ದೇಶಾದ್ಯಂತ ಪಾದಯಾತ್ರೆ ನಡೆಸಲು ರಾಹುಲ್ ಗಾಂಧಿ ಚಿಂತನೆ
ಸಿಡಬ್ಲ್ಯೂಸಿಯಲ್ಲಿ ಅಂತಿಮ ನಿರ್ಧಾರ: ರಾಹುಲ್ ಗಾಂಧಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿಗೆ ಪ್ರಯಾಣ ಮಾಡಬೇಕು. ಸಾಧ್ಯವಾದರೆ ಪಾದಯಾತ್ರೆ ಮೂಲಕವೇ ಜನರನ್ನು ತಲುಪಬೇಕು. ಅಥವಾ ಬಸ್ ಮತ್ತು ರೈಲ್ವೆ ಮೂಲಕ ಪ್ರಯಾಣ ಮಾಡಿ ಅಲ್ಲಲ್ಲಿ ಜನರೊಂದಿಗೆ ಸಂವಾದ ಮಾಡಬೇಕು. 2024ರ ಲೋಕಸಭಾ ಚುನಾವಣೆ ವೇಳೆಗೆ ದೇಶಾದ್ಯಂತ ಒಂದು ಸುತ್ತಿನ ಪ್ರಯಾಣ ಮಾಡಬೇಕು ಎಂಬ ಸಲಹೆ ಕೇಳಿಬಂದಿದೆ. ಸ್ವತಃ ರಾಹುಲ್ ಗಾಂಧಿ ಅವರು ಕೂಡ ಜನರ ಬಳಿ ತೆರಳಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಇಂದು ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಎಲ್ಲದಕ್ಕೂ ಪಾದಯಾತ್ರೆಯೇ ಪರಿಹಾರ
ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಎಲ್ಲವೂ 2024ರ ಲೋಕಸಭಾ ಚುನಾವಣೆ ಮತ್ತು ಅದಕ್ಕೂ ಮೊದಲು ಬರುವ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ತ್ರಿಪುರ, ಮಧ್ಯಪ್ರದೇಶ, ಛತ್ತೀಸ್ಗಢ ಹಾಗೂ ರಾಜಸ್ಥಾನಗಳ ವಿಧಾನಸಭಾ ಚುನಾವಣೆಗಳಿಗೆ ಯಾವ ರೀತಿಯ ಪಕ್ಷ ಸಂಘಟನೆ ಆಗಬೇಕು? ವಿಧಾನಸಭಾ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಲೋಕಸಭಾ ಚುನಾವಣೆಗೆ ಪಕ್ಷದ ಪರ ವಾತಾವರಣ ನಿರ್ಮಿಸಬೇಕು ಎಂಬುದಾಗಿಯೇ ಇತ್ತು. ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ಕಟ್ಟಬೇಕು ಎಂಬ ಸಮಾಲೋಚನೆಯೂ ಆಗಿದೆ. ಇವೆಲ್ಲವುಗಳಿಗೂ ರಾಹುಲ್ ಗಾಂಧಿ ಪಾದಯಾತ್ರೆ ಅಥವಾ ಪ್ರಯಾಣ ಸಹಕಾರಿಯಾಗಲಿದೆ ಎಂಬ ಸಲಹೆಗಳು ಕೇಳಿಬಂದಿವೆ.
ಹಲವು ಆಯಾಮಗಳಲ್ಲಿ ನಡೆದ ಚರ್ಚೆ
ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಆರ್ಥಿಕ ಸ್ಥಿತಿಗತಿ, ಸಾಮಾಜಿಕವಾಗಿ ನಡೆಯುತ್ತಿರುವ ವಿದ್ಯಾಮಾನಗಳು, ಮಹಿಳೆಯರು, ಯುವಕರು, ರೈತರು, ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿಯವರು, ಪರಿಶಿಷ್ಟ ಪಂಗಡದವರು, ಹಿಂದುಳಿದವರು ಮತ್ತು ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಗಿದೆ. ಈ ಎಲ್ಲಾ ವಿಷಯಗಳ ಮೇಲೆ ಪಕ್ಷದ ನೀತಿ, ನಿಲುವು ಹೇಗಿರಬೇಕು ಎಂಬ ಕಾರ್ಯಸೂಚಿ ರೂಪಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆರು ಸಮಿತಿಗಳನ್ನು ರಚನೆ ಮಾಡಿದ್ದರು. ಆ ಸಮಿತಿಗಳು ನವ ಸಂಕಲ್ಪ ಶಿಬಿರದಲ್ಲಿ ಕೂಲಂಕಷವಾಗಿ ಚರ್ಚೆ ಮಾಡಿ ನೀಡುವ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.