ಭಾರತದ ವಿದೇಶಾಂಗ ನೀತಿಗೆ ಸೆಲ್ಯೂಟ್ ಎಂದ ಇಮ್ರಾನ್ ಖಾನ್!
ಹೊಸದಿಲ್ಲಿ: ಭಾರತದ ವಿದೇಶಾಂಗ ನೀತಿ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿದೇಶಾಂಗ ನೀತಿಯಲ್ಲಿ ಭಾರತದ ಸ್ವತಂತ್ರ ನಿಲುವನ್ನು ಪ್ರಶಂಸಿಸಿದ್ದಾರೆ. ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಭಾಷಣದಲ್ಲಿ ಭಾರತದ ವಿದೇಶಾಂಗ ನೀತಿಗೆ ಸಲಾಂ ಎಂದಿದ್ದಾರೆ.
ಮಲಕಂದ್‌ನಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಮಾತನಾಡಿದ ಇಮ್ರಾನ್ ಖಾನ್, ಯಾವಾಗಲೂ ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸುವ ಭಾರತವನ್ನು ನಾನು ಪ್ರಶಂಸಿಸುತ್ತೇನೆ. ರಷ್ಯಾ ವಿರುದ್ಧ ಜಗತ್ತಿನ ಹಲವು ರಾಷ್ಟ್ರಗಳ ನಿರ್ಬಂಧ ಹೇರಿದರೆ, ಭಾರತವು ಅದೇ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ. ಇದು ಆ ದೇಶದ ವಿದೇಶಾಂಗ ನೀತಿಯ ಚಾಣಾಕ್ಷತನಕ್ಕೆ ಹಿಡಿದ ಕನ್ನಡಿಯಾಗಿದೆ. ಹಾಗಾಗಿ ಭಾರತಕ್ಕೆ ನಾನು ಸೆಲ್ಯೂಟ್ ಹೊಡೆಯುತ್ತೇನೆ ಎಂದಿದ್ದಾರೆ.
ಅಮೆರಿಕ ಸದಸ್ಯ ರಾಷ್ಟ್ರವಾಗಿರುವ ‘ಕ್ವಾಡ್’ಗೆ ಭಾರತ ಸಹ ಸದಸ್ಯತ್ವ ಹೊಂದಿದೆ. ಹೀಗಿದ್ದರೂ ಅದು ‘ನಮ್ಮದು ತಟಸ್ಥ ನಿಲುವು’ ಎಂದು ಹೇಳುತ್ತದೆ. ವಿದೇಶಾಂಗ ನೀತಿಯ ಉತ್ತಮವಾಗಿ ನಿರ್ವಹಿಸುವುದರಿಂದ ಇದೆಲ್ಲ ಸಾಧ್ಯವಾಗಿದೆ, ಎಂದು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಮಲಕಂದ್‌ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಇಮ್ರಾನ್ ಖಾನ್ ಹೇಳಿದ್ದಾರೆ.
ಇದೇ ಕಾರಣದಿಂದ ಇಮ್ರಾನ್ ಖಾನ್ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಲಾಗಿದ್ದು, ಇದರ ಹಿಂದೆ ಪಾಶ್ಚಿಮಾತ್ಯ ರಾಷ್ಟ್ರಗಳ ಪಿತೂರಿ ಇದೆ ಎಂದು ಇಮ್ರಾನ್ ಖಾನ್ ಆಪ್ತ ಮಂತ್ರಿಯೊಬ್ಬರು ಹೇಳಿದ್ದಾರೆ. ಇಮ್ರಾನ್ ಖಾನ್ ಅವರ ಕೆಟ್ಟ ಆಡಳಿತ ಮತ್ತು ಆರ್ಥಿಕ ಅಸಮರ್ಥತೆಯಿಂದ ದೇಶದಲ್ಲಿ ಹಣದುಬ್ಬರ ಹೆಚ್ಚಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಆಗ ನಾನು ಆಲೂಗಡ್ಡೆ, ಟೊಮೆಟೋ ಬೆಲೆಗಳನ್ನು ಪರಿಶೀಲಿಸಲು ರಾಜಕೀಯಕ್ಕೆ ಸೇರಲಿಲ್ಲ ಎಂದು ಹೇಳಿದ್ದರು.
ಕ್ವಾಡ್ ಮೈತ್ರಿಕೂಟದ ಜಪಾನ್, ಆಸ್ಟ್ರೇಲಿಯಾ, ಅಮೆರಿಕ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದರೆ, ಭಾರತ ಮತದಾನದಿಂದಲೇ ದೂರವಿದ್ದು, ಹಿಂಸಾಚಾರವನ್ನು ನಿಲ್ಲಿಸಲು ಮಾತ್ರ ಮನವಿ ಮಾಡಿತ್ತು. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ದಿನ ಇಮ್ರಾನ್ ಖಾನ್ ಮಾಸ್ಕೋದಲ್ಲಿದ್ದರು. ಪಾಕಿಸ್ತಾನ ಕೂಡ ಮತದಾನದಿಂದ ದೂರ ಉಳಿದಿತ್ತು.