ಟೋಕಿಯೋದಲ್ಲಿ ಕ್ವಾಡ್ ಶೃಂಗಸಭೆ ಆರಂಭ
ಟೋಕಿಯೋ, ಮೇ 24; ಜಪಾನ್ನ ಟೋಕಿಯೋದಲ್ಲಿ ಕ್ವಾಡ್ ನಾಯಕರ ಶೃಂಗಸಭೆ ಆರಂಭವಾಗಿದೆ. ಅಮರಿಕ ಅಧ್ಯಕ್ಷ ಜೋ ಬೈಡೆನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕ್ವಾಡ್ ನಾಯಕರು ಪಾಲ್ಗೊಂಡಿದ್ದಾರೆ.
ಮಂಗಳವಾರ ಟೋಕಿಯೋದಲ್ಲಿ ಕ್ವಾಡ್ ನಾಯಕರ ಶೃಂಗಸಭೆಗೆ ಚಾಲನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.
ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಟೋಕಿಯೋಗೆ ತಲುಪಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಹ ಸೋಮವಾರ ಆಗಮಿಸಿದ್ದರು.
2021ರ ಮಾರ್ಚ್ ನಲ್ಲಿ ಮೊದಲ ವರ್ಚುವಲ್ ಸಭೆ ನಡೆದಿತ್ತು. ಆನಂತರ ಇದೀಗ ಟೋಕಿಯೋದಲ್ಲಿ ನಡೆಯುತ್ತಿರುವುದು ಕ್ವಾಡ್ ನಾಯಕರ 4ನೇ ಶೃಂಗಸಭೆಯಾಗಿದೆ. 2021ರ ಸೆಪ್ಟೆಂಬರ್ ನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ 2ನೇ ಮುಖಾಮುಖಿ ಶೃಂಗಸಭೆ ಹಾಗೂ 2022ರ ಮಾರ್ಚ್ ನಲ್ಲಿ 3ನೇ ವರ್ಚುವಲ್ ಶೃಂಗಸಭೆ ನಡೆದಿತ್ತು.
4ನೇ ಕ್ವಾಡ್ ಶೃಂಗಸಭೆಯಲ್ಲಿ ಭಾರತ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳು ಮತ್ತು ಪರಸ್ಪರ ಹಿತಾಸಕ್ತಿಯ ಸಮಕಾಲೀನ ಜಾಗತಿಕ ವಿಷಯಗಳ ಬಗ್ಗೆ ನಾಯಕರ ವಿಚಾರ ವಿನಿಮಯಕ್ಕೆ ಅವಕಾಶ ಸಿಗಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸುವರು. ಉಭಯ ನಾಯಕರು ಭಾರತ-ಅಮೆರಿಕ ಕಾರ್ಯತಾಂತ್ರಿಕ ಪಾಲುದಾರಿಕೆ ಪರಾಮರ್ಶೆ ಮತ್ತು 2021ರ ಸೆಪ್ಟೆಂಬರ್ನಲ್ಲಿ ನಡೆಸಿದ ದ್ವಿಪಕ್ಷೀಯ ಮಾತುಕತೆಯನ್ನು ಮುಂದುವರಿಸುವ ಬಗ್ಗೆ ಸಮಾಲೋಚಿಸುವ ಸಾಧ್ಯತೆ ಇದೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ. 2022ರ ಮಾರ್ಚ್ 21ರಂದು ವರ್ಚುವಲ್ ರೂಪದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆದಿತ್ತು. ಆನಂತರ ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಸಿಟಿಎ)ಗೆ ಸಹಿ ಹಾಕಲಾಗಿತ್ತು. ಈ ಕುರಿತ ಮುಂದಿನ ಚರ್ಚೆಗಳು ಮುಂದುವರೆಯುವ ಸಾಧ್ಯತೆ ಇದೆ.