ರಷ್ಯಾ ಅಧ್ಯಕ್ಷ ಪುಟಿನ್ ನಿರ್ಧಾರಕ್ಕೆ ಬ್ರಿಟನ್ ಪ್ರಧಾನಿಯಿಂದಲೂ ವಿರೋಧ
ಲಂಡನ್: ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರಮವನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಖಂಡಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ಉಕ್ರೇನ್ ಮೇಲೆ ಅಪ್ರಚೋದಿತ ದಾಳಿಯನ್ನು ಪ್ರಾರಂಭಿಸುವ ಮೂಲಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಕ್ತಪಾತ ಮತ್ತು ವಿನಾಶದ ಮಾರ್ಗವನ್ನು ಆರಿಸಿಕೊಂಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.
‘ಉಕ್ರೇನ್ ಮೇಲೆ ರಷ್ಯಾ ದಾಳಿಯಿಂದಾಗಿ ನಾನು ದಿಗ್ಭ್ರಮೆಗೊಂಡಿದ್ದೇನೆ. ರಷ್ಯಾ ವಿರುದ್ಧ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ’ ಎಂದು ಜಾನ್ಸನ್ ಹೇಳಿದ್ದಾರೆ.
ಮಾನವೀಯತೆ ದೃಷ್ಟಿಯಿಂದ ಸಂಘರ್ಷ ನಿಲ್ಲಿಸುವಂತೆ ಪುಟಿನ್ಗೆ ವಿಶ್ವಸಂಸ್ಥೆ ಮನವಿ
ಉಕ್ರೇನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಮಾನವೀಯತೆಯ ದೃಷ್ಟಿಯಿಂದ ನಿಲ್ಲಿಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ‘ರಷ್ಯಾ ಅಧ್ಯಕ್ಷ ಪುಟಿನ್ ಅವರೇ, ಮಾನವೀಯತೆ ದೃಷ್ಟಿಯಿಂದ ನಿಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಿ’ ಎಂದು ಅವರು ಮನವಿ ಮಾಡಿದ್ದಾರೆ.