ಶಿವಕುಮಾರ ಶ್ರೀ ಗಳ 115 ನೇ ಜಯಂತಿ ಕಾರ್ಯಕ್ರಮ!ಇಂದು ರಾಹುಲ್, ನಾಳೆ ಅಮಿತ್ ಷಾ ಭೇಟಿ..
ತುಮಕೂರು: ಶುಕ್ರವಾರ ಶಿವಕುಮಾರ ಶ್ರೀ ಗಳ 115 ನೇ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಇಂದು ಅಂದರೆ ಗುರುವಾರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ನಾಳೆ ಅಮಿತ್ ಷಾ ಭೇಟಿ ನೀಡುತ್ತಿದ್ದು, ಒಂದು ದಿನವೇ ಮೊದಲೇ ರಾಹುಲ್ ಭೇಟಿ ನೀಡಲಿದ್ದಾರೆ. ಸಂಜೆ 4 ಗಂಟೆಗೆ ರಸ್ತೆ ಮೂಲಕ ಆಗಮಿಸಲಿರುವ ರಾಹುಲ್ ಗಾಂಧಿ, ಸಿದ್ದಗಂಗಾ ಮಠದ ಶಿವಕುಮಾರ್ ಶ್ರೀ ಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಸಿದ್ದಲಿಂಗ ಶ್ರೀ ಭೇಟಿಯಾಗಿ ಆಶಿರ್ವಾದ ಪಡೆಯಲಿದ್ದಾರೆ. ಮಠದಲ್ಲಿ ಪ್ರಸಾದ ಸೇವಿಸಿ ಬೆಂಗಳೂರಿಗೆ ಅವರು ವಾಪಸ್ ಆಗಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಂ.ಬಿ.ಪಾಟೀಲ್, ಪರಮೇಶ್ವರ್, ಈಶ್ವರ್ ಖಂಡ್ರೆ ಸೇರಿದಂತೆ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ.
ಶುಕ್ರವಾರ ಅಮಿತ್ ಷಾ ಭೇಟಿ; ಮಾಜಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ:
ಶುಕ್ರವಾರ ನಡೆದಾಡುವ ಡಾ.ಶಿವಕುಮಾರ್ ಶ್ರೀ ಗಳ 115 ನೇ ಜಯಂತಿ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ 10.45 ಕ್ಕೆ ತುಮಕೂರಿನ ವಿವಿ ಹೆಲಿಪ್ಯಾಡ್ಗೆ ಅಮಿತ್ ಷಾ ಆಗಮಿಸಲಿದ್ದು, ಬಳಿಕ ರಸ್ತೆ ಮೂಲಕ ಸಿದ್ದಗಂಗಾ ಮಠಕ್ಕೆ ತೆರಳಲಿದ್ದಾರೆ. ಮೊದಲಿಗೆ ಶಿವಕುಮಾರ್ ಶ್ರೀ ಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಲಿರುವ ಅಮಿತ್ ಷಾ, ಪೂಜೆ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ್ ಖುಬಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ವಿ ಸೋಮಣ್ಣ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದ್ದು, ಸುತ್ತೂರು ದೇಶಿಕೆಂದ್ರ ಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಿದ್ದಲಿಂಗ ಶ್ರೀ ಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಮಠಾಧಿಶರು ಭಾಗಿಯಾಗಲಿದ್ದಾರೆ.
ಅಮಿತ್ ಷಾ ಭೇಟಿ ಹಿನ್ನೆಲೆ; ಬಿಗಿ ಪೊಲೀಸ್ ಭದ್ರತೆ:
ತುಮಕೂರು: ನಾಳೆ ಸಿದ್ದಗಂಗಾ ಮಠಕ್ಕೆ ಅಮಿತ್ ಷಾ ಭೇಟಿ ಹಿನ್ನೆಲೆಯಲ್ಲಿ ತುಮಕೂರು ನಗರ ಹಾಗೂ ಸಿದ್ದಗಂಗಾ ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ನಗರ ಹಾಗೂ ಮಠದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ತುಮಕೂರು ವಿವಿ ಹೆಲಿಪ್ಯಾಡ್ನಿಂದ ಹಿಡಿದು ಸಿದ್ದಗಂಗಾ ಮಠದವರೆಗೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಮೂರು ದಿನಗಳಿಂದ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮೊಕ್ಕಾಂ ಹೂಡಿದ್ದಾರೆ. ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಸೇರಿದಂತೆ ಎಎಸ್ಪಿ, ಡಿಎಸ್ಪಿಗಳು ಭಾಗಿಯಾಗಿದ್ದಾರೆ.