ಮೋದಿಗೆ ಬಾಂಗ್ಲಾ ಪ್ರಧಾನಿ ಕೃತಜ್ಞತೆ!’ಆಪರೇಷನ್ ಗಂಗಾ’ ಬಗ್ಗೆ ಶೇಖ್ ಹಸೀನಾ ಮೆಚ್ಚುಗೆ
ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಮುಂದುವರೆದಿದೆ. ಅಲ್ಲಿ ಸಿಲುಕಿದ್ದ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ. ಅಷ್ಟೇ ಅಲ್ಲ, ಭಾರತೀಯ ವಿದ್ಯಾರ್ಥಿಗಳ ಜೊತೆಗೆ ಭಾರತದ ಸುತ್ತಮುತ್ತಲ ದೇಶಗಳ ವಿದ್ಯಾರ್ಥಿಗಳನ್ನೂ ಭಾರತವೇ ಸುರಕ್ಷಿತವಾಗಿ ಕರೆತರುತ್ತಿದೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಟುನೀಶಿಯನ್ ವಿದ್ಯಾರ್ಥಿಗಳನ್ನು ‘ಆಪರೇಷನ್ ಗಂಗಾ’ ಮೂಲಕವೇ ಕರೆತರಲಾಗುತ್ತಿದೆ. ಅಷ್ಟೇ ಏಕೆ ಪಾಕಿಸ್ತಾನದ ವಿದ್ಯಾರ್ಥಿಗಳೂ ಕೂಡ ಭಾರತದ ನೆರವಿನೊಂದಿಗೆ ಸುರಕ್ಷಿತವಾಗಿ ತಮ್ಮ ದೇಶ ಸೇರುತ್ತಿದ್ದಾರೆ. ಇದೀಗ ಭಾರತದ ಈ ನಿಸ್ವಾರ್ಥ ಸೇವೆಗೆ ಜಗತ್ತಿನ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಗೆ ಬಾಂಗ್ಲಾ ಪ್ರಧಾನಿ ಕೃತಜ್ಞತೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಅವರು ಧನ್ಯವಾದ ಅರ್ಪಿಸಿದ್ದಾರೆ. ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬಾಂಗ್ಲಾದೇಶದ 9 ಮಂದಿಯನ್ನು ಆಪರೇಷನ್ ಗಂಗಾ ಮೂಲಕವೇ ರಕ್ಷಣೆ ಮಾಡಲಾಗಿತ್ತು. ಅವರನ್ನು ದೆಹಲಿಗೆ ಕರೆತಂದು, ಅಲ್ಲಿಂದ ಸುರಕ್ಷಿತಲಾಗಿ ಬಾಂಗ್ಲಾ ದೇಶ ತಲುಪುವುದ್ಕಕೆ ಅವರಿಗೆ ವ್ಯವಸ್ಥೆ ಮಾಡಲಾಗಿತ್ತು.
ಇದೀಗ ಭಾರತದ ಕಾರ್ಯಕ್ಕೆ ಬಾಂಗ್ಲಾದೇಶ ಮೆಚ್ಚುಗೆ ವ್ಯಕ್ತಪಡಿಸಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ .
ಸರ್ಕಾರದಿಂದ ಅಧಿಕೃತ ಮಾಹಿತಿ
“ಆಪರೇಷನ್ ಗಂಗಾ” ಅಡಿಯಲ್ಲಿ ಉಕ್ರೇನ್‌ನಿಂದ ತನ್ನ 9 ಪ್ರಜೆಗಳನ್ನು ರಕ್ಷಿಸಿದ್ದಕ್ಕಾಗಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಕಾರ್ಯಾಚರಣೆಯ ಅಡಿಯಲ್ಲಿ ನೇಪಾಳಿ, ಟ್ಯುನೀಷಿಯಾದ ವಿದ್ಯಾರ್ಥಿಗಳನ್ನು ಸಹ ರಕ್ಷಿಸಲಾಗಿದೆ, ”ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಟ್ವೀಟ್ ಮಾಡಿದೆ.
ಭಾರತದ ಧ್ವಜ ಹಿಡಿದು ಪಾರಾಗಿದ್ದ ವಿದೇಶಿ ವಿದ್ಯಾರ್ಥಿಗಳು
ಉಕ್ರೇನ್ ಗಡಿ ಭಾಗಕ್ಕೆ ತೆರಳಿ ಅಲ್ಲಿಂದ ವಾಪಸ್ಸಾಗುವುದು ವಿದ್ಯಾರ್ಥಿಗಳಿಗೆ ಕಷ್ಟವಾಗಿತ್ತು. ಆಗ ರೊಮೇನಿಯಾ ಪ್ರವೇಶಿಸಲು ಪಾಕಿಸ್ತಾನ ಸೇರಿದಂತೆ ಇತರೆ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಭಾರತದ ತ್ರಿವರ್ಣ ಧ್ವಜ ನೆರವಾಗಿರುವ ಕುರಿತು ವರದಿಯಾಗಿತ್ತು.
ಪಾಕಿಸ್ತಾನ ವಿದ್ಯಾರ್ಥಿನಿಯಿಂದಲೂ ಧನ್ಯವಾದ
ಈ ಹಿಂದೆ, ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಪಾಕಿಸ್ತಾನಿ ವಿದ್ಯಾರ್ಥಿಯನ್ನು ಭಾರತೀಯ ಅಧಿಕಾರಿಗಳು ರಕ್ಷಿಸಿದ ವೀಡಿಯೊವನ್ನು ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿತ್ತು. ಇದೀಗ ಆ ವಿದ್ಯಾರ್ಥಿನಿ ಕೂಡ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾಳೆ.
ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಣೆ
ಭಾರತೀಯ ಅಧಿಕಾರಿಗಳು ಪಾಕಿಸ್ತಾನ ಮೂಲದ ವಿದ್ಯಾರ್ಥಿನಿ ಶಫೀಕ್ ಎಂಬಾಕೆಯನ್ನು ರಕ್ಷಿಸಿದ್ದರು.. ಅವಳನ್ನು ರಕ್ಷಿಸಿದ ನಂತರ, ಶಫೀಕ್ ಅವರು ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಅವರ ಬೆಂಬಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದರು.
“ಭಾರತೀಯರಿಂದಾಗಿ ನಾವು ಸುರಕ್ಷಿತವಾಗಿ ಮನೆ ಸೇರಿದ್ದೇವೆ”
“ನಾವು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರಿಂದ ಇಲ್ಲಿಯವರೆಗೆ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಕೈವ್‌ನ ಭಾರತೀಯ ರಾಯಭಾರ ಕಚೇರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ನಾನು ಭಾರತದ ಪ್ರಧಾನಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಅಂತ ಪಾಕಿಸ್ತಾನದ ವಿದ್ಯಾರ್ಥಿನಿ ಶಫೀಕ್ ಹೇಳಿದ್ದಾಳೆ. “ಭಾರತೀಯರಿಂದಾಗಿ ನಾವು ಸುರಕ್ಷಿತವಾಗಿ ಮನೆಗೆ ಹೋಗುತ್ತೇವೆ ಎಂದು ಭಾವಿಸುತ್ತೇವೆ” ಅಂತ ಶಫೀಕ್ ಹೇಳಿದ್ದಾಳೆ.
ಎಲ್ಲಾ ಭಾರತೀಯರ ರಕ್ಷಣೆ?
ಏತನ್ಮಧ್ಯೆ, ಉಕ್ರೇನ್‌ನ ಸುಮಿಯಿಂದ ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಎಂಇಎ ತಿಳಿಸಿದೆ. ಉಕ್ರೇನ್‌ನ ನೆರೆಯ ದೇಶಗಳಿಂದ ಭಾರತೀಯ ನಾಗರಿಕರನ್ನು ರಕ್ಷಿಸಲು ‘ಆಪರೇಷನ್ ಗಂಗಾ’ ಅಡಿಯಲ್ಲಿ, ವಿಶೇಷ ವಿಮಾನಗಳ ಮೂಲಕ ಸುಮಾರು 18 ಸಾವಿರ ಭಾರತೀಯರನ್ನು ಮರಳಿ ಕರೆತರಲಾಗಿದೆ.