ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿ.ಎಸ್.ಪ್ರಹ್ಲಾದ್ ನೀವು ಕೋರ್ಟ್ ನಲ್ಲಿದ್ದೀರಾ ಎಚ್ಚರವಿರಲಿ ನಿಮ್ಮನ್ನು ಇಲ್ಲಿಂದಲೇ ಜೈಲಿಗೆ ಕಳುಹಿಸುತ್ತೇವೆ: ಹೈಕೋರ್ಟ್ ತರಾಟೆ!
ಬೆಂಗಳೂರು: ರಾಜ್ಯ ರಾಜಧಾನಿ ಎಷ್ಟೋ ಅಭಿವೃದ್ಧಿ ಕಂಡಿದ್ದರೂ ರಸ್ತೆ ಗುಂಡಿಗಳು ಮಾತ್ರ ನಗರಕ್ಕೆ ಕಪ್ಪು ಚುಕ್ಕೆಯಂತಿವೆ. ವಾಹನ ಸವಾರರು ದಿನನಿತ್ಯ ಗುಂಡಿಗಳಿಂದ ಬಿಬಿಎಂಪಿಗೆ ಹಿಡಿಶಾಪ ಹಾಕೋದು ಸಾಮಾನ್ಯವಾಗಿಬಿಟ್ಟಿದೆ. ಇಂದು ಕರ್ನಾಟಕ ಹೈಕೋರ್ಟ್ ರಸ್ತೆ ಗುಂಡಿಗಳ ಸಂಬಂಧ ಬೆಂಗಳೂರು ಮಹಾನಗರ ಪಾಲಿಕೆಗೆ ಚಾಟಿ ಬೀಸಿದೆ.
ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ನೀವು ಯಾಂತ್ರಿಕ ಗುಂಡಿ ಮುಚ್ಚುವ ಯಂತ್ರ ಬಳಸಿದ್ದೀರಾ ಎಂಬ ಹೈಕೋರ್ಟ್ ಪ್ರಶ್ನೆಗೆ ಪ್ರಹ್ಲಾದ್ ಗೊಂದಲಕಾರಿ ಉತ್ತರ ನೀಡಿದರು. ಮೊದಲಿಗೆ ಹೌದು ಎಂದು ನಂತರ ಇಲ್ಲ ಎಂದ ಮುಖ್ಯ ಇಂಜಿನಿಯರ್ ವಿರುದ್ಧ ಹೈಕೋರ್ಟ್ ಗರಂ ಆಯಿತು. ಕೋರ್ಟ್ ಅನ್ನು ದಾರಿ ತಪ್ಪಿಸಲು ಯತ್ನಿಸಿದರೆ ಹುಷಾರ್.. ಇಲ್ಲಿಂದಲೇ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ. ನೀವು ಕೋರ್ಟ್ ನಲ್ಲಿದ್ದೀರಾ ಎಚ್ಚರವಿರಲಿ ಎಂದು ಮುಖ್ಯ ಇಂಜಿನಿಯರ್ .ಎಸ್.ಪ್ರಹ್ಲಾದ್ ಗೆ ಸಿಜೆ ರಿತುರಾಜ್ ಅವಸ್ಥಿ ತರಾಟೆಗೆ ತೆಗೆದುಕೊಂಡರು.
ರಸ್ತೆ ಗುಂಡಿಗೆ 9 ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಿಮ್ಮ ಮುಖ್ಯ ಇಂಜಿನಿಯರ್ ಮೇಲೇಕೆ ಎಫ್ಐಆರ್ ದಾಖಲಿಸಬಾರದು..? ನಿಮ್ಮ ಇಂಜಿನಿಯರ್ ಗಳು ಜೈಲಿಗೆ ಹೋಗಲಿ. ಇಂಜಿನಿಯರ್ ಗಳು ಜನರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಪ್ರತಿ ಮಳೆಯ ನಂತರ ರಸ್ತೆ ಗುಂಡಿಗಳು ಏಕೆ ಹಾಳಾಗುತ್ತವೆ. ಡಾಂಬರು ಗುಣಮಟ್ಟ ಕಾಪಾಡದವರ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದೀರಾ..? ಇಂತಹ ಕೆಟ್ಟ ದುರಸ್ತಿ ಮಾಡಲು ಎಂತಹ ತಂತ್ರಜ್ಞಾನ ಬಳಸುತ್ತೀರಿ? ಜನರ ಹಣ ಪೋಲಾಗುತ್ತಿರುವ ಬಗ್ಗೆ ಆತಂಕವಿದೆ. ರಿಪೇರಿಯಾದ ರಸ್ತೆಗಳೇ ಗುಂಡಿ ಏಕೆ ಬೀಳುತ್ತಿವೆ. ಕಳಪೆ ರಸ್ತೆಗಳಿಗೆ ಕಾರಣರಾದ ಅಧಿಕಾರಿಗಳನ್ನು ಬಿಡಲ್ಲ ಎಂದು ಬಿಬಿಎಂಪಿಗೆ ಸಿಜೆ ರಿತುರಾಜ್ ಅವಸ್ಥಿ ಎಚ್ಚರಿಕೆ ನೀಡಿದರು.
ಪ್ರಕರಣ ಸಂಬಂಧ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ 1 ವಾರಗಳ ಕಾಲ ಸಮಯ ಕೋರಿದ್ರು. ಈ ಹಿನ್ನೆಲೆಯಲ್ಲಿ ಫೆ.15 ಕ್ಕೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿತು. ಜೊತೆಗೆ ರಸ್ತೆ ಗುಂಡಿ ಮುಚ್ಚುವ ನೀಲನಕ್ಷೆಗೆ ಕೋರ್ಟ್ ಸೂಚನೆ ನೀಡಿತು. ಯಾಂತ್ರಿಕ ರಸ್ತೆ ಗುಂಡಿ ಮುಚ್ಚುವ ತಂತ್ರಜ್ಞಾನ ಬಳಸಿ, ಗುಣಮಟ್ಟ ಉತ್ತಮವಾಗಿದ್ದರೆ ಮಾತ್ರ ಈ ತಂತ್ರಜ್ಞಾನ ಬಳಸಿ ಎಂದು ಸೂಚಿಸಿದೆ.