ಇತ್ತೀಚಿನ ಸುದ್ದಿರಾಜ್ಯಸುದ್ದಿ

ಮಾಜಿ ಸಿಎಂ ವಿರುದ್ಧ ‘ವಿಶೇಷ ಕ್ರಿಮಿನಲ್ ಕೇಸ್’ ದಾಖಲಿಸುವಂತೆ ಕೋರ್ಟ್ ಆದೇಶ!

ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರು 2006-07ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ಮಾಡಿದ್ದ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಾಜಿ ಮುಖ್ಯಮಂತ್ರಿ ವಿರುದ್ಧ ‘ವಿಶೇಷ ಕ್ರಿಮಿನಲ್ ಕೇಸ್’ ದಾಖಲಿಸುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶಿಸಿದೆ.

ವಾಸುದೇವ ರೆಡ್ಡಿ ಎಂಬುವವರ ಸಲ್ಲಿಸಿದ್ದ ಖಾಸಗಿ ದೂರಿನ ಆಧಾರದ ಮೇಲೆ ಕರ್ನಾಟಕದ ಚುನಾಯಿತ ಸಂಸದರು/ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯದ ಸೆಷನ್ಸ್ ನ್ಯಾಯಾಧೀಶ ಬಿ ಜಯಂತ ಕುಮಾರ್ ಅವರು ಮಾರ್ಚ್ 26 ರಂದು ಈ ಆದೇಶ ಹೊರಡಿಸಿದ್ದಾರೆ.

“ಭ್ರಷ್ಟಾಚಾರ ತಡೆ ಕಾಯಿದೆ, 1988ರ ಕಲಂ 13(1)(ಡಿ) ಆರ್/ಡಬ್ಲ್ಯೂ ಕಲಂ. 13(2) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ಆರೋಪಿ ನಂ. 2 ಬಿ.ಎಸ್. ಯಡಿಯೂರಪ್ಪ ವಿರುದ್ಧ ವಿಶೇಷ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ. ಸೆಕ್ಷೆನ್. 204(2) Cr.PC ಅಡಿಯಲ್ಲಿ ಅಗತ್ಯವಿರುವಂತೆ ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸಿದ ನಂತರವೇ ವಿಚಾರಣೆಗೆ ಹಾಜರಾಗುವಂತೆ ಆರೋಪಿ ನಂಬರ್ 2 ಸಮನ್ಸ್ ನೀಡಿ” ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಯಡಿಯೂರಪ್ಪ ಅವರು ಬೆಳ್ಳಂದೂರು ಹಾಗೂ ದೇವರಬೀಸನಹಳ್ಳಿಯಲ್ಲಿ ಐಟಿ ಕಾರಿಡಾರ್ ಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಶಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಯಡಿಯೂರಪ್ಪ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ‘ಯಡಿಯೂರಪ್ಪ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಲೋಕಾಯುಕ್ತ ಪೊಲೀಸರು ಎರಡು ಬಾರಿ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಎರಡೂ ವರದಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಎರಡನೇ ‘ಬಿ’ ರಿಪೋರ್ಟ್ ಅನ್ನು 2021ರ ನವೆಂಬರ್‌ 27ರಂದು ತಿರಸ್ಕರಿಸಿದ್ದ ನ್ಯಾಯಾಲಯ, ನೇರವಾಗಿ ವಿಚಾರಣೆ ಆರಂಭಿಸುವ ತೀರ್ಮಾನ ಪ್ರಕಟಿಸಿತ್ತು.

Related Articles

Leave a Reply

Your email address will not be published. Required fields are marked *

Back to top button