ಇಂದು ಸ್ಯಾಂಡಲ್ವುಡ್ನಲ್ಲೇ ಏಳು ಸಿನಿಮಾಗಳು ರಿಲೀಸ್!
ಶುಕ್ರವಾರ ಬಂತು ಎಂದರೆ ಸಾಕು, ಚಿತ್ರರಂಗದಲ್ಲಿ ಹಬ್ಬದ ಕಳೆ ಮೂಡುತ್ತದೆ. ದೊಡ್ಡ ಬಜೆಟ್ ಚಿತ್ರಗಳು ಹಾಗೂ ಸಣ್ಣ ಬಜೆಟ್ನ ಚಿತ್ರಗಳು ಒಟ್ಟೊಟ್ಟಿಗೆ ಥಿಯೇಟರ್ಗೆ ಲಗ್ಗೆ ಇಡುತ್ತವೆ. ಕೆಲ ಸಿನಿಮಾಗಳು ಪ್ರಚಾರ ಮಾಡಿ ಒಳ್ಳೆಯ ಹೈಪ್ ಪಡೆದುಕೊಂಡರೆ, ಇನ್ನೂ ಕೆಲ ಚಿತ್ರಗಳು ಯಾವುದೇ ಪ್ರಚಾರವಿಲ್ಲದೆ, ಅದೃಷ್ಟ ಪರೀಕ್ಷೆಗೆ ಮುಂದಾಗುತ್ತವೆ. ಸ್ಯಾಂಡಲ್ವುಡ್ನಲ್ಲೇ ಏಳು ಸಿನಿಮಾಗಳು ರಿಲೀಸ್ ಆಗುತ್ತಿವೆ. ಅವುಗಳಲ್ಲಿ ‘ಬೈ ಟೂ ಲವ್’, ಗಿಲ್ಕಿ ಚಿತ್ರಗಳು ಪ್ರಮುಖವಾಗಿದೆ.
‘ಬೈ ಟೂ ಲವ್’
ನಟ ಧನ್ವೀರ್ ಮತ್ತು ಶ್ರೀಲೀಲಾ ‘ಬೈ ಟೂ ಲವ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಪ್ರೀತಿ-ಪ್ರೇಮದ ಕಥೆ ಸಿನಿಮಾದ ಹೈಲೈಟ್ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿದೆ. ‘ಬಜಾರ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟವರು ಧನ್ವೀರ್. ‘ಕಿಸ್’ ಚಿತ್ರದ ಮೂಲಕ ಶ್ರೀಲೀಲಾ ಬೇಡಿಕೆ ಹೆಚ್ಚಿಸಿಕೊಂಡರು. ಇಬ್ಬರೂ ‘ಬೈ ಟೂ ಲವ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಹರಿ ಸಂತೋಷ್ ನಿರ್ದೇಶನವಿದೆ. ಸಾಧು ಕೋಕಿಲ, ರಂಗಾಯಣ ರಘು, ಅಚ್ಯುತ್ ಕುಮಾರ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವರದ
ಖ್ಯಾತ ನಟ ವಿನೋದ್ ಪ್ರಭಾಕರ್ ಅಭಿನಯದ ‘ವರದ’ ಚಿತ್ರ ಈ ಮೊದಲು ವಿವಾದದ ಮೂಲಕ ಸುದ್ದಿಯಾಗಿತ್ತು. ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿನೋದ್ ಪ್ರಭಾಕರ್ ಅವರು ತಮ್ಮದೇ ಚಿತ್ರತಂಡದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಪುನೀತ್ ಫೋಟೋ ಹಾಕಿಲ್ಲ ಎಂದು ನಿರ್ದೇಶಕ ಉದಯ್ ಪ್ರಕಾಶ್ ವಿರುದ್ಧ ಕಿಡಿಕಾರಿದ್ದರು. ಇದರಿಂದ ಚಿತ್ರತಂಡಕ್ಕೆ ಹಿನ್ನಡೆ ಆಗಿದೆ. ಅಮಿತಾ ರಂಗನಾಥ್, ಚರಣ್ ರಾಜ್, ಅನಿಲ್ ಸಿದ್ದು, ಅಶ್ವಿನಿ ಗೌಡ, ಎಂ.ಕೆ. ಮಠ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಬಹುಕೃತ ವೇಷಂ
ವೈಷ್ಣವಿ ಗೌಡ ನಟನೆಯ ಸಿನಿಮಾ ‘ಬಹುಕೃತ ವೇಷಂ’. ‘ಗೌಡ್ರು ಸೈಕಲ್’ ಸಿನಿಮಾದ ನಾಯಕ ಶಶಿಕಾಂತ್ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ಕೆ. ಎಳ್ಳಂಪಳ್ಳಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇವರು ಈ ಹಿಂದೆ ‘ಗೌಡ್ರು ಸೈಕಲ್’ ಚಿತ್ರ ನಿರ್ದೇಶನ ಮಾಡಿದ್ದರು. ಎಚ್. ನಂದ ಹಾಗೂ ಡಿ.ಕೆ. ರವಿ ನಿರ್ಮಾಣದ ಈ ಚಿತ್ರಕ್ಕೆ ಅಧ್ಯಾಯ್ ತೇಜ್ ಕಥೆ ಚಿತ್ರಕಥೆ ಬರೆದಿದ್ದಾರೆ. ಹರ್ಷಕುಮಾರ್ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ‘ ಸಿನಿಮಾಗೆ ಸಂಕಲನ ಮಾಡಿರೋ ಜ್ಞಾನೇಶ್ ಬಿ. ಮಾತಾಡ್ ಈ ಸಿನಿಮಾಕ್ಕೆ ಸಂಕಲನ ಮಾಡಿದ್ದಾರೆ.
ಗಿಲ್ಕಿ
ಚೈತ್ರಾ ಆಚಾರ್ ಮತ್ತು ತಾರಕ್ ಪೊನ್ನಪ್ಪ ಜೋಡಿಯಾಗಿ ‘ಗಿಲ್ಕಿ’ ಚಿತ್ರದಲ್ಲಿ ನಟಿಸಿದ್ದಾರೆ. ಜೋಡಿ ಎಂದಮಾತ್ರಕ್ಕೆ ಮಾಮೂಲಿ ಸಿನಿಮಾಗಳಂತೆ ಮರಸುತ್ತುವ ಪ್ರೇಮಿಗಳ ಪಾತ್ರ ಇದಲ್ಲ. ಬುದ್ಧಿಮಾಂದ್ಯನಾಗಿ ತಾರಕ್ ಪೊನ್ನಪ್ಪ ನಟಿಸಿದರೆ, ಸೆಲೆಬ್ರಲ್ ಪಾಲ್ಸಿ ಕಾಯಿಲೆಯಿಂದ ಬಳಲುತ್ತಿರುವ ಅಂಗವಿಕಲ ಹುಡುಗಿಯಾಗಿ ಚೈತ್ರಾ ಆಚಾರ್ ಅಭಿನಯಿಸಿದ್ದಾರೆ. ಯೂಟ್ಯೂಬ್ನಲ್ಲಿ ‘ಗಿಲ್ಕಿ’ ಸಿನಿಮಾದ ಟ್ರೇಲರ್ ನೋಡಿರುವ ಜನರು ಕೂಡ ಪಾಸಿಟಿವ್ ಆಗಿ ಕಮೆಂಟ್ ಮಾಡಿದ್ದಾರೆ. ಕೆಂಪರಾಜು ಬಿ.ಎಸ್. ಸಂಕಲನ, ಆದಿಲ್ ನದಾಫ್ ಸಂಗೀತ ನಿರ್ದೇಶನ, ಕಾರ್ತಿಕ್ ಎಸ್. ಛಾಯಾಗ್ರಹಣ ಈ ಚಿತ್ರಕ್ಕಿದೆ. ಇಂದು ಈ ಸಿನಿಮಾ ತೆರೆಗೆ ಬರುತ್ತಿದೆ. ಇದಲ್ಲದೆ, ‘ಮಹಾ ರೌದ್ರಂ’, ‘ಭಾವಚಿತ್ರ’, ‘ಗರುಡಾಕ್ಷ’ ಚಿತ್ರಗಳು ಕೂಡ ಇಂದು ರಿಲೀಸ್ ಆಗುತ್ತಿದೆ.