18 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಿದ ಧನುಷ್- ಐಶ್ವರ್ಯಾ; ಕಾರಣವೇನು?
ತಮಿಳು ನಟ ಧನುಷ್ (Dhanush) ಹಾಗೂ ಅವರ ಪತ್ನಿ ಐಶ್ವರ್ಯಾ (Aishwaryaa) 18 ವರ್ಷಗಳ ದಾಂಪತ್ಯದ ನಂತರ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈರ್ವರೂ ಬರೆದುಕೊಂಡಿದ್ದು, ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಘೋಷಿಸಿದ್ದಾರೆ. ಇಬ್ಬರ ಹಾದಿಗಳೂ ಪರಸ್ಪರ ಬೇರೆಯಾಗಿವೆ. ಆದ್ದರಿಂದ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಈರ್ವರೂ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ನಟ ಧನುಷ್, ‘‘18 ವರ್ಷಗಳಿಂದ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಪರಸ್ಪರ ಜತೆಗಿದ್ದೆವು. ಈ ಹಾದಿಯಲ್ಲಿ ಈರ್ವರೂ ಬೆಳೆದವು, ಅರ್ಥ ಮಾಡಿಕೊಂಡೆವು ಹಾಗೂ ಹೊಂದಿಕೆಯನ್ನು ಕಲಿತೆವು. ಈಗ ಈರ್ವರೂ ಭಿನ್ನ ದಾರಿಗಳಲ್ಲಿ ನಿಂತಿದ್ದೇವೆ. ಆದ್ದರಿಂದ ನಾನು ಮತ್ತು ಐಶ್ವರ್ಯಾ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ. ವೈಯಕ್ತಿಕವಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳು ಸಮಯ ತೆಗೆದುಕೊಳ್ಳುವೆವು’’ ಎಂದು ಬರೆದಿದ್ದಾರೆ. ಅಲ್ಲದೇ ಈರ್ವರ ಖಾಸಗಿತನವನ್ನು ಗೌರವಿಸುವಂತೆ ಧನುಷ್ ಮನವಿ ಮಾಡಿದ್ದು, ‘‘ಓಂ ನಮಃ ಶಿವಾಯ’’ ಎಂದು ಬರೆದು ಬರಹ ಮುಕ್ತಾಯಗೊಳಿಸಿದ್ದಾರೆ.
ಐಶ್ವರ್ಯಾ ಅವರು ನಟ ರಜಿನಿಕಾಂತ್ ಹಿರಿಯ ಪುತ್ರಿ. ವೃತ್ತಿಯಲ್ಲಿ ಅವರು ನಿರ್ದೇಶಕಿ ಹಾಗೂ ಗಾಯಕಿ. ಧನುಷ್ ಹಾಗೂ ಐಶ್ವರ್ಯಾ 2004ರ ನವೆಂಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ಜೋಡಿಗೆ ಯಾತ್ರಾ ಹಾಗೂ ಲಿಂಗಾ ಎಂಬ ಈರ್ವರು ಪುತ್ರರಿದ್ದಾರೆ. ಯಾತ್ರಾ 2006ರಲ್ಲಿ ಹಾಗೂ ಲಿಂಗಾ 2010ರಲ್ಲಿ ಜನಿಸಿದ್ದರು.
ಬೇರೆಯಾಗುತ್ತಿರುವುದರ ಕುರಿತು ಐಶ್ವರ್ಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು, ‘‘ಯಾವುದೇ ಕ್ಯಾಪ್ಶನ್ ಅಗತ್ಯವಿಲ್ಲ. ನಿಮ್ಮ ಸಹಕಾರ ಹಾಗೂ ಪ್ರೀತಿ ಇರಲಿ’’ ಎಂದು ಬರೆದುಕೊಂಡಿದ್ದಾರೆ. ಐಶ್ವರ್ಯಾ ರಜಿನಿಕಾಂತ್ ಎಂದು ಕೊನೆಯಲ್ಲಿ ಬರೆದು ಅವರು ಬರಹವನ್ನು ಮುಕ್ತಾಯಗೊಳಿಸಿದ್ದಾರೆ.