ಇತ್ತೀಚಿನ ಸುದ್ದಿದೇಶಸುದ್ದಿ

ಕಾರು ಚಾಲಕನನ್ನೇ ಕೊಂದ ಶಾಸಕ!

ಅಮರಾವತಿ, ಮೇ 24: ತನ್ನ ಮಾಜಿ ಕಾರು ಚಾಲಕನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್‌ ಎಂಎಲ್‌ಸಿ ಅನಂತ ಸತ್ಯ ಉದಯ್ ಭಾಸ್ಕ‍ರ್‌ರನ್ನು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಸೋಮವಾರ ಬಂಧಿಸಲಾಗಿದೆ.

ಶಾಸಕರನ್ನು ಬಂಧಿಸುತ್ತಿದ್ದಂತೆ ತಡರಾತ್ರಿ ಕಾಕಿನಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ರವೀಂದ್ರನಾಥ್ ಬಾಬು ಪತ್ರಿಕಾಗೋಷ್ಠಿ ನಡೆಸಿದರು. ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, “ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ತಾಂತ್ರಿಕ ಮಾಹಿತಿ ಮತ್ತು ಇತರೆ ಬಲವಾದ ಸಾಕ್ಷ್ಯಗಳ ಆಧಾರದ ಮೇಲೆ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಶಾಸಕನನ್ನು ಬಂಧಿಸಲಾಗಿದೆ. ಕೊಲೆ ಮಾಡಿ ಅದನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿರುವುದಕ್ಕೆ ಸಾಕ್ಷಿಗಳು ದೊರೆತಿವೆ” ಎಂದರು.

ಕೊಲೆಗೆ ಕಾರಣ ಏನು ಎನ್ನುವುದರ ಬಗ್ಗೆಯೂ ಮಾಹಿತಿ ನೀಡಿರುವ ಅವರು, “ಮೇ 19ರ ರಾತ್ರಿ ಶಾಸಕ ಭಾಸ್ಕರ್ ಅಪಾರ್ಟ್‌ಮೆಂಟ್‌ ಬಳಿ ತಮ್ಮ ಮಾಜಿ ಚಾಲಕ‌ ವಿ. ಸುಬ್ರಹ್ಮಣ್ಯಂ ಅವರೊಂದಿಗೆ ಜಗಳವಾಡಿದ್ದಾರೆ. ಶಾಸಕರಿಗೆ ಚಾಲಕ 20 ಸಾವಿರ ಹಣ ಬಾಕಿ ನೀಡಬೇಕಿದ್ದ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ” ಮಾಹಿತಿ ನೀಡಿದರು.

ಅಪಘಾತದಲ್ಲಿ ಸತ್ತಿದ್ದಾನೆ ಎಂದಿದ್ದ ಶಾಸಕ “ಜಗಳ ವಿಕೋಪಕ್ಕೆ ತಿರುಗಿದ್ದು ಶಾಸಕ ಭಾಸ್ಕ‍ರ್ ಚಾಲಕ ಸುಬ್ರಹ್ಮಣ್ಯಂಗೆ ಹೊಡೆದು, ತಳ್ಳಿದ್ದಾರೆ, ಮದ್ಯದ ಅಮಲಿನಲ್ಲಿದ್ದ ಸುಬ್ರಹ್ಮಣ್ಯಂ ಕಬ್ಬಿಣದ ಗ್ರಿಲ್ ಮೇಲೆ ಬಿದ್ದಿದ್ದಾರೆ. ಈ ವೇಳೆ ಅವರ ತಲೆಗೆ ಪೆಟ್ಟುಬಿದ್ದಿದೆ. ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು, ಆದರೆ ಸ್ಥಳೀಯ ಆಸ್ಪತ್ರೆಗಳಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣ ಸೂಕ್ತ ಚಿಕಿತ್ಸೆ ದೊರೆಯದೆ ಸುಬ್ರಹ್ಮಣ್ಯಂ ಸಾವನ್ನಪ್ಪಿದ್ದಾರೆ” ಎಂದು ಎಸ್‌ಪಿ ತಿಳಿಸಿದ್ದಾರೆ.

ಕೊಲೆ ಆರೋಪದಿಂದ ತಪ್ಪಿಸಿಕೊಳ್ಳಲು ಘಟನೆಯನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಶಾಸಕ ಭಾಸ್ಕರ್ ಪ್ರಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸುಬ್ರಹ್ಮಣ್ಯಂ ಕುಡಿದು ವಾಹನ ಚಲಾಯಿಸುವ ವೇಳೆ ಅಪಘಾತ ಮಾಡಿ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಆದರೆ ಸೂಕ್ತ ವಿಚಾರಣೆ ನಡೆಸಿರುವ ಪೊಲೀಸರು ಶಾಸಕ ಭಾಸ್ಕರ್ ವಿರುದ್ಧ ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕಿ ಬಂಧಿಸಿದ್ದಾರೆ. ಎಂಎಲ್‌ಸಿ ಭಾಸ್ಕರ್ ಹೇಳಿರುವಂತೆ ಘಟನಾ ಸ್ಥಳದಲ್ಲಿ ಯಾವುದೇ ರಸ್ತೆ ಅಪಘಾತ ಕುರುಹು ಇಲ್ಲ ಎಂದು ಸರ್ಪವರಂ ಪೊಲೀಸರು ಖಚಿತಪಡಿಸಿದ್ದಾರೆ. “ಪ್ರಾಥಮಿಕ ತನಿಖೆಯ ಮೇರೆಗೆ ಶಾಸಕನನ್ನು ಬಂಧಿಸಿದ್ದೇವೆ. ಈಗಲೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ, ಪ್ರಕರಣದ ಬಗ್ಗೆ ಮತ್ತಷ್ಟು ತನಿಖೆ ನಡೆಸುವುದಾಗಿದೆ” ಎಸ್‌ಪಿ ರವೀಂದ್ರನಾಥ್ ಹೇಳಿದ್ದಾರೆ.

ಘಟನೆಯಾದ ಮೂರು ದಿನಗಳ ನಂತರ ಪೊಲೀಸರು ಸೋಮವಾರ ಶಾಸಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಸೋಮವಾರ ರಾತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕರಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಗೆ ಕರೆದೊಯ್ದಿದ್ದು, ಅಲ್ಲಿ ಅವರನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಏಲೂರು ವಿಭಾಗದ ಪೊಲೀಸ್ ಉಪ ಮಹಾನಿರೀಕ್ಷಕ ಜಿ.ಪಾಲರಾಜು ಎಂಎಲ್‌ಸಿ ಭಾಸ್ಕರ್ ವಿಚಾರಣೆಯ ಮೇಲ್ವಿಚಾರಣೆ ನಡೆಸಿದರು.

ಕುಟುಂಬಸ್ಥರಿಗೆ ಮೃತದೇಹ ಒಪ್ಪಿಸಿದ್ದ ಶಾಸಕ

ಮೇ 19ರ ಮಧ್ಯರಾತ್ರಿಯಲ್ಲಿ ಶಾಸಕ ಭಾಸ್ಕರ್ ತಮ್ಮ ಮಾಜಿ ಚಾಲಕ ಸುಬ್ರಹ್ಮಣ್ಯಂ ಮೃತದೇಹವನ್ನುಕಾರಿನಲ್ಲಿ ತೆಗೆದುಕೊಂಡು ಹೋಗಿ ಸಂತ್ರಸ್ತರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಈ ವೇಳೆ ಸುಬ್ರಹ್ಮಣ್ಯಂ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ ಎಂದು ವಾದಿಸಿದ್ದಾರೆ. ಗುರುವಾರ ರಾತ್ರಿ ಭಾಸ್ಕರ್ ಅವರು ಸುಬ್ರಹ್ಮಣ್ಯಂ ಮನೆಗೆ ಬಂದು ಕರೆದುಕೊಂಡು ಹೋಗಿದ್ದರು. ನಂತರ ಮಧ್ಯರಾತ್ರಿ 2 ಗಂಟೆ ವೇಳೆಗೆ ವಾಪಸ್ ಬಂದ ಶಾಸಕ ಭಾಸ್ಕರ್ ಸುಬ್ರಹ್ಮಣ್ಯಂ ಮೃತಪಟ್ಟಿರುವುದಾಗಿ ಹೇಳಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದರು. ರಸ್ತೆ ಅಪಘಾತದಲ್ಲಿ ಸುಬ್ರಹ್ಮಣ್ಯಂ ಮೃತಪಟ್ಟಿರುವುದಾಗಿ ಶಾಸಕರು ವಾದಿಸಿದ್ದಾರೆ ಆದರೆ ಕುಟುಂಬದ ಸದಸ್ಯರು ಇದನ್ನು ವಿರೋಧಿಸಿದಾಗ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು.

ದಲಿತ ಸಂಘಟನೆಗಳ ಆಕ್ರೋಶ

ತಪ್ಪಿತಸ್ಥ ಶಾಸಕರನ್ನು ಕೂಡಲೇ ವಿಚಾರಣೆಗೆ ಒಳಪಡಿಸಬೇಕು ಎಂದು ಪ್ರತಿಪಕ್ಷಗಳು ಮತ್ತು ದಲಿತ ಸಂಘಟನೆಗಳು ರಾಜ್ಯದ ವಿವಿಧೆಡೆ ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಪ್ರಕರಣವನ್ನು ನಿಭಾಯಿಸಿದ ವಿಧಾನದ ಬಗ್ಗೆ ಟೀಕೆಗಳು ಕೇಳಿಬಂದಿವೆ. ಬಂಧಿತ ಶಾಸಕ ಭಾಸ್ಕರ್ ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿಯವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಶಾಸಕರ ಬಂಧನವಾಗುತ್ತಿದ್ದಂತೆ ಜಗನ್‌ಮೋಹನ್ ಸರ್ಕಾರ ಮುಜುಗರ ಎದುರಿಸಿದೆ.

ಕೊನೆಗೂ ಕೊಲೆ ಪ್ರಕರಣ ದಾಖಲಿಸಿದ ಪೊಲೀಸರು

ಘಟನೆ ಕುರಿತು ಸರ್ಪವರಂ ಪೊಲೀಸರು ಸೆಕ್ಷನ 174 ಸಿಆರ್ ಪಿಸಿ ಅಡಿಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿದ್ದರು. ಆದರೆ ಸುಬ್ರಹ್ಮಣ್ಯಂ ಕುಟುಂಬದ ಸದಸ್ಯರು ಇದನ್ನು ಒಪ್ಪದೆ ಶಾಸಕರೇ ಕೊಲೆ ಮಾಡಿರುವುದಾಗಿ ಆರೋಪ ಮಾಡಿ, ತನಿಖೆಗೆ ಒತ್ತಾಯಿಸಿದ್ದರು. ಪೊಲೀಸರು ಅಂತಿಮವಾಗಿ ಅನುಮಾನಸ್ಪಾದ ಸಾವು ಪ್ರಕರಣವನ್ನು ಕೊಲೆ ಪ್ರಕರಣ ಎಂದು ಬದಲಾಯಿಸಲು ಒಪ್ಪಿದ ನಂತರ ಮೃತನ ಸಂಬಂಧಿಕರು ಶನಿವಾರ ಮಧ್ಯರಾತ್ರಿಯ ನಂತರ ಮೃತದೇಹದ ಮರೋತ್ತರ ಪರೀಕ್ಷೆ ನಡೆಸಲು ಅನುಮತಿ ನೀಡಿದ್ದರು. ಭಾರತೀಯ ದಂಡ ಸಂಹಿತೆ 302 (ಕೊಲೆ) ಅಡಿಯಲ್ಲಿ, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ನಿಬಂಧನೆಗಳ ಅಡಿ ಶಾಸಕ ಉದಯ ಭಾಸ್ಕರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button