ವೈದ್ಯಕೀಯ ಕಾಲೇಜುಗಳ ಕೊರತೆ ಇಷ್ಟಿದೆಯೆಂದು ನಿಜಕ್ಕೂ ಗೊತ್ತಿರಲಿಲ್ಲ!ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ
ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಯಾವಾಗಲೂ ಜನರಿಗೆ ಹಿತವೆನಿಸುವ ಮತ್ತು ಸಕರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳಲು ಪ್ರೇರೇಪಿಸುವ ಸಂದೇಶಗಳನ್ನು ಪೋಸ್ಟ್ ಮಾಡುವುದರಲ್ಲಿ ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸದಾ ಮುಂಚೂಣಿಯಲ್ಲಿರುವ ವ್ಯಕ್ತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಮತ್ತೊಮ್ಮೆ ಅನೇಕ ಭಾರತೀಯ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಶಿಕ್ಷಣಕ್ಕಾಗಿ ನಮ್ಮ ದೇಶವಲ್ಲದೆ, ಬೇರೆ ಬೇರೆ ದೇಶಗಳಿಗೆ ಹೋಗಿ ಅಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಅನೇಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಟ್ವೀಟ್ ಒಂದನ್ನು ಮಾಡಿದ್ದಾರೆ ನೋಡಿ.
ಆನಂದ್ ಮಹೀಂದ್ರಾ ಅವರು ತಮ್ಮ ಮಹೀಂದ್ರಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಒಂದು ವೈದ್ಯಕೀಯ ಕಾಲೇಜೊಂದನ್ನು ಕಟ್ಟಿಸಲು ಬಯಸುತ್ತಿದ್ದಾರಂತೆ ಎಂದು ತಿಳಿದು ಬಂದಿದೆ. ಸುದ್ದಿ ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯನ್ನು ನೋಡಿ ಇವರು ಭಾರತೀಯ ವಿದ್ಯಾರ್ಥಿಗಳಿಗಾಗಿ ಒಂದು ಒಳ್ಳೆಯ ವೈದ್ಯಕೀಯ ಕಾಲೇಜನ್ನು ನಿರ್ಮಿಸುವ ಯೋಚನೆ ಮಾಡುತ್ತಿದ್ದಾರಂತೆ ಎಂದು ಹೇಳಲಾಗುತ್ತಿದೆ.
ವರದಿಯಲ್ಲಿ ಏನಿತ್ತು?
ಅಂತಹದ್ದೇನು ಇತ್ತು ಆ ವರದಿಯಲ್ಲಿ ಅಂತೀರಾ? ಆ ವರದಿಯಲ್ಲಿ ಭಾರತೀಯ ವಿದ್ಯಾರ್ಥಿಗಳು ಯಾವ ಯಾವ ದೇಶಗಳಿಗೆ ವೈದ್ಯಕೀಯ ವ್ಯಾಸಂಗ ಮಾಡಲು ಹೋಗಿದ್ದಾರೆ ಎಂಬುದರ ಬಗ್ಗೆ ಒಂದು ವಿಸ್ತೃತವಾದ ಅಂಕಿ ಅಂಶಗಳನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು.
ವಿದೇಶದಲ್ಲಿ ಮೆಡಿಕಲ್ ಕಾಲೇಜ್ಗೆ ಹೋಗೋ ಭಾರತೀಯ ವಿದ್ಯಾರ್ಥಿಗಳು
ಆ ಅಂಕಿ ಅಂಶಗಳು ವಿವರಿಸುವಂತೆ ಚೀನಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಹೋದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 23,000 ಮತ್ತು ಈಗ ರಷ್ಯಾದ ದಾಳಿಗೆ ತತ್ತರಿಸಿ ಹೋದ ಉಕ್ರೇನ್‌ನಲ್ಲಿ 18,000 ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗ ಮಾಡಲು ಹೋಗಿದ್ದಾರೆ. ರಷ್ಯಾದಲ್ಲಿ ಸುಮಾರು 16,500 ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವೈದ್ಯಕೀಯ ಕಾಲೇಜುಗಳ ಕೊರತೆ ಇಷ್ಟಿದೆಯೆಂದು ನಿಜಕ್ಕೂ ಗೊತ್ತಿರಲಿಲ್ಲ
ಇದನ್ನು ನೋಡಿದ ಆನಂದ್ ಅವರು “ನನಗೆ ನಿಜವಾಗಲೂ ಗೊತ್ತಿರಲಿಲ್ಲ, ನಮ್ಮ ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಕಾಲೇಜುಗಳ ಇಷ್ಟೊಂದು ಕೊರತೆ ಇದೆ ಎಂದು. ಸಿ.ಪಿ. ಗುರನಾನಿ ಅವರೇ ಯಾಕೆ ನೀವು ನಮ್ಮ ಮಹೀಂದ್ರಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಒಂದು ಒಳ್ಳೆಯ ವೈದ್ಯಕೀಯ ಕಾಲೇಜು ನಿರ್ಮಿಸುವ ನಿಟ್ಟಿನಲ್ಲಿ ಯೋಚನೆ ಮಾಡಬಾರದು” ಎಂದು ಟ್ವೀಟ್ ಮಾಡಿದ್ದಾರೆ.
ಬೇರೆ ರಾಷ್ಟ್ರಗಳಲ್ಲಿಯೂ ಮೆಡಿಕಲ್ ಕಾಲೇಜು ಆರಂಭಿಸುವ ಕೆಲಸ
ಆನಂದ್ ಮಹೀಂದ್ರಾ ಅವರ ಈ ಟ್ವೀಟ್ ನೋಡಿದ ಅನೇಕ ಜನರು ಅವರನ್ನು ಈ ಯೋಜನೆ ಕಾರ್ಯರೂಪಕ್ಕೆ ಬರಲಿ ಮತ್ತು ಎಲ್ಲಾ ವರ್ಗದ ಜನರಿಗೂ ವೈದ್ಯಕೀಯ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಇದರ ಶಿಕ್ಷಣ ಶುಲ್ಕವಿರಲಿ ಎಂದು ಹೇಳಿದ್ದಾರೆ. ಅಲ್ಲದೆ ಸುದ್ದಿ ಮಾಧ್ಯಮವೊಂದು ವರದಿ ಮಾಡಿದ ಪ್ರಕಾರ ಇನ್ನೂ ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಇನ್ನಿತರೆ ಚಿಕ್ಕ ಪುಟ್ಟ ರಾಷ್ಟಗಳು ತಮ್ಮ ದೇಶಗಳಲ್ಲಿ ನಿರ್ಮಿಸಲು ಸಹ ಯೋಜನೆಯನ್ನು ಹಾಕಿಕೊಳ್ಳುತ್ತಿವೆ ಎಂದು ಹೇಳಿದೆ.
ದೊಡ್ಡ ಮಟ್ಟದಲ್ಲಿ ಯೋಜನೆ
ಈ ಬಾರಿ ಆನಂದ್ ಮಹೀಂದ್ರಾ ಅವರು ಈ ವೈದ್ಯಕೀಯ ಕಾಲೇಜಿನ ಯೋಜನೆಯನ್ನು ತುಂಬಾನೇ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡುವ ಯೋಚನೆಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಅವರು ಒಬ್ಬ ವಿಕಲಚೇತನ ವ್ಯಕ್ತಿ ಸ್ಕೂಟಿ ಇಂಜಿನ್‌ಗೆ ಕಾರ್ಟ್ ವಾಹನದ ರೀತಿಯಲ್ಲಿ ಮಾಡಿಕೊಂಡಿರುವ ಬಗ್ಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
“ಈ ವ್ಯಕ್ತಿ ಯಾವ ಊರಿನವರು, ಈ ವಿಡಿಯೋ ಯಾವಾಗ ಚಿತ್ರೀಕರಿಸಿದ್ದು ಎಂದು ನನಗೆ ತಿಳಿದಿಲ್ಲ, ಆದರೆ ಈ ವ್ಯಕ್ತಿ ಒಬ್ಬ ವಿಕಲಚೇತನನಾಗಿದ್ದು ತನ್ನ ಅನುಕೂಲಕ್ಕೆ ಈ ರೀತಿಯ ಒಂದು ಒಳ್ಳೆಯ ಆಲೋಚನೆಯನ್ನು ಮಾಡಿದ್ದಾರೆ. ಇವರ ಬಗ್ಗೆ ತುಂಬಾನೇ ಹೆಮ್ಮೆ ಇದೆ” ಎಂದು ವಿಡಿಯೋ ಹಂಚಿಕೊಳ್ಳುವುದರ ಜೊತೆಗೆ ಶೀರ್ಷಿಕೆಯನ್ನು ಸಹ ಬರೆದುಕೊಂಡಿದ್ದರು. ಇಷ್ಟೇ ಅಲ್ಲದೆ ತಮ್ಮ ಸಿಬ್ಬಂದಿ ರಾಮ್ ಅವರಿಗೆ ಟ್ವೀಟ್‌ನಲ್ಲಿ ಉಲ್ಲೇಖಿಸಿ ಲಾಸ್ಟ್ ಮೈಲ್ ಡೆಲಿವರಿಗೆ ಇವರನ್ನು ಬ್ಯುಸಿನೆಸ್ ಅಸೋಸಿಯೇಟ್ ಅನ್ನಾಗಿ ಮಾಡಿಕೊಳ್ಳಿರಿ ಎಂದು ಸಹ ಬರೆದಿದ್ದರು.