ಪರೀಕ್ಷಾ ಪೇ ಚರ್ಚಾ; ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ!
ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ, ತಮ್ಮ ಆಡಳಿತಾತ್ಮಕ ಕಾರ್ಯಗಳಾಚೆ, ಮನ್ ಕೀ ಬಾತ್, ಪರೀಕ್ಷಾ ಪೇ ಚರ್ಚಾದಂತಹ ಕಾರ್ಯಕ್ರಮಗಳನ್ನು ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ. ಇವು ಸಾರ್ವಜನಿಕರೊಂದಿಗೆ ಪ್ರಧಾನಿಯವರನ್ನು ಬೆಸೆಯುವ ಕಾರ್ಯಕ್ರಮಗಳು. ಮಕ್ಕಳಲ್ಲಿರುವ ಪರೀಕ್ಷಾ ಭಯ ಹೋಗಲಾಡಿಸುವ ಸಲುವಾಗಿ ಪ್ರಧಾನಿ ಮೋದಿ ಈ ಪರೀಕ್ಷಾ ಪೇ ಚರ್ಚಾ ಆಯೋಜಿಸುತ್ತಾರೆ. ಇದರಲ್ಲಿ ದೇಶದ ನಾನಾ ರಾಜ್ಯಗಳ ವಿದ್ಯಾರ್ಥಿಗಳು, ಅವರ ಪಾಲಕರು, ಶಿಕ್ಷಕರೊಂದಿಗೆ ಸಂವಾದ ನಡೆಸುತ್ತಾರೆ. ಪ್ರಸಕ್ತ ವರ್ಷದ ಪರೀಕ್ಷಾ ಪೇ ಚರ್ಚಾ ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ. ಅಷ್ಟೇ ಅಲ್ಲ, ಏಪ್ರಿಲ್ 1, ಶುಕ್ರವಾರ ಪರೀಕ್ಷಾ ಪೆ ಚರ್ಚಾ ನಡೆಯಲಿರುವ ಹಿನ್ನೆಲೆಯಲ್ಲಿ ಮಾರ್ಚ್ 31ರಂದು ಪ್ರಧಾನಮಂತ್ರಿಯವರ ಯೂಟ್ಯೂಬ್ ಚಾನಲ್ನಲ್ಲಿ ಮಕ್ಕಳಿಗೆ, ಅವರ ಪಾಲಕರಿಗೆ ಕೆಲವು ಟಿಪ್ಸ್ಗಳನ್ನು ನೀಡಲಾದ ವಿಡಿಯೋವನ್ನು ಶೇರ್ ಮಾಡಲಾಗಿದೆ.
ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಕರ್ನಾಟಕದ ವಿದ್ಯಾರ್ಥಿಯೊಬ್ಬನೂ ಪಾಲ್ಗೊಳ್ಳಲಿದ್ದಾನೆ. ಅಂದಹಾಗೇ ಇದು 5ನೇ ಆವೃತ್ತಿಯ ಚರ್ಚೆ. ಈ ಕಾರ್ಯಕ್ರಮಕ್ಕೆ ನೋಂದಣಿ ಪ್ರಕ್ರಿಯೆ ಇದ್ದು, ಕೊನೆಯಲ್ಲಿ ಆಯ್ಕೆಯಾದವರು ಪ್ರಧಾನಿಯವರೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಸಕ್ತ ಬಾರಿ ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಒತ್ತಡ ಹೇಗೆ ನಿವಾರಣೆ ಮಾಡಿಕೊಳ್ಳಬೇಕು, ಮನಸನ್ನು ಶಾಂತವಾಗಿಟ್ಟುಕೊಳ್ಳಬೇಕು ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ . 2018ರಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ವರ್ಷ ಕೊರೊನಾ ಕಾರಣದಿಂದ ವರ್ಚ್ಯುವಲ್ ಆಗಿ ನಡೆದಿತ್ತು. ಈ ಬಾರಿ ಮುಖಾಮುಖಿಯಾಗಿ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದನ್ನು ಡಿಡಿ ನ್ಯಾಶನಲ್, ಡಿಡಿ ನ್ಯೂಸ್, ಡಿಡಿ ಇಂಡಿಯಾಗಳಲ್ಲಿ ನೇರಪ್ರಸಾರದಲ್ಲಿ ವೀಕ್ಷಿಸಬಹುದು. ರೇಡಿಯೋ, ಯೂಟ್ಯೂಬ್ ಚಾನಲ್ಗಳಲ್ಲೂ ಪ್ರಸಾರವಾಗಲಿದೆ. ಏಪ್ರಿಲ್ 1ರಂದು ಪರೀಕ್ಷಾ ಪೇ ಚರ್ಚಾ ನಡೆಯುವ ಬಗ್ಗೆ ಮಾರ್ಚ್ 30ರಂದು ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಈ ವರ್ಷದ ಪರೀಕ್ಷಾ ಪೇ ಚರ್ಚಾ ದೆಡೆಗೆ ವಿದ್ಯಾರ್ಥಿಗಳು ಅತ್ಯುತ್ಸಾಹಭರಿತ ಆಸಕ್ತಿ ತೋರಿಸುತ್ತಿದ್ದಾರೆ. ಲಕ್ಷಾಂತರ ಜನರು ಈಗಾಗಲೇ ತಮ್ಮ ಅನಿಸಿಕೆ, ಅನುಭವ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ಏಪ್ರಿಲ್ 1ರಂದು ನಡೆಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದರು.