ತೆಲಂಗಾಣ: ‘ಅಕ್ಕ’ ಅಂದ್ರೆ ‘ಮತ್ತೊಬ್ಬ ಅಮ್ಮ’ ಅನ್ನೋ ಮಾತಿದೆ. ತಾಯಿಯಷ್ಟೇ ಅಥವಾ ಒಮ್ಮೊಮ್ಮೆ ತಾಯಿಗಿಂತಲೂ ಹೆಚ್ಚಿನ ಕಾಳಜಿ ಮಾಡುವವಳು, ಪ್ರೀತಿ ತೋರುವವಳು ಅಕ್ಕ. ಅಮ್ಮನಂತೆ ಆಕೆಯೂ ತ್ಯಾಗಮಯಿ. ತನಗೆ ಏನೇ ಕಷ್ಟ ಬಂದರೂ ಸರಿ, ಆ ಕಷ್ಟ ನನ್ನ ತಮ್ಮಂದಿರು, ತಂಗಿಯರಿಗೆ ಬರಬಾರದು ಅಂತ ಅಕ್ಕಂದಿರು ಆಶಿಸುತ್ತಾರೆ. ಆಕೆ ಮದುವೆಯಾಗಿ ಗಂಡನ ಮನೆ ಸೇರಿದರೂ ತವರುಮನೆ ಮೇಲಿರುವ ವ್ಯಾವೋಹ ಹೋಗೋದಿಲ್ಲ. ತಮ್ಮಂದಿರು, ತಂಗಿಯರ ಮೇಲಿನ ಪ್ರೀತಿ ಕಡಿಮೆ ಆಗೋದಿಲ್ಲ. ಅಕ್ಕ ಅಂದ್ರೆ ಅಮ್ಮನಷ್ಟೇ ಎಲ್ಲರಿಗೂ ಪ್ರೀತಿ. ನಾವು ಯಾಕೆ ಇಷ್ಟೆಲ್ಲಾ ಹೇಳ್ತೀವಿ ಅಂದ್ರೆ ಇಲ್ಲೊಬ್ಬಳು ತಂಗಿ ಇದಕ್ಕೆಲ್ಲ ಅಪವಾದ ಎನ್ನುವಂತೆ ಇದ್ದಾಳೆ. ತನ್ನ ಅಕ್ಕನನ್ನೇ ಬೆಂಕಿ ಹಚ್ಚಿ ಕೊಂದು ಬಿಟ್ಟಿದ್ದಾಳೆ.
ತೆಲಂಗಾಣದಲ್ಲಿ ನಡೀತು ಭೀಕರ ಘಟನೆ
ಅಕ್ಕನನ್ನೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇಲ್ಲಿನ ಮೇದಕ್ ಜಿಲ್ಲೆಯ ವಾಡಿಯಾರಾಮ್ ಎಂಬ ಗ್ರಾಮದಲ್ಲಿ ಈ ದುಷ್ಕೃತ್ಯ ನಡೆದು ಹೋಗಿದೆ. ವರಲಕ್ಷ್ಮೀ ಎಂಬಾಕೆಯೇ ಬೆಂಕಿಯಲ್ಲಿ ಸುಟ್ಟು ಹೋಗಿದ್ದರೆ, ಆಕೆಯ ತಂಗಿ ರಾಜೇಶ್ವರಿ ಆಸ್ಪತ್ರೆ ಸೇರಿದ್ದಾಳೆ.
ಪೆಟ್ರೋಲ್ ಸುರಿದಳು, ಬೆಂಕಿ ಹಚ್ಚೇ ಬಿಟ್ಟಳು!
ಇಲ್ಲಿ ಮೃತಪಟ್ಟ ವರಲಕ್ಷ್ಮೀ ಹಾಗೂ ರಾಜೇಶ್ವರಿ ಇಬ್ಬರೂ ಬೇರೆ ಬೇರೆಯವರೇನಲ್ಲ. ಇವರಿಬ್ಬರೂ ಸ್ವಂತ ಅಕ್ಕ ತಂಗಿಯರು. ಮೇಲ್ನೋಟಕ್ಕೆ ಇಬ್ಬರೂ ಚೆನ್ನಾಗಿಯೇ ಇದ್ದರು ಎನ್ನಲಾಗಿದೆ. ಕಳೆದ ಸೋಮವಾರ ರಾಜೇಶ್ವರಿ ವರಲಕ್ಮೀ ಮನೆಗೆ ಬಂದಿದ್ದಾಳೆ. ಇಬ್ಬರಿಗೂ ಮಾತುಕತೆ ನಡೆದಿದೆ. ಕೊನೆಗೆ ಅದು ಗಲಾಟೆಯ ರೂಪ ಪಡೆದುಕೊಂಡಿದೆ. ಈ ವೇಳೆ ಗಲಾಟೆ ತಾರಕ್ಕಕೇರಿದೆ. ಆಗ ರಾಜೇಶ್ವರಿ ಅಲ್ಲೇ ಇದ್ದ ಪೆಟ್ರೋಲ್ ಕ್ಯಾನ್ ತೆಗೆದುಕೊಂಡು ಅಕ್ಕನ ಮೇಲೆ ಸುರಿದಿದ್ದಾಳೆ. ಅಕ್ಕ ಎನ್ನುವುದನ್ನೂ ನೋಡದೇ ಬೆಂಕಿ ಹಚ್ಚಿಯೇ ಬಿಟ್ಟಿದ್ದಾಳೆ.
ಬೆಂಕಿಯಲ್ಲಿ ಸುಟ್ಟೇ ಹೋದಳು ಅಕ್ಕ
ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆಯೇ ವರಲಕ್ಷ್ಮೀ ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆದರೆ ಅದು ಸಾಧ್ಯವಾಗದೇ ಬೆಂಕಿ ಜೋರಾಗಿ ಹೊತ್ತಿಕೊಂಡಿದೆ. ಇಡೀ ಮೈಗೆಲ್ಲ ವ್ಯಾಪಿಸಿದೆ. ಆಗ ಸಹಾಯಕ್ಕಾಗಿ ಕೂಗಿದ್ದಾಳೆ. ಅಲ್ಲೇ ಇದ್ದ ತಂಗಿಗೆ ಹೆಲ್ಪ್ ಮಾಡುವಂತೆ ಗೋಗರೆದಿದ್ದಾಳೆ. ಆದರೆ ಕಲ್ಲು ಹೃದಯದ ರಾಜೇಶ್ವರಿ ದೂರಕ್ಕೆ ನಿಂತಿದ್ದಾಳೆ. ನೋಡ ನೋಡ್ತಿದ್ದಂತೆ ವರಲಕ್ಷ್ಮಿ ಬೆಂಕಿಯಲ್ಲಿ ಸುಟ್ಟು ಹೋಗಿದ್ದಾಳೆ. ಶೇಕಡಾ 80ರಷ್ಟು ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ ಅಂತ ತೆಲಂಗಾಣದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ತಾನೂ ಬೆಂಕಿ ಹಚ್ಚಿಕೊಂಡಳು ಪಾಪಿ ತಂಗಿ!
ಇಷ್ಟೆಲ್ಲಾ ಆಗ್ತಿದ್ದಂತೆ ತಂಗಿ ರಾಜೇಶ್ವರಿಗೆ ಭಯ ಶುರುವಾಗಿದೆ. ಅಕ್ಕನನ್ನೇನೋ ಬೆಂಕಿಹಚ್ಚಿ ಕೊಂದು ಬಿಟ್ಟೆ. ಈಗ ಪೊಲೀಸ್ ಕೇಸ್ ಆಗಿ, ಜೈಲು ಸೇರಬೇಕಾಗುತ್ತದೆ ಅಂತ ಹೆದರಿದ್ದಾಳೆ. ಏನೂ ಮಾಡಲೂ ತೋಚದೆ ತನ್ನ ಮೈಮೈಲೂ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಸದ್ಯ ರಾಜೇಶ್ವರಿಗೆ ಸಹ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಅಕ್ಕನ ಕೊಲೆಗೆ ಕಾರಣವಾಯ್ತು ಆಸ್ತಿ
ಈ ವರಲಕ್ಷ್ಮೀ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಆಕೆಯ ಪತಿ ಕೆಲವು ವರ್ಷಗಳ ಹಿಂದೆಯೇ ದೂರಾವಾಗಿದ್ದಾರೆ. ಈ ಇಬ್ಬರು ಅಕ್ಕತಂಗಿಯರ ತವರು ಮನೆ ಕಾಮರೆಡ್ಡಿ ಜಿಲ್ಲೆಯಲ್ಲಿ ಇತ್ತು. ಈ ಸಹೋದರಿಯರ ಪಾಲಕರ ಬಳಿ 5 ಎಕರೆಗಳಷ್ಟು ಭೂಮಿಯಿದೆ. ಆ ಐದು ಎಕರೆ ಭೂಮಿ ಹಂಚಿಕೊಳ್ಳುವ ಸಂಬಂಧ ವರಲಕ್ಷ್ಮೀ ಮತ್ತು ರಾಜೇಶ್ವರಿ ಮಧ್ಯೆ ವಿದಾದ ಇತ್ತು ಎನ್ನಲಾಗಿದೆ. ಇದೇ ಆಸ್ತಿ ವಿಚಾರವಾಗಿಯೇ ಅಕ್ಕನಿಗೇ ತಂಗಿ ಬೆಂಕಿ ಇಟ್ಟಿದ್ದಾಳೆ. ಎಂದು ಚೆಗುಂಟಾ ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ರಾಜೇಶ್ವರಿ ಬಳಿ ಮಾಹಿತಿ ಪಡೆಯುತ್ತಿದ್ದಾರೆ.