ಪುನೀತ್ ಸ್ಮರಣಾರ್ಥ ಪ್ರತಿ ವರ್ಷ 15 ಮಕ್ಕಳ ದತ್ತು ಸ್ವೀಕಾರ!
ನಟ ಪುನೀತ್ ರಾಜ್ಕುಮಾರ್ ನಿಧನರಾಗಿ ಮೂರು ತಿಂಗಳು ಕಳೆದಿದೆ. ಸಾಮಾಜಿಕ ಕೆಲಸಗಳ ಕಾರಣದಿಂದ ಅಪ್ಪು ಎಲ್ಲರಿಗೂ ಪ್ರೇರಣೆ ಆಗಿದ್ದಾರೆ. ಅನೇಕ ಕಡೆಗಳಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ. ಕೊಪ್ಪಳದ ಗಂಗಾವತಿ ತಾಲೂಕಿನ ಗಡ್ಡಿ ಸದ್ಧರ್ಮ ಶ್ರೀ ಗುರುಕುಲ ಶಾಲಾ ಮಕ್ಕಳಿಂದ ಪ್ರತಿ ದಿನವೂ ಪುನೀತ್ ರಾಜ್ಕುಮಾರ್ ಫೋಟೋಗೆ ಪುಷ್ಪ ನಮನ ಸಲ್ಲಿಸಲಾಗುತ್ತಿದೆ. ಅಪ್ಪು ಅವರ ಸಾಮಾಜಿಕ ಕಳಕಳಿಯಿಂದ ಶ್ರೀಗಳು ಪ್ರೇರಣೆಗೊಂಡಿದ್ದಾರೆ. ಹಾಗಾಗಿ ಪ್ರತಿ ವರ್ಷ ಪುನೀತ್ ರಾಜ್ಕುಮಾರ್ ಹೆಸರಲ್ಲಿ 15 ಮಕ್ಕಳ ದತ್ತು ಸ್ವೀಕಾರಕ್ಕೆ ತೀರ್ಮಾನಿಸಲಾಗಿದೆ.
ದತ್ತು ಮಕ್ಕಳಿಗೆ ಸದ್ಧರ್ಮ ಶಾಲೆ ಉಚಿತ ಶಿಕ್ಷಣ ನೀಡಲಿದೆ. ಆಟ-ಪಾಠಗಳ ಜೊತೆಗೆ ಬಾಲ್ಯದಲ್ಲಿಯೇ ಮಕ್ಕಳಿಗೆ ಶಿಕ್ಷಕರಿಂದ ಮಾನವೀಯ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಪುನೀತ್ ಅವರ ಪ್ರೇರಣೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ನೇತ್ರದಾನದ ಬಗ್ಗೆ ಮಕ್ಕಳು ಚಿಂತನೆ ನಡೆಸಿದ್ದಾರೆ. ಹೀಗೆ ಅನೇಕ ಕಡೆಗಳಲ್ಲಿ ಪುನೀತ್ ಸ್ಮರಣಾರ್ಥ ಉತ್ತಮ ಕೆಲಸಗಳನ್ನು ಜನರು ಮಾಡುತ್ತಿದ್ದಾರೆ. ಪ್ರತಿ ದಿನ ಹೊಸ ಹೊಸ ಘಟನೆಗಳು ವರದಿ ಆಗುತ್ತಲೇ ಇವೆ