ಬಿಬಿಎಂಪಿ ಚುನಾವಣೆ : ಸುಪ್ರೀಂಕೋರ್ಟ್ ಸಮ್ಮತಿ
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ.
ಪಾಲಿಕೆಗೆ ಶೀಘ್ರವೇ ಚುನಾವಣೆ ನಡೆಸಲು ಆದೇಶಿಸುವಂತೆ ಕೋರಿ ಚುನಾವಣಾ ಆಕಾಂಕ್ಷಿಗಳು ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ ರಮಣ, ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ಪೀಠ, ತುರ್ತು ವಿಚಾರಣೆಗೆ ಸಮ್ಮತಿಸಿರುವುದಾಗಿ ತಿಳಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲೆ ಮೀನಾಕ್ಷಿ ಅರೋರ ವಾದ ಮಂಡಿಸಿ, ಬಿಬಿಎಂಪಿ ಚುನಾಯಿತ ಸದಸ್ಯರ ಅವಧಿ 2020ಕ್ಕೆ ಮುಕ್ತಾಯವಾಗಿದೆ. ಆದರೆ, ಸುಪ್ರೀಂಕೋರ್ಟ್ ತಡೆಯಾಜ್ಞೆ ಪರಿಣಾಮ ಪಾಲಿಕೆಗೆ ಚುನಾವಣೆ ನಡೆಸಿಲ್ಲ ಎಂದು ವಿವರಿಸಿದರು.
ವಾದ ಪರಿಗಣಿಸಿದ ಪೀಠ, ದೇಶದಲ್ಲಿ ಹಲವು ಚುನಾವಣೆಗಳು ನಡೆದಿವೆ. ನಿಮ್ಮ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸುತ್ತೇವೆ ಎಂದು ಪೀಠ ತಿಳಿಸಿದೆ. ಬಿಬಿಎಂಪಿ ವಾರ್ಡ್ಗಳನ್ನು ಹೆಚ್ಚಿಸುವ ಕಾರಣ ನೀಡಿದ್ದ ಸರ್ಕಾರ, ಪಾಲಿಕೆಯ ಅವಧಿ ಮುಗಿದ ನಂತರವೂ ಚುನಾವಣೆ ನಡೆಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಕಾಂಗ್ರೆಸ್ ಪಕ್ಷದ ಬಿಬಿಎಂಪಿ ಮಾಜಿ ಸದಸ್ಯ ಎಂ.ಶಿವರಾಜು ಹಾಗೂ ರಾಜ್ಯ ಚುನಾವಣಾ ಆಯೋಗ ಪ್ರತ್ಯೇಕವಾಗಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದವು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಪಾಲಿಕೆಗೆ ಚುನಾವಣೆ ನಡೆಸಲು 2020ರ ಡಿ.4ರಂದು ಆದೇಶಿಸಿತ್ತು. 2020ರ ಸೆ.23ರಂದು ಹೊರಡಿಸಿರುವ ಅಧಿಸೂಚನೆಯಂತೆ ಈಗಿರುವ 198 ವಾರ್ಡ್ಗಳಿಗೆ ಆರು ವಾರಗಳ ಒಳಗೆ ಚುನಾವಣೆ ನಡೆಸಲು ಆದೇಶಿಸಿತ್ತು.
ಅಲ್ಲದೇ, ರಾಜ್ಯ ಸರ್ಕಾರ ಪಾಲಿಕೆಯನ್ನು ಈಗಿರುವ 198 ವಾರ್ಡ್ಗಳಿಂದ 243 ವಾರ್ಡ್ಗಳಿಗೆ ಹೆಚ್ಚಿಸಲು ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಸರಿ ಇದೆಯಾದರೂ, ಅದು ಈ ಚುನಾವಣೆಗೆ ಅನ್ವಯಿಸುವುದಿಲ್ಲ. ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿದ ಬಳಿಕ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ.
ಹೀಗಾಗಿ, ಹೊಸ ಕಾಯ್ದೆಯು ಈ ಚುನಾವಣೆಗೆ ಅನ್ವಯಿಸುವುದಿಲ್ಲ ಹಾಗೂ ಅದರ ಆಧಾರದಲ್ಲಿ ಚುನಾವಣೆ ಮುಂದೂಡಲು ಬರುವುದಿಲ್ಲ. ಆದ್ದರಿಂದ ಪಾಲಿಕೆಗೆ ಸಂವಿಧಾನದ ವಿಧಿ 243 (ಯು) ಪ್ರಕಾರ ಚುನಾವಣೆ ನಡೆಸಬೇಕು ಎಂದು ಸ್ಪಷ್ಟಪಡಿಸಿತ್ತು.
ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ರಾಜ್ಯ ಸರ್ಕಾರ, ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಬಿಬಿಎಂಪಿಯ ವಾರ್ಡ್ಗಳ ಸಂಖ್ಯೆ ಹೆಚ್ಚಿಸಲಾಗಿದೆ. 243 ವಾರ್ಡ್ಗಳ ಗಡಿ ಹಾಗೂ ಮೀಸಲಾತಿ ನಿಗದಿಪಡಿಸಬೇಕಿದೆ. ಹೀಗಾಗಿ, ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿತ್ತು. ಸರ್ಕಾರದ ಮನವಿ ಪರಿಗಣಿಸಿದ್ದ ಅಂದಿನ ಸಿಜೆಐ ಎಸ್ ಎ ಬೊಬ್ಡೆ ನೇತೃತ್ವದ ಪೀಠ, ಹೈಕೋರ್ಟ್ ಆದೇಶಕ್ಕ ತಡೆ ನೀಡಿತ್ತು. ಬಳಿಕ ತಡೆ ವಿಸ್ತರಿಸಿಕೊಂಡು ಬರಲಾಗಿತ್ತು.