ಕಿರುತೆರೆ ನಟಿ ಸಾವು, ಸಂಗಾತಿ ಬಂಧನ
ಕೋಲ್ಕತಾ : ಇಲ್ಲಿನ ಗರ್ಫಾ ಪ್ರದೇಶದ ತಮ್ಮ ಮನೆಯಲ್ಲಿ ಕಿರುತೆರೆ ನಟಿ ಪಲ್ಲವಿ ಡೇ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಅಂದಾಜಿಸಲಾಗಿತ್ತು. ಆದರೆ, ಈಗ ಆಕೆ ಲಿನ್- ಇನ್ ಸಂಗಾತಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಭಾನುವಾರ ಬೆಳಗ್ಗೆ ಆಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ಮೇ 12 ರಂದು, ಟಿವಿ ಶೋ ಚಿತ್ರೀಕರಣದಲ್ಲಿ ಪಲ್ಲವಿ ಜೊತೆ ಅನಮಿತ್ರ ಪಾಲ್ಗೊಂಡಿದ್ದರು. ನಂತರ ಮನೆಗೆ ತೆರಳಿದ್ದರು. ಮೇ 15ರಂದು ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಪ್ರಾಥಮಿಕ ತನಿಖೆ ಬಳಿಕ ಪೊಲೀಸರು ಪಲ್ಲವಿ ಅವರ ಜೊತೆಗಾರ ಸಾಗ್ನಿಕ್ ಚಕ್ರವರ್ತಿ ಎಂಬಾತನನ್ನು ಬಂಧಿಸಿದ್ದಾರೆ.
ಸಾವಿನ ಸುದ್ದಿ ಮೊದಲು ಮುಟ್ಟಿಸಿದ್ದ: ಪಲ್ಲವಿ ತನ್ನ ಕೊಠಡಿಯ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿಯನ್ನು ಪೊಲೀಸರಿಗೆ ಚಕ್ರವರ್ತಿಯೇ ಮುಟ್ಟಿಸಿದ್ದ. ಇದು ಬಾಡಿಗೆಗೆ ಪಡೆದ ಫ್ಲಾಟ್ ಆಗಿದ್ದು, ಇಬ್ಬರು ಕೆಲ ಕಾಲದಿಂದ ಇಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳ ಹಾಗೂ ಫ್ಲಾಟ್ ಸುತ್ತ ಮುತ್ತ ಯಾವುದೇ ಅನುಮಾನಾಸ್ಪದ ವಸ್ತು, ಸೂಸೈಡ್ ನೋಟ್ ಪತ್ತೆಯಾಗಿರಲಿಲ್ಲ, ವಿಸ್ತೃತ ಮರಣೋತ್ತರ ಪರೀಕ್ಷಾ ವರದಿ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವುದಾಗಿ ಗರ್ಫಾ ಪೊಲೀಸರು ತಿಳಿಸಿದ್ದರು. ಪ್ರಾಥಮಿಕ ಅಟಾಪ್ಸಿ ವರದಿಯಲ್ಲಿ ಆಕೆಯ ಕುತ್ತಿಗೆ ಮೇಲೆ ನೇಣು ಬಿಗಿದ ಗಾಯ ಬಿಟ್ಟರೆ, ಕತ್ತು ಹಿಸುಕಿದ್ದಾಗಲಿ, ದೈಹಿಕ ಹಿಂಸೆಗೊಳಗಾಗಿದ್ದಾಳೆ ಎಂಬುದಕ್ಕೆ ಯಾವುದೇ ಪುರಾವೆ ಲಭ್ಯವಾಗಿರಲಿಲ್ಲ. ಪಲ್ಲವಿ ಜೊತೆ ನಟಿಸಿದ ಕಿರುತೆರೆ ಕಲಾವಿದರು ಸೇರಿದಂತೆ ಹಲವರ ವಿಚಾರಣೆ ಜಾರಿಯಲ್ಲಿದೆ.
ಮಂಗಳವಾರದಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಗರ್ಫಾ ಪೊಲೀಸ್ ಠಾಣೆಗೆ ಹಾಜರಾಗಿದ್ದ ಚಕ್ರವರ್ತಿಯನ್ನು ನಂತರ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಅನುಮಾನ ದಟ್ಟವಾಗಿದೆ.
ಟಿವಿ ಸರಣಿ ರೇಶಮ್ ಜಾನ್ಪಿಯಲ್ಲಿ ನಟಿಸಿದ ನಂತರ ಪಲ್ಲವಿ ಜನಪ್ರಿಯ ಹೆಚ್ಚಾಯಿತು. ಸೀನ್ ಬ್ಯಾನರ್ಜಿ ಮುಖ್ಯ ಭೂಮಿಕೆಯಲ್ಲಿದ್ದ ‘ಅಮಿ ಸಿರಾರ್ ಬೇಗಂ’ ಎಂಬ ಟಿವಿ ಸರಣಿಯಲ್ಲಿ ಪಲ್ಲವಿ ಪಾತ್ರವಹಿಸಿದ್ದರು. ಐತಿಹಾಸಿಕ ಕಥಾನಕದಲ್ಲಿ ಕೆಲ ಎಪಿಸೋಡು ಕಾಣಿಸಿಕೊಂಡರೂ ಸೀನ್ ಹಾಗೂ ಪಲ್ಲವಿ ಜೋಡಿ ಜನಪ್ರಿಯ ಗಳಿಸಿತ್ತು. ನಟಿ ಪ್ರಸ್ತುತ ‘ಮೊನ್ ಮನೆ ನಾ’ ಕಾರ್ಯಕ್ರಮದಲ್ಲಿ ಪ್ರಧಾನ ಭೂಮಿಕೆಯಲ್ಲಿ ಆಕೆ ನಟಿಸುತ್ತಿದ್ದರು, ಇದರಲ್ಲಿ ಸಾಮ್ ಭಟ್ಟಾಚಾರ್ಯ ಮತ್ತು ಅಂಜನಾ ನೆಗಟಿವ್ ಪಾತ್ರದಲ್ಲಿ ನಟಿಸಿದ್ದಾರೆ.