿಕೊಂಡಿದ್ದಾರೆ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಅದಕ್ಕೆ, ಹಾಗಿದ್ದಾಗ ತಕ್ಷಣ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭಿಸಿ ಎಂದು ಎಆರ್‌ಟಿಸಿಗೆ ಸೂಚನೆ ನೀಡಿತು. ಅಲ್ಲದೇ ಕಾಮಗಾರಿ ಒಪ್ಪಂದ, ಕಾರ್ಯಾದೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಬಿಬಿಎಂಪಿಗೆ ನ್ಯಾಯಪೀಠ ಹೇಳಿತು. ಮಳೆಗಾಲ ಆರಂಭವಾಗಿದೆ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿ, ಸಮಸ್ಯೆಗಳನ್ನು ಹೊತ್ತು ಬರಬೇಡಿ ಎಂದು ಎಆರ್‌ಟಿಸಿ ಹಾಗೂ ಬಿಬಿಎಂಪಿಗೆ ತಾಕೀತು ಮಾಡಿದ ನ್ಯಾಯಪೀಠ, ರಸ್ತೆ ಗುಂಡಿ ಮುಚ್ಚಿದ ಕಾರ್ಯಪ್ರಗತಿ ವರದಿಯನ್ನು 10 ದಿನಗಳಲ್ಲಿ ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಚೀಫ್ ಇಂಜಿನಿಯರ್ ಪ್ರಹ್ಲಾದ್ ಬದಲಾವಣೆ: ಚೀಫ್ ಇಂಜಿನಿಯರ್ ಪ್ರಹ್ಲಾದ್ ಅವರು ಅಮೆರಿಕನ್ ರೋಡ್ ಟೆಕ್ನಾಲಜೀಸ್ ಸಂಸ್ಥೆಯ ನಿರ್ದೇಶಕರ ಮೇಲೆ ದೈಹಿಕ ಹಲ್ಲೆ ನಡೆಸಿರುವ ಬಗ್ಗೆ ಮುಖ್ಯ ಆಯುಕ್ತರಿಗೆ ದೂರು ನೀಡಿರುವ ಮಾಹಿತಿಯನ್ನು ಎಆರ್‌ಟಿಸಿ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಅದನ್ನು ಪರಿಶೀಲಿಸಿದ ನ್ಯಾಯಪೀಠ, ದೂರು ಮತ್ತು ವಿವಿರಗಳು ಸಮಧಾನ ತಂದಿದೆ. ಕಾಮಗಾರಿ ವಹಿಸಿಕೊಂಡ ಕಂಪನಿಯ ನಿರ್ದೇಶಕರ ಮೇಲೆ ದೈಹಿಕ ಹಲ್ಲೆ ನಡೆಸಿದ ಮುಖ್ಯ ಇಂಜಿನಿಯರ್ ಪ್ರಹ್ಲಾದ್‌ಗೆ ಮುಂದುವರಿಸಬಾರದು. ಎಆರ್‌ಟಿಸಿ ನಡೆಸುವ ಕಾಮಗಾರಿಯನ್ನು ಪ್ರಹ್ಲಾದ್ ಮೇಲುಸ್ತುವಾರಿ ಮಾಡುವಂತಿಲ್ಲ. ಮುಖ್ಯ ಆಯುಕ್ತರು ಬೇರೊಬ್ಬ ಮುಖ್ಯ ಇಂಜಿನಿಯರ್‌ಗೆ ಈ ಜವಾಬ್ದಾರಿ ವಹಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿತು. ಬಿಬಿಎಂಪಿ ಪರ ವಕೀಲರು, ಈಗಾಗಲೇ ಪ್ರಹ್ಲಾದ್ ಅವರನ್ನು ಬದಲಾಯಿಸಿ ಬೇರೊಬ್ಬ ಚೀಫ್ ಇಂಜಿನಿಯರ್ ನಿಯೋಜಿಸಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅಲ್ಲದೇ ಪ್ರಹ್ಲಾದ್ ವಿರುದ್ಧದ ದೂರಿನ ಬಗ್ಗೆ ಹಿರಿಯ ಐಎಎಸ್ ಅಧಿಕಾರಿಯಿಂದ ತನಿಖೆಗೆ ಆದೇಶಿಸಲಾಗಿದೆ ಎಂದರು.