ಜೆಡಿಎಸ್ನತ್ತ ಮುಖ ಮಾಡಿರುವ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ
ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ಅಧಿಕೃತವಾಗಿ ಕಾಂಗ್ರೆಸ್ ತೊರೆದಿರುವ ವಿಧಾನಪರಿಷತ್ ಮಾಜಿ ಸದಸ್ಯ ಸಿಎಂ ಇಬ್ರಾಹಿಂ ‘ಕೈ’ ಪಕ್ಷದ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ನಾಯಕರನ್ನು ಜೆಡಿಎಸ್ನತ್ತ ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ. ಮಾಜಿ ಸಚಿವ ರೋಷನ್ ಬೇಗ್ ನಿವಾಸಕ್ಕೆ ಇಂದು ಭೇಟಿ ನೀಡಿದ್ದ ಸಿಎಂ ಇಬ್ರಾಹಿಂ, ಬೇಗ್ಗೆ ಜೆಡಿಎಸ್ಗೆ ಬರುವಂತೆ ಆಹ್ವಾನಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕರ ಮೇಲೆ ಮುನಿಸಿಕೊಂಡಿರುವ ಮಾಜಿ ಸಚಿವ ಜಮೀರ್ ಅಹಮದ್ ಖಾನ್ಗೂ ಇಬ್ರಾಹಿಂ ಗಾಳ ಹಾಕಿದ್ದಾರೆ ಎಂಬ ಮಾಹಿತಿ ಇದೆ. ಬಹುದಿನಗಳ ಯೋಚನೆಯ ಬಳಿಕ ಕೊನೆಗೂ ಕಾಂಗ್ರೆಸ್ ಪಕ್ಷ ಹಾಗೂ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿ ಜೆಡಿಎಸ್ನತ್ತ ಮುಖ ಮಾಡಿರುವ ಕೇಂದ್ರದ ಮಾಜಿ ಸಚಿವರು ಆಗಿರುವ ಸಿಎಂ ಇಬ್ರಾಹಿಂ, ಈಗಾಗಲೇ ಜೆಡಿಎಸ್ ವರಿಷ್ಠ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷದಿಂದ ನಾಯಕರು ಜೆಡಿಎಸ್ಗೆ ಸೇರ್ಪಡೆಯಾಗುವ ಆಸಕ್ತಿ ತೋರಿಸಿದರೆ, ಅವರ ಜೊತೆ ಮಾತುಕತೆ ನಡೆಸಿ ಮನವೊಲಿಸುವ ಜವಾಬ್ದಾರಿಯನ್ನೂ ಇಬ್ರಾಹಿಂಗೆ ನೀಡಲಾಗಿದೆ. ಎಲ್ಲ ಪಕ್ಷಗಳಲ್ಲಿ ಆತ್ಮೀಯರನ್ನು ಹೊಂದಿರುವ ಸಿಎಂ ಇಬ್ರಾಹಿಂ, ಇದೀಗ ಜೆಡಿಎಸ್ ಪಕ್ಷ ಬಲಗೊಳಿಸಲು ಸಹಕರಿಸುವ ಹಾಲಿ ಮಾಜಿ ಶಾಸಕರು ಹಾಗೂ ಸಚಿವರನ್ನು ಗುರಿಯಾಗಿಸಿಕೊಂಡು ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ.
ಕೆಲ ನಾಯಕರನ್ನು ಪಕ್ಷಕ್ಕೆ ಕರೆತರುವ ಭರವಸೆ ನೀಡಿರುವ ಇಬ್ರಾಹಿಂ: ಕಾಂಗ್ರೆಸ್ ಪಕ್ಷ ತೊರೆಯುವುದು ಖಚಿತವಾಗುತ್ತಿದ್ದಂತೆ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಚರ್ಚಿಸಿರುವ ಇಬ್ರಾಹಿಂ ಒಂದಿಷ್ಟು ನಾಯಕರನ್ನು ಜೆಡಿಎಸ್ಗೆ ಕರೆತರುವುದಾಗಿ ದೇವೇಗೌಡರಿಗೆ ಭರವಸೆ ನೀಡಿದ್ದಾರೆ.
ಈ ಕಾರಣಕ್ಕಾಗಿಯೇ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇರವಾಗಿ ಇಬ್ರಾಹಿಂ ನಿವಾಸಕ್ಕೆ ತೆರಳಿ ಜಂಟಿ ಮಾಧ್ಯಮಗೋಷ್ಠಿ ನಡೆಸಿದ್ದರು. ಜೆಡಿಎಸ್ ಬಲವರ್ಧನೆಗೆ ಒಂದಿಷ್ಟು ನಾಯಕರನ್ನು ಸೆಳೆಯುವುದಕ್ಕೆ ಕುಮಾರಸ್ವಾಮಿ ಹಾಗೂ ದೇವೇಗೌಡರು ಇಬ್ರಾಹಿಂಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.