ಇತ್ತೀಚಿನ ಸುದ್ದಿರಾಜ್ಯ

2022 ರಾಜ್ಯ ಬಜೆಟ್​ಗೆ ದಿನಗಣನೆ ಆರಂಭವಾಗಿದೆ.‌

ಬೆಂಗಳೂರು: ರಾಜ್ಯ ಬಜೆಟ್​ಗೆ ದಿನಗಣನೆ ಆರಂಭವಾಗಿದೆ.‌ ಚೊಚ್ಚಲ ಬಜೆಟ್ ಮಂಡಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ ಜೋಳಿಗೆಯಲ್ಲಿ ಈ ಬಾರಿ ನೀರಾವರಿ ಕ್ಷೇತ್ರಕ್ಕೆ ಭರಪೂರ ಕೊಡುಗೆ ಸಿಗುವ ನಿರೀಕ್ಷೆ ಇದೆ. ನೀರಾವರಿ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಬೊಮ್ಮಾಯಿ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲೇಬೇಕಾದ ಒತ್ತಡದಲ್ಲಿದ್ದು, ರಾಜ್ಯದ ರೈತಾಪಿ ಸಮುದಾಯ ಇದೀಗ ಬಜೆಟ್ಅನ್ನು ಎದುರು ನೋಡುತ್ತಿದೆ‌.

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ನ್ಯಾಯಾಧೀಕರಣ 130 ಟಿಎಂಸಿ ಅಡಿ ನೀರ ಸಂಗ್ರಹಕ್ಕೆ ಗ್ರೀನ್​ ಸಿಗ್ನಲ್​ ನೀಡಿದೆ. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.256 ಮೀಟರ್​​ಗೆ ಎತ್ತರಿಸಲು ಅನುಮತಿ ಸಿಕ್ಕಿದೆ. 15 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿದೆ. ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕಿದೆ. ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ ಸೇರಿ ಏಳು ಜಿಲ್ಲೆಗಳಿಗೆ ನೀರಾವರಿ ಆಗುವ ಯೋಜನೆಯಾಗಿದೆ. 2017 ರಲ್ಲಿ ಪರಿಷ್ಕೃತ ಅಂದಾಜ 52 ಸಾವಿರ ಕೋಟಿಯಿದ್ದು, ಇವತ್ತಿನ ಲೆಕ್ಕಕ್ಕೆ 65 ಸಾವಿರ ಕೋಟಿ ರೂ. ಆಗಿದೆ. ಇದನ್ನು ವಿಳಂಬ ಮಾಡುತ್ತಾ ಹೋದರೆ ಲಕ್ಷ ಕೋಟಿ ಆಗಲಿದೆ. ಹಾಗಾಗಿ ತ್ವರಿತವಾಗಿ ಯೋಜನೆ ಮುಗಿಸಬೇಕು ಎನ್ನುವ ಒತ್ತಡ ರಾಜ್ಯ ಸರ್ಕಾರದ ಮೇಲಿದ್ದು, ಇದು ಸಿಎಂ ಬೊಮ್ಮಾಯಿ ಅವರಿಗೂ ಬಹು ದೊಡ್ಡ ಸವಾಲಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ, ರಾಷ್ಟ್ರದಲ್ಲೇ ಅತಿ ದೊಡ್ಡ ಯೋಜನೆಯಾಗಿದೆ. ಮೂರೂ ಹಂತದ ಯೋಜನೆ ಸೇರಿದಂತೆ 30 ಲಕ್ಷ ಎಕರೆ ನೀರಾವರಿ ಆಗಲಿದೆ, ಇದರಿಂದ ಉತ್ತರ ಕರ್ನಾಟಕದ ಅಸಮತೋಲನ ತಪ್ಪಿಸಬಹುದಾಗಿದೆ‌. ಮೂರನೇ ಹಂತದ ಯೋಜನೆಗೆ 1.30 ಲಕ್ಷ ಎಕರೆ ಜಮೀನು, 20 ಹಳ್ಳಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ, ಅದಕ್ಕಾಗಿ ಪುನರ್ವಸತಿ ಕೇಂದ್ರ ರಚಿಸಬೇಕಿದೆ. ಇದರ ಜೊತೆಗೆ ಮೂರನೇ ಹಂತದ ಯೋಜನೆ ಜಾರಿಗೆ ರಚಿಸಲಾಗಿರುವ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಆಯುಕ್ತರು ಸೇರಿ 850 ಹುದ್ದೆ ಮಂಜೂರಾಗಿದ್ದು, ಅದರಲ್ಲಿ 460 ಹುದ್ದೆಗಳು ಖಾಲಿ ಇವೆ. ಇವನ್ನೂ ಭರ್ತಿ ಮಾಡಿಕೊಳ್ಳಬೇಕಿದೆ‌. ಇದನ್ನು ಬಜೆಟ್​ನಲ್ಲಿ ಸೇರಿಸಲಾಗುತ್ತದೆ ಎನ್ನಲಾಗ್ತಿದೆ.

ಅನುದಾನದ ಅಗತ್ಯತೆ.. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದಲ್ಲಿ ಆಲಮಟ್ಟಿ ಜಲಾಶಯವನ್ನು ಎತ್ತರಿಸಲು 1.25 ಲಕ್ಷ ಕೋಟಿ ಅಗತ್ಯವಿದೆ. 20 ಗ್ರಾಮಗಳ ಸ್ಥಳಾಂತರಿಸಿ ಅವರಿಗೆ ಪುನರ್ವಸತಿ ಕಲ್ಪಿಸಲು, ಭೂ ಸ್ವಾಧೀನ ಪಡಿಸಿಕೊಳ್ಳಲು ಸದ್ಯ 2 ಸಾವಿರ ಕೋಟಿ ರೂ. ಕೊಡಲಾಗಿದೆ. ಆದರೆ, ಇದು ಸಾಲುವುದಿಲ್ಲ. ಇದಕ್ಕೆ ಬಜೆಟ್ ನಲ್ಲಿ ಹೆಚ್ಚುವರಿ ಅನುದಾನ ಮಂಜೂರು ಮಾಡಬೇಕಿದೆ. ಮೂರನೇ ಹಂತದ ಯೋಜನೆಗೆ ನೋಟಿಫಿಕೇಷನ್ ಆದ ತಕ್ಷಣ ಅದರ ಅನುಷ್ಠಾನಕ್ಕೆ ಬೇಕಾದ ಸೌಲಭ್ಯ ಕಲ್ಪಿಸುವ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡಬೇಕಿದೆ. ಅಗತ್ಯ ಕಾಲುವೆಗಳು, ನೀರಿನ ವಿತರಣೆ ಜಾಲ, ಪುನರ್ವಸತಿ ಇತ್ಯಾದಿಗಳಿಗೆ ಹಣಕಾಸು ಸೌಲಭ್ಯ ಘೋಷಿಸಬೇಕಿದೆ‌. ಜಲಸಂಪನ್ಮೂಲ ಇಲಾಖೆಯಲ್ಲಿ ಅನುಭವ ಇರುವ ಜೊತೆಗೆ ಸ್ವತಃ ಇಂಜಿನಿಯರ್ ಕೂಡ ಆಗಿರುವ ಬೊಮ್ಮಾಯಿ ಈಗ ಮುಖ್ಯಮಂತ್ರಿ ಆಗಿರುವ ಹಿನ್ನೆಲೆಯಲ್ಲಿ ಆದ್ಯತೆಯಾಗಿ ಪರಿಗಣಿಸಿ ಯುಕೆಪಿ ಮೂರನೇ ಹಂತದ ನೀರಿನ ಬಳಕೆಗೆ ಅನುವಾಗುವಂತೆ ಅಗತ್ಯ ಅನುದಾನವನ್ನು ಸಿಎಂ ಬಜೆಟ್ ನಲ್ಲಿ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ‌.

ಮೇಕೆದಾಟಿಗೆ ಅನುದಾನ.. ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ, ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ತೆಗೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ತರಬೇಕಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎರಡನ್ನೂ ನೀರಾವರಿ ಕ್ಷೇತ್ರದಲ್ಲಿ ಸಮತೋಲನ ಮಾಡಬೇಕಿದೆ. ಅಲ್ಲದೆ, ಈಗ ಕಾಂಗ್ರೆಸ್​ನವರು ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದಾರೆ. ಹಾಗಾಗಿ ಬಿಜೆಪಿಗೆ ಈ ಯೋಜನೆ ಪ್ರಮುಖವಾಗಿದ್ದು, ಯೋಜನೆ ಜಾರಿಗೆ ಪೂರಕವಾಗಿ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಬೇಕಿದೆ.

ಈಗಾಗಲೇ ಮೇಕೆದಾಟು ಯೋಜನೆಯ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯನ್ನು ಕಾವೇರಿ ನದಿಗೆ ಅಡ್ಡಲಾಗಿ ಆರ್ಕಾವತಿ ಹಾಗೂ ಕಾವೇರಿ ನದಿಯ ಸಂಗಮದ ಸಮೀಪದಲ್ಲಿ ನಿರ್ಮಿಸಿ, 67.16 ಟಿ.ಎಂ.ಸಿ ನೀರನ್ನು ಶೇಖರಿಸಲು ರೂ.9000 ಕೋಟಿ ಮೊತ್ತದ ಡಿ.ಪಿ.ಆರ್ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅದು ಕೇಂದ್ರ ಸರ್ಕಾರದ ವಿವಿಧ ನಿರ್ದೇಶನಾಲಯಗಳಲ್ಲಿ ಪರಿಶೀಲನೆಯಲ್ಲಿದೆ. ಕಾವೇರಿ ನ್ಯಾಯಾಧೀಕರಣದ ದಿನಾಂಕ 05-02-2007 ರ ಅಂತಿಮ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯದ ದಿನಾಂಕ 16-02-2018ರ ಆದೇಶದಲ್ಲಿ ಮಾರ್ಪಡಿಸಿರುವಂತೆ ತಮಿಳುನಾಡು ರಾಜ್ಯಕ್ಕೆ ಸಾಮಾನ್ಯ ಮಳೆ ವರ್ಷದಲ್ಲಿ 177.25 ಟಿ.ಎಂ.ಸಿ ನೀರನ್ನು ಮಾಸಿಕವಾರು ನಿಯಂತ್ರಿಸಲು. ಸರ್ವೋಚ್ಛ ನ್ಯಾಯಾಲಯದಿಂದ ಹಂಚಿಕೆಯಾಗಿರುವ 4.75 ಟಿ.ಎಂ.ಸಿ ನೀರನ್ನು ಬೆಂಗಳೂರು ನಗರವೂ ಸೇರಿದಂತೆ ಕುಡಿಯುವ ಹಾಗೂ ಗೃಹೋಪಯೋಗಿ ಉದ್ದೇಶಕ್ಕಾಗಿ ಉಪಯೋಗಿಸಿಕೊಳ್ಳಲು. 400 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಲು ಈ ಯೋಜನೆ ಕೈಗಳ್ಳಲಾಗುತ್ತಿದೆ. ಈಗ ಯೋಜನೆಗೆ ಅಗತ್ಯ ಅನುದಾನ ಮೀಸಲಿರಿಸಬೇಕಿದೆ.

ಕಳಸಾ ಬಂಡೂರಿ.. ಮಹಾದಾಯಿ ನೀರು ಹಂಚಿಕೆ ಕುರಿತು ನ್ಯಾಯಾಧೀರಣ ತೀರ್ಪು ನೀಡಿ ರಾಜ್ಯಕ್ಕೆ 13.5 ಟಿಎಂಸಿ ನೀರು ಹಂಚಿಕೆ ಮಾಡಿದೆ. ಅದರಲ್ಲಿ ಕಳಸಾ ಬಂಡೂರಿ ನಾಲೆಗಳಿಂದ 5 ಟಿಎಂಸಿ ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಬಹುದು, ಉಳಿದಿದ್ದನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬಹುದಾಗಿದೆ. ಗದಗ, ಬಾಗಲಕೋಟೆ, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರು ಪೂರೈಸುವ ಈ ಯೋಜನೆಗೆ ಯಾವುದೇ ಅಡ್ಡಿ ಇಲ್ಲ. ಯೋಜನೆ ಆರಂಭದಲ್ಲಿ ಕಳಸಾಕ್ಕೆ 44 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು, ಅದು ಈಗ 400 ಕೋಟಿ ರೂ.ಗೆ ಹೆಚ್ಚಾಗಿದೆ. ಬಂಡೂರಿ ನಾಲೆ ಯೋಜನೆ ವೆಚ್ಚ 40 ಕೋಟಿಯಿಂದ 370 ಕೋಟಿ ರೂ.ಗೆ ಏರಿಕೆಯಾಗಿದೆ. ಮಹಾದಾಯಿಗಾಗಿ ಪಾದಯಾತ್ರೆ ಹಾಗೂ ಇತರ ಹೋರಾಟ ಮಾಡಿದ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಅವರ ತಂದೆ ಮಾಜಿ ಸಿಎಂ ಎಸ್​ ಆರ್​ ಬೊಮ್ಮಾಯಿ ರೂಪಿಸಿದ ಯೋಜನೆಯನ್ನು ಜಾರಿ ಮಾಡುವ ಸವಾಲು ಈಗ ಅವರ ಮುಂದಿದೆ. ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಮೀಸಲಿರಿಸಿಬೇಕಿದೆ.

ಎತ್ತಿನಹೊಳೆ ಯೋಜನೆ.. ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನದ ಅಡೆತಡೆಗಳನ್ನು ನಿವಾರಿಸಿ, ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.

ಮೊದಲನೇ ಹಂತ.. ಎತ್ತಿನಹೊಳೆ ಯೋಜನೆಯ ಲಿಫ್ಟ್ ಕಾಮಗಾರಿಗಳು ಹಾಗೂ ವಿದ್ಯುತ್ ಪೂರೈಕೆ ಕಾಮಗಾರಿಗಳು.

ಎರಡನೇ ಹಂತ: ಎತ್ತಿನಹೋಳೆ ಗುರುತ್ವ ಕಾಲುವೆ (260.00 ಕಿ.ಮೀ) ಟಿ.ಜಿ.ಹಳ್ಳಿ ಮತ್ತು ರಾಮನಗರ ಫೀಡರ್ ಕಾಲುವೆ, ಮಧುಗಿರಿ ಫೀಡರ್ ಕಾಲುವೆ ಹಾಗೂ ಗೌರಿಬಿದನೂರು ಫೀಡರ್ ಕಾಲುವೆ ಮತ್ತು ಭೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿ.

ಮೊದಲನೇ ಹಂತದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಲಿಫ್ಟ್ ಕಾಮಗಾರಿಗಳು ಹಾಗೂ ವಿದ್ಯುತ್ ಪೂರೈಕೆ ಕಾಮಗಾರಿಗಳು ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಬರುತ್ತಿದ್ದು, ಪ್ರಸ್ತುತ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಸದರಿ ಕಾಮಗಾರಿಗಳನ್ನು ಮಾರ್ಚ್ 2022ರ ಅಂತ್ಯಕ್ಕೆ ಪೂರ್ಣಗೊಳಿಸಿ ಮುಂದಿನ ಮುಂಗಾರಿನ ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ನೀರನ್ನೆತ್ತಲು ಯೋಜಿಸಲಾಗಿದೆ. ಎರಡನೇ ಹಂತದ ಯೋಜನೆ ಕೈಗೆತ್ತಿಕೊಳ್ಳಬೇಕಿದ್ದು, ಬಜೆಟ್ ನಲ್ಲಿ ಅನುದಾನ ನೀಡಬೇಕಿದೆ.

ಅನುದಾನ ಹಂಚಿಕೆ ಸವಾಲು.. ರಾಜ್ಯದ ನೀರಾವರಿ ಯೋಜನೆಗಳಲ್ಲಿ ನಾಲ್ಕು ಯೋಜನೆಗಳು ಅತ್ಯಂತ ಪ್ರಮುಖವಾಗಿವೆ. ಇವುಗಳ ಅನುಷ್ಠಾನಕ್ಕೆ ಲಕ್ಷಾಂತರ ಕೋಟಿ ರೂ.ಗಳ ಅನುದಾನದ ಅಗತ್ಯವಿದೆ‌. ಯುಕೆಪಿ ಮೂರನೇ ಹಂತದ ಯೋಜನೆಗೆ 1.25 ಲಕ್ಷ ಕೋಟಿ, ಎತ್ತಿನಹೊಳೆ ಯೋಜನೆಗೆ 23 ಸಾವಿರ ಕೋಟಿ, ಮೇಕೆದಾಟು ಯೋಜನೆಗೆ 9 ಸಾವಿರ ಕೋಟಿ ರೂ. ಮತ್ತು ಕಳಸಾ ಬಂಡೂರಿಗೆ 400 ಕೋಟಿ ರೂ.ಗಳ ಅಗತ್ಯವಿದೆ. ಆದರೆ, ಇಷ್ಟು ದೊಡ್ಡ ಮಟ್ಟದ ಅನುದಾನ ಕಲ್ಪಿಸುವುದು ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿದೆ. ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಬೇಕಿದೆ. ಆದರೆ ಇದರಲ್ಲಿ ವಿಳಂಬವಾಗುತ್ತಾ ಹೋದಲ್ಲಿ ಯೋಜನಾ ವೆಚ್ಚವೂ ಹೆಚ್ಚಿ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ. ಈಗಾಗಲೇ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ನೀಡುವ ವಾಗ್ದಾನ ಮಾಡಿದ್ದ ಹಿಂದಿನ ಸರ್ಕಾರ ಅಗತ್ಯ ಅನುದಾನ ನೀಡಿಲ್ಲ. ಈಗ ಬೊಮ್ಮಾಯಿ ಸರ್ಕಾರಕ್ಕೆ ಈ ಯೋಜನೆ ಅನುಷ್ಠಾನಕ್ಕೆ ಅಗತ್ಯ ಅನುದಾನ ಬಿಡುಗಡೆ ಬಗ್ಗೆ ಘೋಷಣೆ ಮಾಡುವ ಅನಿವಾರ್ಯತೆ ಇದೆ. ಕಳೆದ ಬಾರಿ ಯಡಿಯೂರಪ್ಪ ಮಂಡಿಸಿದ ಬಜೆಟ್​​ನಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ 21,181 ಕೋಟಿ ರೂ, ಅನುದಾನ ಪ್ರಕಟಿಸಿದ್ದರು. ಆದರೆ, ಅಷ್ಟು ಅನುದಾನ ಸರಿಯಾಗಿ ಲಭ್ಯವಾಗಿಲ್ಲ. ಹಾಗಾಗಿ ಈ ಬಾರಿ ಹೆಚ್ಚಿನ ಪ್ರಮಾಣದ ಅನುದಾನದ ಘೋಷಣೆ ನಿರೀಕ್ಷೆ ಮಾಡಲಾಗಿದೆ. ಚುನಾವಣಾ ದೃಷ್ಟಿಯಿಂದ ರೈತಾಪಿ ಸಮುದಾಯದ ಓಲೈಕೆಗೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಘೋಷಿಸಲಾಗುತ್ತದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಮಾರ್ಚ್​ 4 ರಂದು ಬೊಮ್ಮಾಯಿ ಜೋಳಿಗೆಯಿಂದ ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಏನು ಸಿಗಲಿದೆ ಎನ್ನುವುದು ಗೊತ್ತಾಗಲಿದೆ.

Related Articles

Leave a Reply

Your email address will not be published. Required fields are marked *

Back to top button