ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ!
ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೇಂದ್ರ ಸಚಿವರನ್ನು ಬರಮಾಡಿಕೊಂಡಿದ್ದಾರೆ.
ಒಂದು ದಿನದ ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರ ಸಚಿವ ಅಮಿತ್ ಶಾ ಇಂದು ಸಾಲು ಸಾಲು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರಿನಿಂದ ತುಮಕೂರಿಗೆ ತೆರಳಿರುವ ಅಮಿತ್ ಶಾ ಸಿದ್ಧಗಂಗಾ ಮಠದಲ್ಲಿನ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮಿಗಳ 115 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕಾರ್ಯಕ್ರಮ ಮುಗಿಸಿ, ಭೋಜನದ ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆಯತ್ತ ಪ್ರಯಾಣ ಬೆಳೆಸಲಿರುವ ಅಮಿತ್ ಶಾ, ಮಧ್ಯಾಹ್ನ 2:40 ಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಬಳಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನ ಹೆಚ್‌ಎಎಲ್ ವಿಮಾನನಿಲ್ದಾಣಕ್ಕೆ ಆಗಮಿಸಲಿರುವ ಅವರು ಸಂಜೆ 4 ಘಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಸಹಕಾರ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಹಕಾರ ಇಲಾಖೆ ವತಿಯಿಂದ ಕ್ಷೀರ ಸಮೃದ್ಧಿ ಬ್ಯಾಂಕ್‌ನ ಲಾಂಛನ ಹಾಗೂ ಬಳಿಕ ಕೆಎಂಎಫ್‌ನ ಹಲವು ಉತ್ಪನ್ನಗಳನ್ನು ಬಿಡುಗಡೆಗೊಳಿಸಲಿದ್ದಾರೆ.
ನಂತರ ಸಂಜೆ 5:45 ಕ್ಕೆ ಅರಮನೆ ಮೈದಾನದಿಂದ ಬಿಜೆಪಿ ಕಚೇರಿಯತ್ತ ಪ್ರಯಾಣ ಬೆಳೆಸಲಿರುವ ಅವರು, ಸಂಜೆ 6 ಘಂಟೆಗೆ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಬಹು ನಿರೀಕ್ಷಿತ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ.