ಅತ್ಯಂತ ಅಪಾಯಕಾರಿ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ತರಬೇತಿ ನಡೆಸಿದ ರಷ್ಯಾ!
ರಷ್ಯಾ ದೇಶವೇನೋ ಸಣ್ಣ ರಾಷ್ಟ್ರ ಉಕ್ರೇನ್ ಮೇಲೆ ದಾಳಿ ನಡೆಸಿದೆ . ಆದರೇ, ಈಗ ಸ್ವತ: ತನ್ನದೇ ವಾಯು ಪ್ರದೇಶ, ಭೂ ಪ್ರದೇಶದ ರಕ್ಷಣೆಗೆ ಸಿದ್ದತೆ ನಡೆಸುತ್ತಿದೆ! ರಷ್ಯಾ ದೇಶ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ತರಬೇತಿ ಅನ್ನು ನಡೆಸುತ್ತಿದೆ. ಈ ಮೂಲಕ ನ್ಯಾಟೋ ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶವನ್ನು ರಷ್ಯಾ ರವಾನಿಸಿದೆ.
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ತರಬೇತಿ ನಡೆಸಿದ ರಷ್ಯಾ
ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ನಡೆಸುವವರನ್ನು ಮೂರ್ಖರು ಅಂತ ಕರೆಯದೇ ಬೇರೆ ದಾರಿ ಇಲ್ಲ. ಆದರೆ, ಈಗ ಉಕ್ರೇನ್ ವಿರುದ್ಧ ಯುದ್ದ ನಡೆಯುತ್ತಿರುವಾಗಲೇ ರಷ್ಯಾ ತನ್ನ ಅಸ್ತ್ರಗಳನ್ನು ಝಳಪಿಸಿ ತರಬೇತಿ ನಡೆಸುತ್ತಿದೆ. ರಷ್ಯಾ ದೇಶ, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿ ಒಂದು ವಾರ ಕಳೆದಿದೆ. ಆದರೇ, ಇನ್ನೂ ಪುಟ್ಟ ರಾಷ್ಟ್ರ ಉಕ್ರೇನ್ ಅನ್ನು ಸಂಪೂರ್ಣವಾಗಿ ಸೋಲಿಸಲು ಬಲಾಢ್ಯ ರಾಷ್ಟ್ರ ರಷ್ಯಾದ ಸೇನೆಗೂ ಸಾಧ್ಯವಾಗಿಲ್ಲ. ಈಗ ತನ್ನ ಬತ್ತಳಿಕೆಯಲ್ಲಿರುವ ಅಸ್ತ್ರಗಳನ್ನು ಒಂದೊಂದಾಗಿ ಬಳಸಲು ರಷ್ಯಾ ಮುಂದಾಗಿದೆ.
ರಷ್ಯಾ ಬತ್ತಳಿಕೆಯಲ್ಲಿರುವ ಮತ್ತೊಂದು ಪ್ರಮುಖ ಅಸ್ತ್ರವೇ ಎಸ್-400 ಟ್ರಿಂಫ್ ಏರ್ ಡಿಫೆನ್ಸ್ ಸಿಸ್ಟಮ್ (). ಅಂದರೆ ಇದು ವಾಯು ಪ್ರದೇಶದ ರಕ್ಷಣಾ ಅಸ್ತ್ರ. ಎಸ್-400 ಟ್ರಿಂಪ್ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಆ್ಯಕ್ಟೀವ್ ಮಾಡಿದರೆ, ಆ ಪ್ರದೇಶದಿಂದ 400 ಕಿಲೋಮೀಟರ್ ಪ್ರದೇಶದವರೆಗಿನ ರಾಕೆಟ್ ಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಎಸ್-400 ಟ್ರಿಂಪ್ ಏರ್ ಡಿಫೆನ್ಸ್ ಸಿಸ್ಟಮ್ ಇರುವ ಪ್ರದೇಶಕ್ಕೆ ಸಂಪೂರ್ಣ ರಕ್ಷಣೆಯನ್ನು ನೀಡುತ್ತೆ.
ಎಸ್-400 ಟ್ರಿಂಪ್ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಬಳಸಿ ಸದ್ಯ ರಷ್ಯಾ ದೇಶವು ಉಕ್ರೇನ್ ನಿಂದ 4 ಸಾವಿರ ಕಿಲೋಮೀಟರ್ ದೂರದ ಸೈಬಿರಿಯಾ ಪ್ರಾಂತ್ಯದಲ್ಲಿ ತರಬೇತಿ ಮತ್ತು ಅಭ್ಯಾಸ ನಡೆಸುತ್ತಿದೆ. ಈ ಮೂಲಕ ಉಕ್ರೇನ್ ಅನ್ನು ಬೆಂಬಲಿಸುತ್ತಿರುವ ನ್ಯಾಟೋ ರಾಷ್ಟ್ರಗಳಿಗೆ ಪ್ರಬಲವಾದ ಸಂದೇಶವನ್ನು ರಷ್ಯಾ ರವಾನಿಸಿದೆ. ಆಕ್ರಮಣಕಾರಿ ಧೋರಣೆ ತಾಳುವ ಸುಳಿವನ್ನು ಈ ಮೂಲಕ ರಷ್ಯಾ ನೀಡಿದೆ.
ಎಸ್-400 ಟ್ರಿಂಫ್ ಏರ್ ಡಿಫೆನ್ಸ್ ಸಿಸ್ಟಮ್ ವಿಶೇಷತೆ ಏನು?
ಎಸ್-400 ಟ್ರಿಂಫ್ ಏರ್ ಡಿಫೆನ್ಸ್ ಸಿಸ್ಟಮ್ ವಾಹನಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದು. ಭೂಮಿಯಿಂದ ಆಕಾಶದವರೆಗೂ ರಕ್ಷಣೆಯನ್ನು ನೀಡುವ ಎಸ್-400 ಟ್ರಿಂಫ್ ಅನ್ನು ವಿಶ್ವದಲ್ಲಿ ಅತ್ಯಂತ ಬಲಶಾಲಿ ಅಸ್ತ್ರ ಎಂದು ಪರಿಗಣಿಸಲಾಗುತ್ತೆ. ಏಕಕಾಲಕ್ಕೆ ಅನೇಕ ಟಾರ್ಗೆಟ್ ಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನ ಎಸ್-400 ಟ್ರಿಂಫ್ ಹೊಂದಿದೆ. ಫೈಟರ್ ಜೆಟ್, ಬಾಂಬರ್, ಕ್ರೂಸಿ, ಬ್ಯಾಲೆಸ್ಟಿಕ್ ಮಿಸೈಲ್ ಹಾಗೂ ಡ್ರೋಣ್ ಗಳನ್ನು 400 ಕಿಲೋಮೀಟರ್ ದೂರದಲ್ಲಿದ್ದಾಗಲೇ ಪತ್ತೆ ಹಚ್ಚಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಎಸ್-400 ಟ್ರಂಫ್ ನಲ್ಲಿ ರಾಕೆಟ್ ಗಳನ್ನು ಪತ್ತೆ ಹಚ್ಚುವ ರಾಡಾರ್ ವ್ಯವಸ್ಥೆ ಇದೆ. ದೂರಗಾಮಿ ಸರ್ವೇಲೇನ್ಸ್ ರಾಡಾರ್ ವ್ಯವಸ್ಥೆ ಇರುವುದರಿಂದ ಎಲ್ಲ ರಾಕೆಟ್ ಗಳನ್ನು ಪತ್ತೆ ಹಚ್ಚಿ, ಹೊಡೆದುರುಳಿಸುವ ಮೂಲಕ ದೊಡ್ಡ ನಗರಗಳಿಗೆ ರಕ್ಷಣೆಯನ್ನು ನೀಡುತ್ತೆ. 600 ಕಿಲೋಮೀಟರ್ ವ್ಯಾಪ್ತಿಯಲ್ಲಿ 160 ಅಸ್ತ್ರಗಳನ್ನ ಟ್ರ್ಯಾಕ್ ಮಾಡಬಲ್ಲದು. 400 ಕಿಲೋಮೀಟರ್ ವ್ಯಾಪ್ತಿಯಲ್ಲಿ 72 ಟಾರ್ಗೆಟ್ ಗಳನ್ನ ಪತ್ತೆ ಹಚ್ಚಿ ಹೊಡೆದುರುಳಿಸಬಲ್ಲದು.
ರಷ್ಯಾ ದೇಶವು ಎಸ್-400 ಟ್ರಿಂಫ್ ಅನ್ನು 2007ರಿಂದಲೇ ಬಳಸುತ್ತಿದೆ. ಹತ್ತಿರದ ಹಾಗೂ ದೂರಗಾಮಿ ಕ್ಷಿಪಣಿ ಧ್ವಂಸ ಏರ್ ಡಿಫೆನ್ಸ್ ಸಿಸ್ಟಮ್ ರಷ್ಯಾ ಬಳಿ ಇದೆ. ರಷ್ಯಾ ಈ ಮೊದಲು ಎಸ್-200 ಹಾಗೂ ಎಸ್-300 ಏರ್ ಡಿಫೆನ್ಸ್ ಸಿಸ್ಟಮ್ ಅನ್ನ ಬಳಸುತ್ತಿತ್ತು. ಈಗ ತನ್ನ ಅಸ್ತ್ರವನ್ನು ಅಪ್ ಗ್ರೇಡ್ ಮಾಡಿ ಎಸ್-400 ಟ್ರಿಂಪ್ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಬಳಸುತ್ತಿದೆ. ಈಗ 600 ಕಿಲೋಮೀಟರ್ ದೂರದವರೆಗಿನ ಬ್ಯಾಲೆಸ್ಟಿಕ್ ಮಿಸೈಲ್ ಹೊಡೆದುರುಳಿಸುವ ಎಸ್-600 ಟ್ರಿಂಫ್ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ರಷ್ಯಾ ಅಭಿವೃದ್ದಿಪಡಿಸುತ್ತಿದೆ.
ರಷ್ಯಾದಿಂದ ಎಸ್-400 ಟ್ರಿಂಫ್ ಏರ್ ಡಿಫೆನ್ಸ್ ಖರೀದಿಸಿದ ಭಾರತ
ಭಾರತವು ತನ್ನ ಸಾರ್ವಕಾಲಿಕ ಸ್ನೇಹಿ ರಾಷ್ಟ್ರ ರಷ್ಯಾದಿಂದ ಎಸ್-400 ಟ್ರಿಂಫ್ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು 39 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಗೆ ಸಹಿ ಹಾಕಿದೆ. ಒಟ್ಟು 5 ಯೂನಿಟ್ ಗಳನ್ನು ಭಾರತ ಖರೀದಿಸಿದ್ದು, ಈಗಾಗಲೇ ಒಂದು ಯೂನಿಟ್ ಅನ್ನು ರಷ್ಯಾ ಭಾರತಕ್ಕೆ ಪೂರೈಸಿದೆ. ಭಾರತವು ಎಸ್-400 ಟ್ರಿಂಫ್ ಅನ್ನು ಪಂಜಾಬ್ ರಾಜ್ಯದಲ್ಲಿ ಚೀನಾ ಹಾಗೂ ಪಾಕಿಸ್ತಾನದ ದಾಳಿಯನ್ನು ಮೆಟ್ಟಿ ನಿಲ್ಲಲು ನಿಯೋಜಿಸಿದೆ. ಈಗ ರಷ್ಯಾ ಮೇಲೆ ಆಮೆರಿಕಾ ಹಾಗೂ ಜಗತ್ತಿನ ವಿವಿಧ ದೇಶಗಳು ಆರ್ಥಿಕ ನಿರ್ಬಂಧ ವಿಧಿಸಿದ್ದರೂ, ಎಸ್-400 ಟ್ರಿಂಫ್ ಅನ್ನು ಭಾರತಕ್ಕೆ ಪೂರೈಕೆಗೆ ಯಾವುದೇ ತೊಂದರೆ ಆಗಲ್ಲ ಎಂದು ರಷ್ಯಾ ಹೇಳಿದೆ.