ಶ್ರೀರಾಮಾನುಜರ ಪ್ರತಿಮೆ ಸ್ಥಾಪನೆ ಐತಿಹಾಸಿಕ ನಿರ್ಧಾರ! ರಾಮನಾಥ್ ಕೋವಿಂದ್
ಹೈದರಾಬಾದ್: ಶ್ರೀರಾಮಾನುಜರ ಪ್ರತಿಮೆ ಸ್ಥಾಪನೆ ಐತಿಹಾಸಿಕ ನಿರ್ಧಾರ. ಇದಕ್ಕೆ ಶ್ರಮಿಸಿದ ತ್ರಿದಂಡಿ ಚಿನ್ನಜೀಯರ್ ಸ್ವಾಮೀಜಿ ಹಾಗೂ ಡಾ.ಜೆ. ರಾಮೇಶ್ವರ ರಾವ್‌ಗೆ ಧನ್ಯವಾದಗಳು ಎಂದು ಹೈದರಾಬಾದ್ನ ರಂಗಾರೆಡ್ಡಿ ಜಿಲ್ಲೆಯ ಮುಚ್ಚಿಂತಲ್ ಬಳಿಯ ಶ್ರೀರಾಮಾನುಜರ ಪ್ರತಿಮೆ ಸ್ಥಳದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. ಇಲ್ಲಿ ನಡೆಯುತ್ತಿರುವ ಶ್ರೀರಾಮಾನುಜಾಚಾರ್ಯರ ಸಹಸ್ರಮಾನೋತ್ಸವ/ ಸಹಸ್ರಾಬ್ದಿ ಕಾರ್ಯಕ್ರಮದಲ್ಲಿ ಫೆಬ್ರವರಿ 13ರಂದು ಅವರು ಪಾಲ್ಗೊಂಡು ಮಾತನಾಡಿದ್ದಾರೆ.
ಶ್ರೀರಾಮಾನುಜರ ಪ್ರತಿಮೆ ಸ್ಥಾಪನೆ ಐತಿಹಾಸಿಕ ನಿರ್ಧಾರವಾಗಿದೆ. ಪ್ರತಿಮೆ ಸ್ಥಾಪನೆಯಿಂದ ಹೊಸ ಆಧ್ಯಾಯ ಆರಂಭವಾಗಿದೆ. ಭಕ್ತಿ ಮಾರ್ಗ, ಸಮಾನತ್ವವನ್ನು ರಾಮಾನುಜರು ಬೋಧಿಸಿದ್ದರು. ಸಮಾನತೆಗಾಗಿ ಶ್ರೀರಾಮಾನುಜರು ಶ್ರಮಿಸಿದ್ದರು. ಭಕ್ತಿಯಿಂದ ಮುಕ್ತಿ ಸಿಗುತ್ತದೆ ಎಂದು ರಾಮಾನುಜರು ನಿರೂಪಿಸಿದ್ದರು. ದಕ್ಷಿಣ ಭಾರತಕ್ಕೆ ಭಕ್ತಿ ಮಾರ್ಗವನ್ನು ಪರಿಚಯಿಸಿದ ಕೀರ್ತಿ ರಾಮಾನುಜರಿಗೆ ಸಲ್ಲುತ್ತದೆ ಎಂದು ಕೋವಿಂದ್ ಹೇಳಿದ್ದಾರೆ.
ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ತೊಲಗಿಸಲು ರಾಮಾನುಜರು ಹೋರಾಡಿದ್ದರು. ಡಾ.ಬಿ.ಆರ್. ಅಂಬೇಡ್ಕರ್‌ಗೂ ರಾಮಾನುಜರು ಸ್ಫೂರ್ತಿಯಾಗಿದ್ದರು. ಮಹಾತ್ಮ ಗಾಂಧೀಜಿ ಅವರಿಗೂ ರಾಮಾನುಜರು ಸ್ಫೂರ್ತಿಯಾಗಿದ್ದರು. ದೇವರ ದರ್ಶನಕ್ಕೆ ಪೂಜಾರಿ ಅಗತ್ಯವಿಲ್ಲವೆಂದು ಅಂದೇ ಹೇಳಿದ್ದರು. ದೇವರನ್ನು ಪೂಜಿಸಲು ಎಲ್ಲಾ ವರ್ಗದವರು ಅರ್ಹರೆಂದು ಹೇಳಿದ್ದರು. ವಸುದೈವ ಕುಟುಂಬಕಂ ಎಂಬ ಪದ ರಾಮಾನುಜರಿಂದಲೇ ಬಂದದ್ದು ಎಂದು ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.
ಶ್ರೀರಾಮಾನುಜಾಚಾರ್ಯರ 120 ಕೆಜಿಯ ಚಿನ್ನದ ವಿಗ್ರಹ ಅನಾವರಣಗೊಳಿಸಿದ ರಾಮನಾಥ್ ಕೋವಿಂದ್
ಇದೇ ವೇಳೆ ಶ್ರೀರಾಮಾನುಜಾಚಾರ್ಯರ 120 ಕೆಜಿಯ ಚಿನ್ನದ ವಿಗ್ರಹವನ್ನು ರಾಮನಾಥ್ ಕೋವಿಂದ್ ಅನಾವರಣಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಕೋವಿಂದ್‌ರವರ ಪತ್ನಿ ಸವಿತಾ, ತ್ರಿದಂಡಿ ಚಿನ್ನಜೀಯರ್ ಶ್ರೀಗಳು, ರಾಮೇಶ್ವರ ರಾವ್ ಉಪಸ್ಥಿತಿ ವಹಿಸಿದ್ದಾರೆ. ಫೆಬ್ರವರಿ 5 ರಂದು 216 ಅಡಿ ಎತ್ತರದ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಇದೀಗ ಫೆಬ್ರವರಿ 13ರಂದು ರಾಮಾನುಜರ 120 ಕೆಜಿಯ ಚಿನ್ನದ ವಿಗ್ರಹವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟನೆ ಮಾಡಿದ್ದಾರೆ.
ರಾಮಾನುಜರ ಪ್ರತಿಮೆ ಸ್ಥಳಕ್ಕೆ ರಾಷ್ಟ್ರಪತಿ ಭೇಟಿ ನೀಡಿರುವುದು ಸಂತಸ ತಂದಿದೆ. ರಾಷ್ಟ್ರಪತಿ ಅವರು ಕುಟುಂಬ ಸಮೇತ ಆಗಮಿಸಿದ್ದಕ್ಕೆ ಸಂತಸವಾಗಿದೆ ಎಂದು ರಾಮಾನುಜರ ಪ್ರತಿಮೆ ಸ್ಥಳಕ್ಕೆ ರಾಷ್ಟ್ರಪತಿ ಕೋವಿಂದ್ ಭೇಟಿ ಹಿನ್ನೆಲೆ ಕಾರ್ಯಕ್ರಮ ಉದ್ದೇಶಿಸಿ ತ್ರಿದಂಡಿ ಚಿನ್ನಜೀಯರ್ಶ್ರೀ ಮಾತನಾಡಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಕೋವಿಂದ್ ಅವರಿಗೆ ಸನ್ಮಾನ ಮಾಡಲಾಗಿದೆ.
ರಾಮಾನುಜಾಚಾರ್ಯರ ಬೃಹತ್ ಪ್ರತಿಮೆಯನ್ನು ರಾಷ್ಟ್ರಪತಿ ಕೋವಿಂದ್ ವೀಕ್ಷಿಸಿದ್ದಾರೆ. ಪತ್ನಿ ಸವಿತಾ ಜತೆ ಪ್ರತಿಮೆ ವೀಕ್ಷಣೆ ಮಾಡಿದ್ದಾರೆ. ಹೈದರಾಬಾದ್ ಬಳಿಯ ರಂಗಾರೆಡ್ಡಿ ಜಿಲ್ಲೆಯ ಮುಚ್ಚಿಂತಲ್ ಬಳಿ ಶ್ರೀರಾಮನಗರಂನಲ್ಲಿ ನಿರ್ಮಿಸಿರುವ 216 ಅಡಿ ಎತ್ತರದ ಪ್ರತಿಮೆಯನ್ನು ಕಣ್ತುಂಬಿಕೊಂಡಿದ್ದಾರೆ. ಇದಕ್ಕೂ ಮೊದಲು, ದಿವ್ಯ ಸಾಕೇತಂ ಆಶ್ರಮದಲ್ಲಿನ 108 ದೇವಾಲಯಗಳ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತ್ರಿದಂಡಿ ಚಿನ್ನಜೀಯರ್ಶ್ರೀಗಳು, ಮೈ ಹೋಮ್ಸ್ ಗ್ರೂಪ್ ಚೇರ್ಮನ್ ಡಾ. ಜೆ. ರಾಮೇಶ್ವರ ರಾವ್ ಉಪಸ್ಥಿತರಿದ್ದರು.