ಯಡಿಯೂರಪ್ಪ ಸರ್ಕಾರದ ಭಾಗವೇ ಬೊಮ್ಮಾಯಿ ಸರ್ಕಾರ: ಸಿದ್ದರಾಮಯ್ಯ ಆರೋಪಿಸಿದರು
ಬೆಂಗಳೂರು : ಕೇಂದ್ರ ಸರ್ಕಾರ ಎಪಿಎಂಸಿಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಕಾರ್ಯ ಮಾಡುತ್ತಿದೆ. ಇದು ರೈತರನ್ನು ಒಕ್ಕಲೆಬ್ಬಿಸುವ ತಂತ್ರ. ಕೇಂದ್ರ ವಾಪಸ್ ಪಡೆದ ಕಾಯ್ದೆಗಳನ್ನು ರಾಜ್ಯದಲ್ಲಿ ಹಿಂತೆಗೆದುಕೊಂಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಕಿ, ಗೋಧಿ, ರಾಗಿಗೆ ನೀಡಲಾಗುತ್ತಿದ್ದ ಬೆಂಬಲ ಬೆಲೆಯನ್ನು ಕಡಿಮೆ ಮಾಡಲಾಗಿದೆ. ರೈತರು ಬೆಳೆಯುವ ಬೆಳೆ ಹೆಚ್ಚಾಗುತ್ತಿದ್ದು, ಖರೀದಿ ಪ್ರಮಾಣ ಕಡಿಮೆ ಆಗುತ್ತಿದೆ. ಹಂತ ಹಂತವಾಗಿ ಎಪಿಎಂಸಿಗಳನ್ನು ಮುಚ್ಚಲಾಗುತ್ತಿದೆ ಎಂದು ದೂರಿದರು.
ಎಪಿಎಂಸಿ ಕಾಯ್ದೆ, ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದರೂ ರಾಜ್ಯ ಸರ್ಕಾರ ಹಿಂತೆದುಕೊಂಡಿಲ್ಲ. ಇದರಿಂದ ರಾಜ್ಯದ ರೈತರಿಗೆ ಸರ್ಕಾರ ಕಂಟಕವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಬೊಮ್ಮಾಯಿ ಸಿಎಂ ಆಗಿ 6 ತಿಂಗಳು ಪೂರ್ಣವಾಗಿದೆ. ಯಡಿಯೂರಪ್ಪ ಸರ್ಕಾರದ ಭಾಗವೇ ಬೊಮ್ಮಾಯಿ ಸರ್ಕಾರ. ಬೊಮ್ಮಾಯಿ ಹಿಂದೆ ಗೃಹ ಸಚಿವರಾಗಿದ್ದರು. ಈಗ ಸಿಎಂ ಆಗಿದ್ದಾರೆ. ಇವರ ಸರ್ಕಾರವೇನು ಹೊಸದಲ್ಲ. 2018ರಲ್ಲಿ ಬಿಜೆಪಿ ಪ್ರಣಾಳಿಕೆ ರಿಲೀಸ್ ಮಾಡಿತ್ತು. ಅದೇ ಪ್ರಣಾಳಿಕೆ ಯಡಿಯೂರಪ್ಪ, ಬೊಮ್ಮಾಯಿಗೆ ಅನ್ವಯ. ಆ ಪ್ರಣಾಳಿಕೆಯಂತೆಯೇ ಇವರು ನಡೆಯಬೇಕು ಎಂದರು.