ತಂದೆಯಿಂದ 14 ವರ್ಷದ ಮಗಳ ಅತ್ಯಾಚಾರ,ಅರಣ್ಯದಲ್ಲಿ ಬಿದ್ದಿತ್ತು ಪುಟ್ಟ ಬಾಲಕಿಯ ಶವ!
ಮಧ್ಯಪ್ರದೇಶ: “ಕೆಟ್ಟ ಮಕ್ಕಳು ಇರಬಹುದು, ಆದ್ರೆ ಕೆಟ್ಟ ತಂದೆ, ತಾಯಿ ಇರಲಿಕ್ಕಿಲ್ಲ” ಅಂತಾರೆ. ಆದ್ರೆ ಕೆಲವೊಂದು ಘಟನೆಗಳು ಈ ಗಾದೆ ಮಾತಿಗೆ ಅಪಚಾರ ಎನ್ನುವಂತೆ ನಡೆದು ಬಿಡುತ್ತದೆ. ಇನ್ನು ತಂದೆಯಂತೂ ಮಕ್ಕಳ ಪಾಲಿಗೆ ಯಾವತ್ತಿದ್ದರೂ ಹೀರೋನೇ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ತಂದೆ ಅಂದರೆ ಅಚ್ಚುಮೆಚ್ಚು. ಅಪ್ಪ ಅಂದ್ರೆ ಆಕಾಶ ಅಂತ ಅದಕ್ಕೆ ಹೇಳೋದು. ಎಲ್ಲಾ ಕಷ್ಟ ಸಹಿಸಿ, ನನ್ನ ಮಕ್ಕಳಿಗೆ ಏನೂ ಆಗಬಾರದು ಅಂತ ಅಪ್ಪ ಕಣ್ಣಲ್ಲಿ ಕಣ್ಣಿಟ್ಟು ಮಕ್ಕಳನ್ನು ನೋಡಿಕೊಳ್ತಾನೆ. ಆದ್ರೆ ಇಲ್ಲಿ ನಡೆದಿದ್ದು ಮಾತ್ರ ಎಲ್ಲಾ ಉಲ್ಟಾ. ತಾನೇ ಕೈ ತುತ್ತಿಟ್ಟು, ಬೆಳೆಸಿದ ಮಗಳ ಮೇಲೆ ತಂದೆಯೇ ಮಾಡಬಾರದ್ದು ಮಾಡಿದ್ದಾನೆ. ಆಕೆಯ ಪ್ರಾಣ ಹೋದರೂ ಬಿಡದ ಆತ, ಶವದ ಮೇಲೆಯೇ ಅತ್ಯಾಚಾರ ನಡೆಸಿದ್ದಾನಂತೆ. ಈ ಘಟನೆ ತಿಳಿದ ನಂತರ ಸಭ್ಯ ಸಮಾಜದ ಜನರೆಲ್ಲ ಒಮ್ಮೆ ಬೆಚ್ಚಿ ಬಿದ್ದಿದ್ದಾರೆ.
ಮಧ್ಯ ಪ್ರದೇಶದ ಗುನಾ ಎಂಬಲ್ಲಿ ಆಘಾತಕಾರಿ ಘಟನೆ
ಮಧ್ಯ ಪ್ರದೇಶ ರಾಜ್ಯದ ಗುನಾ ಜಿಲ್ಲೆಯ ಗ್ರಾಮವೊಂದರಲ್ಲಿ ಇಂಥದ್ದೊಂದು ಆಘಾತಕಾರಿ ಹಾಗೂ ಇಡೀ ಮಾನವ ಸಮಾಜವೇ ತಲೆ ತಗ್ಗಿಸುವಂತ ಪೈಶಾಚಿಕ ಘಟನೆ ನಡೆದು ಹೋಗಿದೆ. ಇಲ್ಲಿ ತನ್ನ ಮಗಳ ಪಾಲಿಗೆ ಹೀರೋ ಆಗಬೇಕಿದ್ದ ಅಪ್ಪನೇ ವಿಲನ್ ಆಗಿದ್ದಾನೆ. ಹೆಗಲ ಮೇಲೆ ಕೂರಿಸಿಕೊಂಡು ಆಕಾಶ ತೋರಿಸಬೇಕಾದ ಅಪ್ಪನೇ ರಾಕ್ಷಸನಂತೆ ಆಗಿದ್ದಾನೆ. ಕತ್ತಲೆಯಲ್ಲಿ ಘೋರಾರಣ್ಯದಲ್ಲಿ ಮಗಳನ್ನು ಸಾಯಿಸಿ, ಶವದ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ ಎಂಬ ಬಗ್ಗೆ ವರದಿಯಾಗಿದೆ.
40 ವರ್ಷದ ತಂದೆಯಿಂದ 14 ವರ್ಷದ ಮಗಳ ಕೊಲೆ
ಬಜರಂಗಗಡ ಪೊಲೀಸ್ ಠಾಣೆ ವ್ಯಾಪ್ತಿಯ ಜೈತಾ ಡೊಂಗರ್ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಅಲ್ಲಿನ ನಿವಾಸಿಯಾಗಿರುವ 40 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ವಿಕಲಚೇತನನಾಗಿದ್ದು, ತನ್ನ 14 ವರ್ಷದ ಮಗಳನ್ನು ಕೊಂದು, ಬಳಿಕ ಆಕೆಯ ಶವದ ಮೇಲೆ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.
ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದ ಕಾಮುಕ
ಕಳೆದ 2 ದಿನಗಳ ಹಿಂದೆ ಪೊಲೀಸ್ ಠಾಣೆಗೆ ತೆರಳಿದ್ದ ಈ ಪಾಪಿ ತಂದೆ, ತನ್ನ 14 ವರ್ಷದ ಮಗಳು ಮನೆಯಿಂದ ಕಾಣೆಯಾಗಿದ್ದಾಳೆ. ಆಕೆಯನ್ನು ಹುಡುಕಿಕೊಡಿ ಅಂತ ದೂರು ಕೊಟ್ಟಿದ್ದಾನೆ. ದೂರು ಸ್ವೀಕರಿಸಿದ ಪೊಲೀಸರು ಬಾಲಕಿಗಾಗಿ ಶೋಧಕಾರ್ಯ ನಡೆಸಿದ್ದಾರೆ.
ಅರಣ್ಯದಲ್ಲಿ ಬಿದ್ದಿತ್ತು ಪುಟ್ಟ ಬಾಲಕಿಯ ಶವ
ಪೊಲೀಸರು ತನಿಖೆ ನಡೆಸಿದಾಗ ಬಾಲಕಿಯ ಗ್ರಾಮದ ಹತ್ತಿರದ ಅರಣ್ಯದಲ್ಲಿ ಬಿದ್ದಿರುವುದು ತಿಳಿಯುತ್ತದೆ. ಪೋರ್ಸ್ಟ್ ಮಾರ್ಟಮ್ ಮಾಡಿದಾಗ ರೇಪ್ ಆಗಿರುವುದು ಗೊತ್ತಾಗುತ್ತದೆ. ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮನೆಯವರನ್ನೆಲ್ಲ ವಿಚಾರಿಸುತ್ತಾರೆ. ಆಗ ಕಾಣೆಯಾಗೋ ಹಿಂದಿನ ದಿನ ಮಗಳ ಜೊತೆ ಅಪ್ಪ ತೆರಳಿದ್ದ ಬಗ್ಗೆ ಅಕ್ಕಪಕ್ಕದ ಜನರು ಮಾಹಿತಿ ನೀಡ್ತಾರೆ.
ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟ ಪಾಪಿ
ಈ ಎಲ್ಲಾ ಹೇಳಿಕೆಗಳಿಂದ ತಂದೆ ಮೇಲೆಯೇ ಪೊಲೀಸರಿಗೆ ಅನುಮಾನ ಬರುತ್ತದೆ. ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಮನೆಯಲ್ಲಿ ಬೇರೆ ಸದಸ್ಯರಿದ್ದು, ಅತ್ಯಾಚಾರ ಮಾಡುವ ಉದ್ದೇಶದಿಂದಲೇ ಅರಣ್ಯಕ್ಕೆ ಕರೆದೊಯ್ದೆ. ಆದ್ರೆ ಆಕೆ ಅಲ್ಲಿ ತಪ್ಪಿಸಿಕೊಂಡು, ಮನೆಯವ್ರಿಗೆ ಹೇಳುವುದಾಗಿ ಬೆದರಿಸಿದಳು. ಆಗ ಏನು ಮಾಡಲೂ ತೋಚದೆ ಮಗಳನ್ನು ಕೊಂದೆ. ಬಳಿಕ ಆಕೆಯ ಶವದ ಮೇಲೆ ರೇಪ್ ಮಾಡಿದೆ ಅಂತ ಆಘಾತಕಾರಿ ಹೇಳಿಕೆ ನೀಡಿದ್ದಾನೆ.
ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಮುದ್ದು ಮಗಳನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಮತ್ತೊಂದೆಡೆ ಈ ಅಮಾನುಷ ಘಟನೆ ಬಗ್ಗೆ ತಿಳಿದ ಜನರು ಆಘಾತಕ್ಕೆ ಒಳಗಾಗಿದ್ದಾರೆ.