ವೈಟ್ ಟಾಪಿಂಗ್ ಕಾಮಗಾರಿ: ಮಲ್ಲೇಶ್ವರದಲ್ಲಿ ಪರ್ಯಾಯ ಮಾರ್ಗ
ಕಳೆದ ಎರಡು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ವೈಟ್ ಟಾಪಿಂಗ್ ಕಾಮಗಾರಿಗೆ ಮತ್ತೆ ಚಾಲನೆ ಸಿಕ್ಕಿದ್ದು, ನಗರದ ಹಲವು ಭಾಗಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಬಿಬಿಎಂಪಿ ಚುನಾವಣೆ ವೇಳೆಗೆ ವೈಟ್ ಟಾಪಿಂಗ್ ಕಾಮಗಾರಿ ಮುಗಿಸಲು ಯೋಜನೆ ರೂಪಿಸಲಾಗಿದ್ದು, ಕೆಲಸಕ್ಕೆ ವೇಗ ನೀಡಲಾಗಿದೆ.
ಈಗ ರಾಜಧಾನಿ ಬೆಂಗಳೂರಿನ ಮುಖ್ಯ ಪ್ರದೇಶವಾಗಿರುವ ಮಲ್ಲೇಶ್ವರ 18ನೇ ಕ್ರಾಸ್‌ನಿಂದ ಸಿಎನ್‌ಆರ್ ರಾವ್ ಅಂಡರ್ ಪಾಸ್‌ವರೆಗೆ ಟಿ. ಚೌಡಯ್ಯ ರಸ್ತೆಯ ಒಂದು ಭಾಗದಲ್ಲಿ ಬಿಬಿಎಂಪಿ ಸೋಮವಾರದಿಂದ ವೈಟ್ ಟಾಪಿಂಗ್ ಮಾಡಲು ಕೆಲಸ ಆರಂಭಿಸುತ್ತಿದೆ
ವೈಟ್ ಟಾಪಿಂಗ್ ಕೆಲಸ ಮುಗಿಯುವವರೆಗೆ ಟಿ ಚೌಡಯ್ಯ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್‌ನಿಂದ ಸಿಎನ್‌ಆರ್ ರಾವ್ ಅಂಡರ್ ಪಾಸ್‌ವರೆಗೆ ಮತ್ತು ಕಾವೇರಿ ಥಿಯೇಟರ್ ಜಂಕ್ಷನ್‌ನಿಂದ ಯಶವಂತಪುರದವರೆಗೆ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದು ಪೂರ್ವ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.
ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿ
ಕಾವೇರಿ ಥಿಯೇಟರ್ ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳುವ ಲಘು ವಾಹನಗಳು ಟಿ ಚೌಡಯ್ಯ ರಸ್ತೆ, ಮಲ್ಲೇಶ್ವರ 18ನೇ ಕ್ರಾಸ್‌ನಲ್ಲಿ ಎಡ ತಿರುವು ಪಡೆದು ಸಂಪಿಗೆ ರಸ್ತೆಯಲ್ಲಿ ಸಂಚರಿಸಿ ಮಾರ್ಗೋಸಾ ರಸ್ತೆ 18ನೇ ಅಡ್ಡ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಮಾರ್ಗೋಸಾ ರಸ್ತೆ 17ನೇ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ ಮತ್ತೆ ಬಲಕ್ಕೆ ತಿರುಗಿದರೆ ಮಲ್ಲೇಶ್ವರ 8ನೇ ಮುಖ್ಯರಸ್ತೆಯ ಮೂಲಕ ಯಶವಂತಪುರ ಸರ್ಕಲ್ ತಲುಪಬಹುದು. ಕಾವೇರಿ ಥಿಯೇಟರ್ ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳುವ ಭಾರಿ ವಾಹನಗಳು ರಮಣ ಮಹರ್ಷಿ ರಸ್ತೆ ಮೂಲಕ ಮೇಕ್ರಿ ವೃತ್ತ ತಲುಪಿ ಎಡ ತಿರುವು ಪಡೆದು ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ಮೂಲಕ ಸಿಎನ್‌ಆರ್ ರಾವ್ ವೃತ್ತಕ್ಕೆ ಬಂದು ಯಶವಂತಪುರ ವೃತ್ತದ ಕಡೆಗೆ ಸಾಗಬೇಕು.
ಚುನಾವಣೆ ಸಮೀಪಿಸುತ್ತಿದ್ದಂತೆ ಕಾಮಗಾರಿಗೆ ಚುರುಕು
ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವೈಟ್ ಟಾಪಿಂಗ್ ಕಾಮಗಾರಿ ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಚುರುಕು ಪಡೆದಿದೆ. ಈಗಾಗಲೇ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿರುವ ಜನತೆಗೆ ವೈಟ್ ಟಾಪಿಂಗ್ ಕಾಮಗಾರಿ ಮುಗಿಯುವವರೆಗೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಸಿಗುವುದಿಲ್ಲ. ವೈಟ್‌ಟಾಪಿಂಗ್ ಕಾಮಗಾರಿಯಿಂದಾಗಿ 20 ರಿಂದ 30 ವರ್ಷ ರಸ್ತೆಗಳು ಬಾಳಿಕೆ ಬರುತ್ತವೆ, ಪದೇ ಪದೆ ಅಥವಾ ಪ್ರತಿ ವರ್ಷ ಕಾಮಗಾರಿ, ದುರಸ್ತಿಯ ಅಗತ್ಯ ಇರಲ್ಲ ಎಂದು ಬಿಬಿಎಂಪಿ ಹೇಳಿದೆ.
ಶೇಕಡಾ 80 ರಷ್ಟು ಕಾಮಗಾರಿ ಪೂರ್ಣ
ಈಗಾಗಲೇ ನಗರಾದ್ಯಂತ ಪ್ರಮುಖ ರಸ್ತೆಗಳಲ್ಲಿ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಶೇಕಡಾ 80 ರಷ್ಟು ಪೂರೈಸಲಾಗಿದೆ. ಒಟ್ಟಾರೆ, 90 ಕಿ. ಮೀ. ಉದ್ದದರಸ್ತೆಯಲ್ಲಿ 81 ಕಿ. ಮೀ. ಉದ್ದದ ರಸ್ತೆಗಳ ಕಾಮಗಾರಿ ಸಂಪೂರ್ಣಗೊಂಡಿದೆ. ಗಾಂಧಿ ಬಜಾರ್, ಕನಕನಪಾಳ್ಯ, ಮೈಸೂರು ರಸ್ತೆಯಿಂದ-ವಿಶ್ವವಿದ್ಯಾಲಯ ಒಳಗಡೆ ಪ್ರವೇಶ ಕಾಮಗಾರಿಗಳು ಮುಗಿದಿವೆ. 2018 ರಲ್ಲಿ ವೈಟ್‌ಟಾಪಿಂಗ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತಾದರೂ ಕೊರೊನಾ ಲಾಕ್‌ಡೌನ್, ಕಾರ್ಮಿಕರ ಅಭಾವದಿಂದಾಗಿ ಒಂದಷ್ಟು ದಿನ ಕಾಮಗಾರಿಗೆ ಅಡ್ಡಿಯಾಗಿತ್ತು. ಮುಖ್ಯಮಂತ್ರಿ ನಗರೋತ್ಥಾನದಡಿ ಲಭ್ಯವಿದ್ದ ಅನುದಾನವನ್ನೂ ವೈಟ್ ಟಾಪಿಂಗ್ ಯೋಜನೆಗೆ ಬಳಸಲಾಗಿದ್ದು, ಇತ್ತೀಚಿಗೆ ಕಾಮಗಾರಿ ಚುರುಕುಗೊಂಡಿದೆ.
ಅನುದಾನ ಹಿಂಪಡೆದಿದ್ದ ಬಿಎಸ್‌ವೈ
ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಆಗಿದ್ದಾಗ 89 ಪ್ರಮುಖ ರಸ್ತೆಗಳ ಒಟ್ಟು121.70 ಕಿಲೋ ಮೀಟರ್ ಉದ್ದದ ರಸ್ತೆಯನ್ನು ವೈಟ್ ಟಾಪಿಂಗ್ ಮಾಡುವ ಉದ್ದೇಶದಿಂದ 1,154 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ಬಿಬಿಎಂಪಿ ಈ ಬಗ್ಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿತ್ತು. ಆದರೆ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಕೊಟ್ಟಿದ್ದ ಅನುದಾನ ಹಿಂಪಡೆದಿದ್ದರು, ಈ ಮೂಲಕ ಕಾಮಗಾರಿ ನೆನೆಗೆದಿಗೆ ಬಿದ್ದಿತ್ತು. ಈಗ ಚುನಾವಣೆ ಸಮೀಪವಾಗುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂರನೇ ಹಂತದ ಆರೂ ಪ್ಯಾಕೇಜ್‌ಗಳಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಸಿಎಂ ಕಚೇರಿ ಮತ್ತು ನಗರಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.
ವೈಟ್ ಟಾಪಿಂಗ್‌ಗೆ ತಜ್ಞರ ವಿರೋಧ
ಈಗಾಗಲೇ ರಾಜಧಾನಿಯಲ್ಲಿ 100 ಕಿಲೋ ಮೀಟರ್ ಉದ್ದದ ರಸ್ತೆಗಳು ವೈಟ್ ಟಾಪಿಂಗ್ ಆಗಿದೆ. ವೈಟ್ ಟಾಪಿಂಗ್ ದುರಸ್ತಿ, ನಿರ್ವಹಣೆಗೆ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು, ಇದರಿಂದ ಪರಿಸರದ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ವೈಟ್ ಟಾಪಿಂಗ್ ಮಾಡುವುದರಿಂದ ಮಳೆ ನೀರು ಇಂಗುವಿಕೆ ಕಡಿಮೆಯಾಗುತ್ತದೆ. ಇದರಿಂದ ಮಳೆಗಾಲದಲ್ಲಿ ನಗರದಲ್ಲಿ ಮತ್ತಷ್ಟು ಪ್ರವಾಹ ಪರಿಸ್ಥಿತಿ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವೈಟ್ ಟಾಪಿಂಗ್ ಕಾಮಗಾರಿಗೆ ಅಧಿಕ ಹಣ ಕೂಡ ವೆಚ್ಚವಾಗುತ್ತದೆ. ಡಾಂಬರ್ ರಸ್ತೆಗಳನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತಿರುವ ಹಲವು ದೇಶಗಳಿಗೆ ನಮ್ಮ ಎಂಜಿನಿಯರ್‌ಗಳು ಭೇಟಿ ಮಾಡಿ ತಿಳಿದುಕೊಳ್ಳಲಿ ಎಂದಿದ್ದಾರೆ.