ಆಂಧ್ರ ಪ್ರದೇಶದ ಮುಖ್ಯಮಂತ್ರಿಗೆ ಕೊಲೆ ಬೆದರಿಕೆ:
ಅಮರಾವತಿ: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಬಾಂಬ್ ಹಾಕಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಖ್ಯಾತ ನಟ ಪವನ್ ಕಲ್ಯಾಣ್ ಅವರ ಅಭಿಮಾನಿ ಎಂದು ತಿಳಿದುಬಂದಿದೆ.
ರಾಜಮಹೇಂದ್ರವರಂನ ರಾಜಾಪಲೇಮ್ ಫಣಿ (27) ಎಂಬ ಯುವಕ ಬಂಧನಕ್ಕೆ ಒಳಗಾಗಿದ್ದಾನೆ. ಸಾಮಾಜಿಕ ಜಾಲತಾಣದ ಮೂಲಕ ಮುಖ್ಯಮಂತ್ರಿಯನ್ನು ಹತ್ಯೆ ಮಾಡುವುದಾಗಿ ಈತ ಬೆದರಿಕೆ ಹಾಕಿದ್ದ. ಹತ್ಯೆಯ ಕುರಿತಂತೆ ಜನವರಿ 16 ರಂದು ಟ್ವಿಟರ್ನಲ್ಲಿ ಸರಣಿ ಟ್ವೀಟ್ಗಳನ್ನು ಮಾಡಿದ್ದ. ನಂತರ ಹೆದರಿ ಅದನ್ನು ಡಿಲೀಟ್ ಮಾಡಿದ್ದ.
ರಾಜಾಪಲೇಮ್ ಫಣಿ ಪವನ್ ಕಲ್ಯಾಣ ಅವರ ಜನಸೇನಾ ಪಕ್ಷದ ಬೆಂಬಲಿಗನಾಗಿದ್ದ ಈತನ ವಿರುದ್ಧ ಜಗನ್ ಸೇವಾದಳದ ಉಪಾಧ್ಯಕ್ಷ ಮಲ್ಯಂ ಶ್ರಿಕಾಂತ್ ಎನ್ನುವರು ತಿರುಪತಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಐಪಿ ವಿಳಾಸ ಆಧರಿಸಿ ಈಗ ಆತನನ್ನು ಬಂಧಿಸಿದ್ದಾರೆ.
ಫಣಿ ವಿರುದ್ಧ ಐಪಿಸಿ ಕಲಂ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಐಡಿ ಸೈಬರ್ ಕ್ರೈಂ ಎಸ್ಪಿ ಜಿ.ಆರ್. ರಾಧಿಕಾ ಹೇಳಿದ್ದಾರೆ.