ಈ ಬಾರಿಯ ಕೇಂದ್ರ ಮುಂಗಡ ಪತ್ರದಲ್ಲಿ ದೇಶದ ಜನರ ಮಾನಸಿಕ ಸ್ಥಿತಿಗತಿಯ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸಿದೆ. ಹೀಗಾಗಿಯೇ ಜನರ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಬೆಂಗಳೂರಿನ ನಿಮ್ಹಾನ್ಸ್ ಮತ್ತು ಸರ್ಕಾರದ ಸಹಯೋಗದೊಂದಿಗೆ ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಕೊರೋನಾ ಕಾರಣದಿಂದ ದೇಶದಲ್ಲಿ ಎಲ್ಲಾ ವಯಸ್ಸಿನ ಜನರ ಮಾನಸಿಕ ಸ್ಥಿತಿ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಸಮಾಜ, ಜನರ ಆರೋಗ್ಯದೆಡೆಗೆ ಗಮನ ಹರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಟೆಲಿ ಮೆಂಟಲ್ ಆರೋಗ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಮೂಲಕ ದೇಶದಲ್ಲಿ 23 ದೂರವಾಣಿ ಮಾನಸಿಕ ಆರೋಗ್ಯ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಈ ರಾಷ್ಟ್ರೀಯ ಟೆಲಿ ಮೆಂಟಲ್ ಆರೋಗ್ಯ ಕಾರ್ಯಕ್ರಮವು 23 ದೂರವಾಣಿ ಮಾನಸಿಕ ಆರೋಗ್ಯ ಶ್ರೇಷ್ಠತಾ ಕೇಂದ್ರಗಳನ್ನು ಒಳಗೊಂಡಿರಲಿದ್ದು, ಬೆಂಗಳೂರಿನ ನಿಮ್ಹಾನ್ಸ್ ಇದರ ನೋಡೆಲ್ ಕೇಂದ್ರವಾಗಿರಲಿದೆ. ಹಾಗೇ, ಟೆಲಿ ಹೆಲ್ತ್ ಸೆಂಟರ್ಗೆ ಬೆಂಗಳೂರು ಐಐಟಿ ಸಂಪೂರ್ಣವಾದ ತಾಂತ್ರಿಕ ಸಹಕಾರ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಇಂದು ತಿಳಿಸಿದ್ದಾರೆ. ಈ ಯೋಜನೆಗೆ ಬೇಕಿರುವ ಸಾಫ್ಟ್ವೇರ್ ಅನ್ನು ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿಯ ಬೆಂಗಳೂರಿನ ‘ಇ-ಹೆಲ್ತ್ ರಿಸರ್ಚ್ ಸೆಂಟರ್’ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೊ. ಶ್ರೀಕಾಂತ್ ರೂಪಿಸಿದ್ದಾರೆ.
ಏನಿದು ರಾಷ್ಟ್ರೀಯ ದೂರವಾಣಿ ಮಾನಸಿಕ ಆರೋಗ್ಯ ಕಾರ್ಯಕ್ರಮ?
ದೇಶದಲ್ಲಿನ ಮಾನಸಿಕ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಟಿಲಿ ಕೌನ್ಸಲಿಂಗ್ ಮತ್ತು ಟೆಲಿ ಕಾಲಿಂಗ್ ವ್ಯವಸ್ಥೆಯ ಮೂಲಕ ಇಂಥವರಿಗೆ ಸಾಂತ್ವನ ಒದಗಿಸುವುದು ನಮ್ಮ ಉದ್ದೇಶ. ಇದಕ್ಕಾಗಿ ನಾವು ಅಭಿವೃದ್ಧಿಪಡಿಸಿರುವ ಸಾಫ್ಟ್ವೇರ್ಗೆ ಇ-ಮಾನಸ್ ಎಂಬ ಹೆಸರು ಇಟ್ಟಿದ್ದೇವೆ. ಇದನ್ನು ವೈದ್ಯರ ಬಳಕೆಗಾಗಿ ಅಭಿವೃದ್ಧಿಪಡಿಸಲಾಗಿದೆ. ದೇಶದ ಯಾವುದೇ ಮೂಲೆಯಿಂದ ಮಾನಸಿಕ ಸಮಸ್ಯೆಯ ಕುರಿತಾಗಿ ವೈದ್ಯರೊಂದಿಗೆ ಫೋನ್ ಕಾಲ್ ಮೂಲಕ ಮಾತನಾಡಬಹುದು. ಹೀಗೆ ಮಾತನಾಡಿದಾಗ ವೈದ್ಯರು ಪಡೆದ ಮಾಹಿತಿಗಳು ಸಾಫ್ಟ್ವೇರ್ನಲ್ಲಿ ಸೇವ್ ಆಗಿರುತ್ತದೆ. ರೋಗಿ ದೇಶದ ಯಾವುದೇ ಪ್ರದೇಶದಲ್ಲಿ ಚಿಕಿತ್ಸೆ ಪಡೆಯುವುದಾದರೂ ಈ ಸಾಫ್ಟ್ವೇರ್ನಲ್ಲಿ ಮಾಹಿತಗಳು ಸಿಗಲಿವೆ.
ಇ-ಮಾನಸ್ ಸಾಫ್ಟ್ವೇರ್ನಿಂದ ಆಗುವ ಪ್ರಯೋಜನಗಳೇನು?
ರೋಗಿಯು ಆಸ್ಪತ್ರೆಗೆ ತೆರಳಿ ಅಥವಾ ಪೋನ್ ಮೂಲಕ ವೈದ್ಯರ ಸಲಹೆಗಳನ್ನು ಪಡೆದರೆ ಮತ್ತು ರೋಗಿ ವಿಡಿಯೋ ಕಾಲ್ ಮೂಲಕವೂ ಮಾನಸಿಕ ತಜ್ಞರ ಸಲಹೆಗಳನ್ನು ಪಡೆದರೆ ಎಲ್ಲಾ ಮಾಹಿತಿಗಳು ಇ ಮಾನಸ್ ಸಾಫ್ಟ್ವೇರ್ನಲ್ಲಿ ದಾಖಲಾಗಲಿದೆ. ಇನ್ನೊಮ್ಮೆ ರೋಗಿ ವೈದ್ಯರನ್ನು ಭೇಟಿ ಮಾಡಿದಾಗ ಹಿಂದಿನ ಭೇಟಿಯ ಅಥವಾ ಹಿಂದೆ ನೀಡಿದ ಸಲಹೆಗಳ ಸಂಪೂರ್ಣ ಮಾಹಿತಿ ದೊರೆಯಲಿದೆ. ಈ ಮೂಲಕ ಉತ್ತಮ ಚಿಕಿತ್ಸೆಯನ್ನು ನೀಡಲು ವೈದ್ಯರಿಗೆ ಸಹಾಯವಾಗಲಿದೆ. ಇದು ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಕಾರ್ಯನಿರ್ವಹಿಸಲಿದೆ. ಕೇಂದ್ರ ಸರ್ಕಾರ ಆಯಾ ಪ್ರದೇಶದ ಭಾಷೆಯನ್ನು ಬಳಸಲು ಅನುಕೂಲ ಮಾಡಿಕೊಟ್ಟಿದೆ. ಹೀಗಾಗಿ ರೋಗಿ ಕರೆ ಮಾಡಿದ ತಕ್ಷಣ ಆ ಪ್ರದೇಶದ ಭಾಷೆಯ ಕೇಂದ್ರಗಳಿಗೆ ಕನೆಕ್ಟ್ ಆಗುವ ಮೂಲಕ ವೈದ್ಯರ ನೆರವು ದೊರೆಯಲಿದೆ.
ಕೇಂದ್ರ ಸರ್ಕಾರದ ನೀಡಿರುವ ಸೂಚನೆಗಳೇನು?
ಪ್ರತಿ ರೋಗಿಗಳ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ದಾಖಲಾಗಲು ನೆರವಾಗುವಂತೆ, ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ಸುಲಭವಾಗಿ ಬಳಸಲು ಅನುವಾಗುವಂತೆ ಸಾಫ್ಟ್ವೇರ್ ವಿನ್ಯಾಸ ಆಗಬೇಕು. ದೇಶದಲ್ಲಿರುವ ಯಾವುದೇ ಆಸ್ಪತ್ರೆಯಲ್ಲಿ ಈ ಮಾಹಿತಿ ಅಗತ್ಯ ಸಂದರ್ಭದಲ್ಲಿ ಲಭ್ಯವಾಗಬೇಕು ಎಂಬ ಸೂಚನೆಯಿತ್ತು. ಅದರಂತೆ ನಾವು ಸಾಫ್ಟ್ವೇರ್ ರೂಪಿಸಿದೆವು. ಇನ್ನೊಂದು ಮುಖ್ಯವಿಚಾರವೆಂದರೆ ರೋಗಿಯು ಐಡಿ ನೀಡಿ ವೈದ್ಯರನ್ನು ಸಂಪರ್ಕಿಸುವವರೆಗೆ ಯಾವುದೇ ವೈದ್ಯರು ಕೂಡ ರೋಗಿಯ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲ. ಆಯುಷ್ಮಾನ್ ಭಾರತ್ ಪೋರ್ಟಲ್ ಮಾದರಿಯಲ್ಲಿಯೇ ಈ ಇ-ಮಾನಸ್ ಸಾಫ್ಟ್ವೇರ್ ಕೂಡ ಕಾರ್ಯನಿರ್ವಹಿಸಲಿದೆ. ರೋಗಿಗಳ ಮಾಹಿತಿ ಸುರಕ್ಷತೆಗಾಗಿ ಡಾಟಾ ಸೋರಿಕೆಯಾಗದಂತೆ ಬೇಕಾದ ಎಲ್ಲಾ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ.
ಇ-ಮಾನಸ್ ಸಾಪ್ಟ್ವೇರ್ಗೆ ಲಾಗಿನ್ ಆಗುವುದು ಹೇಗೆ?
ಒಂದು ಬಾರಿ ರೋಗಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದ ಮೇಲೆ ವೈದ್ಯರು ಆ ರೋಗಿಯ ಹೆಸರು ವಿಳಾಸದೊಂದಿಗೆ ಸಾಫ್ಟ್ವೇರ್ನಲ್ಲಿ ರಿಜಿಸ್ಟರ್ ಮಾಡುತ್ತಾರೆ. ನೊಂದಾಯಿತ ಫೋನ್ ನಂಬರ್ಗೆ ಒಟಿಪಿ ಬರುತ್ತದೆ. ಜತೆಗೆ ಇ ಮಾನಸ್ ಐಡಿ ದೊರೆಯುತ್ತದೆ. ಈ ಐಡಿ ಮೂಲಕ ನಿಮ್ಮ ಗುರುತನ್ನು ಆಸ್ಪತ್ರೆಯಲ್ಲಿ ಪತ್ತೆ ಮಾಡಬಹುದಾಗಿದೆ.
ಇ-ಮಾನಸ್ ಸಾಫ್ಟ್ವೇರ್ ಎಂದಿನಿಂದ ಬಳಕೆಯಲ್ಲಿದೆ.
ಇ-ಮಾನಸ್ ಸಾಫ್ಟ್ವೇರ್ 2020ರ ಜೂನ್ನಲ್ಲಿಯೇ ಲಾಂಚ್ ಆಗಿದೆ. ಹಲವು ತಾಂತ್ರಿಕ ದೋಷಗಳಿಂದಾಗಿ ನಿಧಾನಗತಿಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ನಾವು ತಂತ್ರಜ್ಞಾನ ಒದಗಿಸಿದ್ದೇವೆ ಅದನ್ನು ನಿರ್ವಹಿಸುತ್ತೇವೆ. ರಾಜ್ಯ ಆರೋಗ್ಯ ಇಲಾಖೆಯು ಸಾಫ್ಟ್ವೇರ್ ಅನ್ನು ಹೋಸ್ಟ್ ಮಾಡುತ್ತದೆ.