shikshanaಇತ್ತೀಚಿನ ಸುದ್ದಿವಿದೇಶಸುದ್ದಿ

 ಹಿಜಾಬ್ ವಿವಾದ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ!UAE ರಾಣಿಯೂ ಇದರಲ್ಲಿ ಭಾಗಿ,

ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಹಾಜರಾಗುವ ವಿಚಾರ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಹಿಜಾಬ್ ವಿವಾದ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನು ಬೈಂದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸಲು ಅವಕಾಶ ನೀಡದಂತೆ ಆಗ್ರಹಿಸಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದ ಘಟನೆಯೂ ನಡೆದಿದೆ. ಇದರ ನಂತರ ಸರ್ಕಾರ ಆಯಾ ಕಾಲೇಜುಗಳ ಸಮವಸ್ತ್ರ ಧರಿಸಿಯೇ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗುವುದು ಕಡ್ಡಾಯ ಎಂದು ಸುತ್ತೋಲೆ ಕೂಡ ಹೊರಡಿಸಿದೆ. ಆದರೆ ಈ ವಿಚಾರ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನೆಲೆಗೆ ಬಂದಿದೆ.

ಕರ್ನಾಟಕದ ಉಡುಪಿಯಲ್ಲಿ ನಡೆದ ಹಿಜಾಬ್ ವಿವಾದ ವಿಚಾರ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಟ್ವಿಟ್ಟರ್ ನಲ್ಲಿ ಈಗ #HijabisOurRight ಹ್ಯಾಶ್ ಟ್ಯಾಗ್ ಜೊತೆಗೆ ಹಿಜಾಬ್ ವಿವಾದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯವಾಗಿ ಯುಎಇ ರಾಣಿ ಕೂಡ ಟ್ವೀಟ್ ಮಾಡಿದ್ದಾರೆ.

ಯುಎಇ ರಾಣಿ ಶೇಖ್ ಹೆಂಡ್ ಫೈಸಲ್ ಟ್ವೀಟ್

ಯುಎಇ ರಾಣಿ ಶೇಖ್ ಹೆಂಡ್ ಫೈಸಲ್ ಅಸ್-ಕಸ್ಸೇಮಿ ಹಿಜಾಬ್ ವಿವಾದದ ಕುರಿತು ಟ್ವೀಟ್ ಮಾಡಿದ್ದಾರೆ. “ಭಾರತ ಸರ್ಕಾರ ಶಾಲೆಗಳಲ್ಲಿ ಹಿಜಾಬ್ ಧರಿಸಿ ಬಾರದಂತೆ ಪ್ರತಿಬಂಧಕಾಜ್ಞೆ ಹೊರಡಿಸುವ ಇಚ್ಛೆಯಲ್ಲಿದೆ” ಎಂದು ಒಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ “ಯುಎಇಯಲ್ಲಿ ಜನಾಂಗೀಯ ತಾರತಮ್ಯ ಮಾಡುವವರಿಗೆ ದಂಡ ವಿಧಿಸಲಾಗುತ್ತದೆ”. ಮತ್ತೊಂದು ಟ್ವೀಟ್ ನಲ್ಲಿ “ನಾನು ಶಾಂತಿಯುತ ಭಾರತವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಸಮವಸ್ತ್ರ ಸಂಹಿತೆಯನ್ನೇ ಪಾಲಿಸಬೇಕು

ಈ ಮಧ್ಯೆ ಈಗ ಹಿಜಾಬ್ ವಿಚಾರ ಹೈಕೋರ್ಟ್ ಮೆಟ್ಟಿಲೇರಿದೆ. ಈ ಮೊದಲು 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿನ ಒಳಗೆ ಬರೋದಕ್ಕೆ ಯತ್ನಿಸಿದ್ದರು. ಈ ಹಿಜಾಬ್ ವಿವಾದ ಘಟನೆ ಈಗ ಶಿವಮೊಗ್ಗಕ್ಕೂ ತಟ್ಟಿದೆ. ಕರ್ನಾಟಕದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿಯೂ ಸಮವಸ್ತ್ರ ಸಂಹಿತೆಯನ್ನೇ ಪಾಲಿಸಬೇಕು. ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಶಾಲಾ ಕಾಲೇಜುಗಳಿಗೆ ಬರಲು ಯಾರಿಗೂ ಅವಕಾಶ ನೀಡುವುದಿಲ್ಲ. ಈ ಕುರಿತು ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ಸುತ್ತೋಲೆ ಪ್ರಕಟಿಸಿದ್ದೇವೆ ಎಂದು ಶಿಕ್ಷಣ ಸಚಿವ  ಬಿ.ಸಿ.ನಾಗೇಶ್ ಹೇಳಿದ್ದಾರೆ.

ರಾಜಕೀಯ ನಾಯಕರ ವಾಕ್ಸಮರ

ಇನ್ನು ಹಿಜಾಬ್ ವಿವಾದ ಈಗ ಉಡುಪಿ, ಕುಂದಾಪುರ, ಮೈಸೂರು, ಶಿವಮೊಗ್ಗಕ್ಕೂ ವ್ಯಾಪಿಸಿದೆ. ಕಾಲೇಜುಗಳಿಗೆ ಹಿಜಾಬ್ ಧರಿಸಿ ಹೋಗುವ ಮೂಲಕ ಸರ್ಕಾರದ ನಿಯಮಕ್ಕೆ ವಿದ್ಯಾರ್ಥಿನಿಯರು ಸೆಡ್ಡು ಹೊಡೆದಿದ್ದಾರೆ. ಇನ್ನು ಹಿಜಾಬ್ ವಿಚಾರ ರಾಜಕೀಯ ನಾಯಕರ ವಾಕ್ಸಮರಕ್ಕೂ ಕಾರಣವಾಗಿದೆ.

ಹಿಜಾಬ್ ವಿವಾದ ಆರಂಭವಾದ ಉಡುಪಿ ಜಿಲ್ಲೆಯಲ್ಲಿ ತಾಲಿಬಾನೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರು ಹೇಳಿದ್ದಾರೆ. ಇತ್ತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮುಸ್ಲಿಂ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಬರಬೇಕು ಎಂದಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕಾಂಗ್ರೆಸ್ ಪಕ್ಷದ ಇಚ್ಛೆಯಂತೆ ಸರ್ಕಾರ ನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲ. ಸಮವಸ್ತ್ರದ ಪರಿಕಲ್ಪನೆ ಬ್ರಿಟಿಷರ ಕಾಲದಿಂದಲೂ ಬಂದಿದೆ. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ದೇಶವನ್ನು ವಿಭಜಿಸಿತು ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button