ಹೈಕೋರ್ಟ್ ಆದೇಶ ಪಾಲಿಸಿ ಕಾಲೇಜು ಆರಂಭಿಸಲಾಗುತ್ತದೆ! ಬಸವರಾಜ ಬೊಮ್ಮಾಯಿ
ಬೆಂಗಳೂರು: ಬುಧವಾರದಿಂದ ಪಿಯು, ಡಿಗ್ರಿ ಕಾಲೇಜು ಆರಂಭಿಸಲಾಗುತ್ತೆ. ಹೈಕೋರ್ಟ್ ಆದೇಶ ಪಾಲಿಸಿ ಕಾಲೇಜು ಆರಂಭಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸಭೆ ಬಳಿಕ ಶಿಕ್ಷಣ ಸಚಿವ ನಾಗೇಶ್ ಹೇಳಿಕೆ ನೀಡಿದ್ದಾರೆ. ನಮ್ಮ ಪೋಷಕರು ಶಿಕ್ಷಣ ಮುಂದುವರಿಸುವ ಉದ್ದೇಶದಲ್ಲಿದ್ದಾರೆ. ಕೋರ್ಟ್ ಆದೇಶ ಉಲ್ಲಂಘಿಸುವಂತಿಲ್ಲ, ಆದೇಶ ಪಾಲಿಸಬೇಕು. ಘಟನೆ ಸಂಬಂಧ ಮಾಹಿತಿ ಕಲೆಹಾಕಲಾಗುತ್ತಿದೆ. ನಾವು ಹೇಳುವುದಿಷ್ಟೇ, ಹೈಕೋರ್ಟ್ ಆದೇಶ ಪಾಲಿಸಬೇಕು. ಆದೇಶದಲ್ಲಿರುವುದನ್ನ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಸೋಮವಾರ (ಫೆಬ್ರವರಿ 14) ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಪಿಯು ಹಾಗೂ ಡಿಗ್ರಿ ಕಾಲೇಜು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಮೂರು ದಿನಗಳ ರಜೆಯ ಬಳಿಕ ಸೋಮವಾರದಿಂದ ಹೈಸ್ಕೂಲ್ ತರಗತಿಗಳನ್ನು ಪುನಾರಂಭ ಮಾಡಲಾಗಿತ್ತು. ಮುಂದುವರಿದು ನಂತರದ ತರಗತಿಗಳನ್ನು ಕೂಡ ಆರಂಭಿಸಲು ಸರ್ಕಾರ ಮುಂದಾಗಿದೆ.
ಪೋಷಕರು ಮತ್ತು ಮಕ್ಕಳು ಆತಂಕಪಡುವ ಅಗತ್ಯವಿಲ್ಲ. ಶಾಲಾ ಕಾಲೇಜುಗಳ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪೋಲಿಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಲಿದೆ. ಶಾಲಾ ಕಾಲೇಜುಗಳ ಜತೆಗೆ ಪೋಲಿಸ್ ಇಲಾಖೆ ಇರಲಿದೆ. ಹೈಕೋರ್ಟ್ ಮಧ್ಯಂತರ ಆದೇಶ ಯಾರು ಉಲ್ಲಂಘನೆ ಮಾಡುವಂತಿಲ್ಲ, ಸಮವಸ್ತ್ರ ಧರಿಸಿ ಶಾಲಾ ಕಾಲೇಜುಗಳಿಗೆ ಹಾಜರಾಗಬೇಕು ಎಂದು ಗೃಹಸಚಿವ ಆರಗ ಜ್ಙಾನೇಂದ್ರ ತಿಳಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಉನ್ನತ ಶಿಕ್ಷಣ ಡಾ. ಅಶ್ವತ್ಥ್ ನಾರಾಯಣ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಜೊತೆ ಸಿಎಂ ಸಭೆ ನಡೆಸಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಇಂದು ಪ್ರೌಢಶಾಲೆಗಳ ತರಗತಿಯ ಆರಂಭ ಹಿನ್ನೆಲೆ, ಕೆಲ ಪ್ರೌಢಶಾಲೆಗಳಲ್ಲಿ ಹಿಜಾಬ್ ಸಂಘರ್ಷ ಮುಂದುವರಿದಿದೆ. ಈ ಬಗ್ಗೆ ಹಾಗೂ ಪಿಯು, ಡಿಗ್ರಿ ಕಾಲೇಜು ಆರಂಭ ವಿಚಾರವಾಗಿ ಸಿಎಂ ಚರ್ಚೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹಿಜಾಬ್ ವಿವಾದ ಸಂಬಂಧಿಸಿದಂತೆ ಕರ್ನಾಟಕದ ಜಿಲ್ಲಾಡಳಿತಗಳು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿವೆ. ಈ ಕುರಿತು ಸಿಎಂ ಬೊಮ್ಮಾಯಿ ಈಗಾಗಲೇ ಸಭೆಗಳನ್ನು ನಡೆಸಿದ್ದಾರೆ. ಪ್ರಕರಣವು ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ.
ಹಿಜಾಬ್ ವಿವಾದ; ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ ಕರ್ನಾಟಕ ಹೈಕೋರ್ಟ್
ಕರ್ನಾಟಕದಲ್ಲಿ ಆತಂಕದ ವಾತಾವರಣ ಸೃಷ್ಟಿಮಾಡಿದ್ದ ಹಿಜಾಬ್ ವಿವಾದ ಸಂಬಂಧಿಸಿ ಇದೀಗ ಕರ್ನಾಟಕ ಹೈಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದ್ದು ವಿಚಾರಣೆಯನ್ನು ಮಂಗಳವಾರಕ್ಕೆ (ಫೆಬ್ರವರಿ 15) ಮುಂದೂಡಿ ಆದೇಶ ನೀಡಲಾಗಿದೆ. ಅರ್ಜಿದಾರರ ಪರವಾಗಿ ದೇವದತ್ ಕಾಮತ್, ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ್ ನಾವದಗಿ ಹಾಗೂ ಇತರರು ವಾದ ಮಂಡಿಸಿದ್ದಾರೆ. ಹಿಜಾಬ್ ವಿವಾದದ ವಿಚಾರಣೆಗೆ ರಚಿಸಲಾಗಿರುವ ಮೂವರು ನ್ಯಾಯಮೂರ್ತಿಗಳ ಪೀಠ ಪ್ರಕರಣದ ವಿಚಾರಣೆ ನಡೆಸಿದೆ. ಇದೇ ವೇಳೆ, ಮಾಧ್ಯಮಗಳಲ್ಲಿ ಅರ್ಜಿದಾರರ ಮಾಹಿತಿ ನೀಡದಂತೆ ನಿರ್ಬಂಧಿಸಲು ಮನವಿ ಮಾಡಲಾಗಿದೆ. ಅರ್ಜಿದಾರರು ಅಪ್ರಾಪ್ತ ವಿದ್ಯಾರ್ಥಿನಿಯರು ಆಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್ ಮನವಿ ಮಾಡಿದ್ದಾರೆ.