ಇತ್ತೀಚಿನ ಸುದ್ದಿದೇಶರಾಜ್ಯಸುದ್ದಿ

ಹೊರರಾಜ್ಯಗಳಿಂದ ಪ್ರವೇಶಿಸುವವರಿಗೆ ಬಿಗ್ ರಿಲೀಫ್!

ಕೊರೊನಾ ಮೂರನೇ ಅಲೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಲವಾರು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿತ್ತು.. ಅದರಲ್ಲೂ ಹೊರರಾಜ್ಯಗಳಿಂದ ಕರ್ನಾಟಕ ಪ್ರವೇಶಮಾಡುವ ಎಲ್ಲಾ ಪ್ರಯಾಣಿಕರಿಗೆ ಕಡ್ಡಾಯವಾಗಿ 72 ಗಂಟೆಗಳ ಮುಂಚಿನ ಕೋವಿಡ್ ಪರೀಕ್ಷೆಯ RTPCR ವರದಿ ಸಲ್ಲಿಕೆ ಮಾಡುವುದನ್ನು ಕಡ್ಡಾಯ ಮಾಡಿತ್ತು. ಇದರ ಭಾಗವಾಗಿ ಕೇರಳದಿಂದ ಕರ್ನಾಟಕ ಪ್ರವೇಶಿಸುವ ಎಲ್ಲಾ ಗಡಿಗಳಲ್ಲಿ ಆರ್ಟಿ ಪಿಸಿಆರ್ ವರದಿ ಕಡ್ಡಾಯ ಮಾಡಿತ್ತು. ಹೀಗಾಗಿ ಕೇರಳದಿಂದ ಕರ್ನಾಟಕ ಪ್ರವೇಶ ಮಾಡಬೇಕಾದರೆ ಎಲ್ಲರೂ ಕಡ್ಡಾಯವಾಗಿ RTPCR ಪರೀಕ್ಷೆ ಮಾಡಿಸಿಕೊಂಡ ಬಳಿಕವಷ್ಟೇ ರಾಜ್ಯ ಪ್ರವೇಶ ಪಡೆಯಬೇಕಿತ್ತು. ಆದರೆ ಸದ್ಯ ಕೊರೋನಾ ಪರಿಸ್ಥಿತಿ ಸುಧಾರಣೆಯಾಗಿದ್ದು ರಾಜ್ಯದಲ್ಲಿ ಕಡಿಮೆ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ನೂತನ ಆದೇಶ ಹೊರಡಿಸಿದ್ದು ಕೇರಳ ಹಾಗೂ ಗೋವಾದಿಂದ ರಾಜ್ಯ ಪ್ರಯಾಣ ಮಾಡುವ ಪ್ರಯಾಣಿಕರಿಗೆ ರಿಲೀಫ್ ನೀಡಿದೆ.

RTPCR ಪರೀಕ್ಷಾ ವರದಿಗೆ ಬ್ರೇಕ್

ಕೆಲವು ದಿನಗಳ ಹಿಂದಷ್ಟೇ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಮಾಡಿದ್ದ ಆರ್ ಟಿ ಪಿ ಸಿ ಆರ್ ವರದಿ ಕಡ್ಡಾಯ ದಿಂದ ರಿಲೀಫ್ ನೀಡಲಾಗಿತ್ತು. ಈಗ ಗೋವಾ ಮತ್ತು ಕೇರಳದಿಂದ ರಾಜ್ಯ ಪ್ರವೇಶಿಸುವ ಪ್ರಯಾಣಿಕರಿಗೂ ಸಹ ಸರ್ಕಾರ ರಿಲೀಫ್ ನೀಡಿದ್ದು RTPCR ವರದಿ ಕಡ್ಡಾಯವಲ್ಲ ಎಂದು ತಿಳಿಸಿದೆ. ಹೀಗಾಗಿ ರಸ್ತೆ ವಿಮಾನ ಹಾಗೂ ರೈಲು ಮಾರ್ಗದ ಮೂಲಕ ರಾಜ್ಯ ಪ್ರವೇಶ ಮಾಡುವ ಕೇರಳ ಹಾಗೂ ಗೋವಾದ ಪ್ರಯಾಣಿಕರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ

2 ಡೋಸ್ ಲಸಿಕೆ ಕಡ್ಡಾಯ

ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಕೇರಳ ಮತ್ತು ಗೋವಾದಿಂದ ಬರುವ ಪ್ರಯಾಣಿಕರಿಗೆ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿ ಅಗತ್ಯವಿಲ್ಲ. ಈ ನಿಯಮವನ್ನು ಸಡಿಲಿಸಿ ಎಂದು ಶಿಫಾರಸು ಮಾಡಿತ್ತು. ಹೀಗಾಗಿ ಸುತ್ತೋಲೆಯೊಂದನ್ನು ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿಕೆ ಅನಿಲ್ ಕುಮಾರ್, ಪ್ರಸ್ತುತ ಕೋವಿಡ್-19 ಪರಿಸ್ಥಿತಿ ಸುಧಾರಿಸಿರುವುದರಿಂದ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಹೇಳಿದ್ರು. ಆದ್ರೆ RTPCR ಬದಲಿಗೆ ಎರಡು ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದುವುದನ್ನು ಕಡ್ಡಾಯವಾಗಿ ಇರಬೇಕಿದೆ.

ದಕ್ಷಿಣಕನ್ನಡ ಗಡಿಭಾಗದಲ್ಲಿ ತಪಾಸಣಾ ಕೇಂದ್ರ ಕ್ಲೋಸ್

ಇನ್ನು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪರಿಶೀಲನೆ ಮಾಡುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಲವು ಕ್ರಮಕ್ಕೆ ಮುಂದಾಗಿದೆ.ಹೀಗಾಗಿ ಸರ್ಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡ ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿದ್ದ RTPCR ಪರೀಕ್ಷಾ ಕೇಂದ್ರವನ್ನು ಮುಚ್ಚಿದೆ. ಆದ್ರೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣಪತ್ರದ ಪರೀಕ್ಷೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಂದುವರೆಸಿದೆ.

ಅಂತರರಾಜ್ಯ ಚೆಕ್ ಪೋಸ್ಟ್ ಮುಂದುವರಿಕೆ

ಇನ್ನು ರಾಜ್ಯ ಸರ್ಕಾರದ ಆದೇಶದಂತೆ ದಕ್ಷಿಣ ಕನ್ನಡ ಹಾಗೂ ಕೇರಳ ಗಡಿಯಲ್ಲಿ ಎಲ್ಲ ಆರ್ ಟಿ ಪಿಸಿಆರ್ ತಪಾಸಣೆ ಕೇಂದ್ರಗಳನ್ನು ಮುಚ್ಚಲಾಗುವುದು. ಆದ್ರೆ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ರಾಜ್ಯ ಸರಕಾರದ ನಿರ್ದೇಶನದಂತೆ ಕಣ್ಗಾವಲು, ನಿಯಂತ್ರಣ ಮತ್ತು ಜಾಗರೂಕತೆ ಮಾರ್ಗಸೂಚಿಗಳನ್ವಯ ಕೇರಳ-ಕರ್ನಾಟಕ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ 2ಡೋಸ್ ಲಸಿಕೆ ಪ್ರಮಾಣ ಪತ್ರದ ತಪಾಸಣೆ ಮುಂದುವರಿಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ತಿಳಿಸಿದ್ದಾರೆ..

ಇನ್ನು ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮದಂತೆ ಕಾನೂನು ಕ್ರಮಗಳ ಜತೆಗೆ ಇತರೆ ಕಾನೂನು ನಿಬಂಧನೆಗಳ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button