ಗುಜರಾತ್: ರಾಸಾಯನಿಕ ಘಟಕದಲ್ಲಿ ಬೆಂಕಿ; 7ಜನ ಅಸ್ವಸ್ಥ- 700 ಜನರ ಸ್ಥಳಾಂತರ
ವಡೋದರಾ ನಗರದ ಹೊರವಲಯದಲ್ಲಿರುವ ನಂದೆಸರಿ ಕೈಗಾರಿಕಾ ಪ್ರದೇಶದಲ್ಲಿ ದೀಪಕ್ ನೈಟ್ರೈಟ್ನ ರಾಸಾಯನಿಕ ಉತ್ಪಾದನಾ ಘಟಕದ ಒಂದು ಭಾಗದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಹೊಗೆಯನ್ನು ಸೇವಿಸಿದ ಏಳು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರ್ಖಾನೆಯ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 700 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಬೆಂಕಿಯನ್ನು ನಂದಿಸಲು ಪ್ರಯತ್ನಗಳು ಯಶಸ್ವಿಯಾಗಿವೆ, ಇದರಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ. ಹೊಗೆಯನ್ನು ಸೇವಿಸಿದ ಏಳು ಕಾರ್ಮಿಕರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಕಾರ್ಖಾನೆಯ ಪಕ್ಕದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಸುಮಾರು 700 ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ” ಎಂದು ವಡೋದರಾ ಜಿಲ್ಲಾಧಿಕಾರಿ ಆರ್ಬಿ ಬರದ್ ತಿಳಿಸಿದ್ದಾರೆ.
ವಡೋದರಾ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಮಾತನಾಡಿ, ಸಂಜೆಯ ವೇಳೆಗೆ ಕಾರ್ಖಾನೆಯಲ್ಲಿ ಬೆಂಕಿ ಹರಡಲು ಪ್ರಾರಂಭಿಸಿದಾಗ ಪ್ರಬಲ ಸ್ಫೋಟ ಸಂಭವಿಸಿದೆ. ಬೆಂಕಿಯನ್ನು ನಂದಿಸಲು 10 ಅಗ್ನಿಶಾಮಕ ಟೆಂಡರ್ಗಳು ಸ್ಥಳದಲ್ಲಿದ್ದವು ಎಂದು ಹೇಳಿದರು. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.