ಇವು ಕ್ಯಾನ್ಸರ್‌ನ ಆರಂಭಿಕ ಲಕ್ಷಣ ಆಗಿರಬಹುದು..ಈ ಲಕ್ಷಣಗಳು ಇದ್ರೆ ಕೂಡಲೇ ಚೆಕ್ ಮಾಡಿಸಿ!
ಕ್ಯಾನ್ಸರ್ (Cancer) ರೋಗದ ಹೆಸರು ಕೇಳಿದರೆ ಯಾರಿಗೆ ತಾನೇ ಭಯವಾಗುವುದಿಲ್ಲ ಹೇಳಿ? ಇದು ನಿನ್ನೆ ಮೊನ್ನೆ ಹುಟ್ಟಿಕೊಂಡ ರೋಗವಲ್ಲ, ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, (American Cancer Society) ದಾಖಲಾದ ಇತಿಹಾಸದುದ್ದಕ್ಕೂ ಮಾನವರು (Humans) ಮತ್ತು ಇತರ ಪ್ರಾಣಿಗಳು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ನಿದರ್ಶನಗಳು ಇವೆಯಂತೆ.ಬರೀ ಈಗಿನ ಜನರು ಮಾತ್ರ ಮತ್ತು ಅದರಲ್ಲೂ ನಗರ ಪ್ರದೇಶದ ಜನರು ಮಾತ್ರ ಕ್ಯಾನ್ಸರ್ ರೋಗಕ್ಕೆ ಒಳಗಾಗುತ್ತಾರೆ ಮತ್ತು ಇತರರು ಕ್ಯಾನ್ಸರ್‌ಗೆ ಒಳಗಾಗುವುದಿಲ್ಲ ಎನ್ನುವ ಅನಿಸಿಕೆಯನ್ನು ನಾವು ಮೊದಲು ತೆಗೆದು ಹಾಕಬೇಕಾಗುತ್ತದೆ. ಹೌದು.. ಕೆಲವು ತಪ್ಪು ಜೀವನಶೈಲಿಗಳು(Lifestyle) ಕ್ಯಾನ್ಸರ್ ರೋಗವನ್ನು ಪ್ರಚೋದಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಇಂದು ಕ್ಯಾನ್ಸರ್ ರೋಗವನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದರ ಮತ್ತು ಅದಕ್ಕೆ ಸೂಕ್ತವಾದ ಔಷಧಿ ಉಪಚಾರದ ಜೊತೆಗೆ ಜೀವನಶೈಲಿಯಲ್ಲಿ ಕೆಲವು ಸಕರಾತ್ಮಕ ಮತ್ತು ಒಳ್ಳೆಯ ಬದಲಾವಣೆಗಳನ್ನು ಮಾಡಿಕೊಂಡರೆ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಬಹುದು.
ಆದರೆ ಈ ಕೆಳಗಿನ ರೋಗಲಕ್ಷಣಗಳು ನಿಮ್ಮಲ್ಲಿದ್ದರೆ ನಿಮಗೆ ಕ್ಯಾನ್ಸರ್ ರೋಗವಿದೆ ಎಂದರ್ಥವಲ್ಲ. ಆದರೂ, ಪದೇ ಪದೇ ಕಾಣಿಸುವ ರೋಗಲಕ್ಷಣಗಳನ್ನು ನೀವು ನಿರ್ಲಕ್ಷ್ಯ ಮಾಡುವ ಹಾಗೆಯೂ ಇಲ್ಲ. ಈ ಹಿನ್ನೆಲೆ ನೀವು ಸುರಕ್ಷಿತವಾಗಿರಲು ಕ್ಯಾನ್ಸರ್‌ನ ಈ ಐದು ಆರಂಭಿಕ ರೋಗ ಲಕ್ಷಣಗಳ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ ಮತ್ತು ಸೂಕ್ತವಾದ ಸಲಹೆ ಪಡೆಯಿರಿ.
1. ತೂಕ ಕಡಿಮೆ ಆಗುವುದು:ಕ್ಯಾನ್ಸರ್ ರೋಗ ಇರುವವರಲ್ಲಿ ಅವರ ದೇಹದ ತೂಕ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಾ ಹೋಗುತ್ತದೆ. ಇದು ರೋಗದ ಮೊದಲ ಗೋಚರಿಸುವ ಸಂಕೇತವಾಗಿರಬಹುದು. ತಜ್ಞರು ಹೇಳುವಂತೆ ಶೇಕಡಾ 40ರಷ್ಟು ಜನರು ತಾವು ಮೊದಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ತುಂಬಾನೇ ತೂಕ ಕಡಿಮೆಯಾಗಿದೆ ಎಂದು ಹೇಳುತ್ತಾರೆ ಎಂದು ಹೇಳಿದ್ದಾರೆ.
ವೈದ್ಯರು “ಕ್ಯಾಚೆಕ್ಸಿಯಾ” ಎಂದು ಕರೆಯಲ್ಪಡುವ ತೂಕ ಕಡಿಮೆ ಆಗುವ ಸಿಂಡ್ರೋಮ್ ಅನ್ನು ಇಲ್ಲಿ ಉಲ್ಲೇಖಿಸಬಹುದು. ಇದು ಹೆಚ್ಚಿದ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸಿ, ಆಯಾಸ, ಹಸಿವಾಗದೆ ಇರುವುದು ಮತ್ತು ನಿಮ್ಮ ಶಕ್ತಿಯನ್ನು ಕಡಿಮೆ ಮಾಡುತ್ತದೆ.
2. ಆಯಾಸ ಆಗುವುದು:ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ವರದಿಯು ಗುಪ್ತ ಕ್ಯಾನ್ಸರ್ ರೋಗದಿಂದಾಗಿ ನಿಮಗೆ ತುಂಬಾನೇ ಆಯಾಸವಾಗುತ್ತದೆ ಎಂದು ಹೇಳಲಾಗಿದೆ.
ದೀರ್ಘ ದಿನದ ಕೆಲಸ ಅಥವಾ ಆಟದ ನಂತರ ನೀವು ಆಯಾಸ ಪಡುವುದು ಬೇರೆ, ಇಲ್ಲಿ ನೀವು ಎಷ್ಟೇ ವಿಶ್ರಾಂತಿ ತೆಗೆದುಕೊಂಡರೂ ವಿಪರೀತ ಆಯಾಸ ಆಗುವುದು ಕ್ಯಾನ್ಸರ್‌ನ ಆರಂಭಿಕ ಸಂಕೇತವಾಗಬಹುದು. ವರದಿಯ ಪ್ರಕಾರ ಬೆಳಗ್ಗೆ ಏಳಲು ನೀವು ಕಷ್ಟಪಡುವುದು ಆಗಾಗ್ಗೆ ಆಯಾಸದ ಸಂಕೇತವಾಗಿದೆ.
ನೀವು ಆಯಾಸಗೊಂಡಿದ್ದೀರಿ ಎಂದ ಮಾತ್ರಕ್ಕೆ ನಿಮಗೆ ಕ್ಯಾನ್ಸರ್ ಇದೆ ಎಂದರ್ಥವಲ್ಲ. ಆಯಾಸಕ್ಕೆ ಸಾಕಷ್ಟು ಮೂಲ ಕಾರಣಗಳಿವೆ. ಅವುಗಳಲ್ಲಿ ಅನೇಕವು ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿಲ್ಲ. ನಿಮ್ಮ ರೋಗಲಕ್ಷಣಗಳು ನಿಮ್ಮ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವಷ್ಟು ತೀವ್ರವಾಗಿದ್ದರೆ, ನಿಮ್ಮ ವೈದ್ಯರನ್ನು ಭೇಟಿ ಮಾಡಿ.
3. ಪದೇ ಪದೇ ಜ್ವರ ಬರುವುದು:ಸಾಮಾನ್ಯವಾಗಿ ನಿಮಗೆ ಶೀತವಾದರೆ, ಜ್ವರವು ಬರುತ್ತದೆ ಮತ್ತು ಅಂತಹ ಜ್ವರ ಕೆಲವು ಸಮಯದಲ್ಲಿ ಬೇಗನೆ ಕಡಿಮೆಯಾಗುತ್ತದೆ. ಆದರೆ ಜ್ವರವು ಕ್ಯಾನ್ಸರ್ ಸಂಪರ್ಕವನ್ನು ಹೊಂದಿದ್ದರೆ, ನೀವು ಗಮನಿಸಬೇಕಾದ ಕೆಲವು ಚಿಹ್ನೆಗಳಿವೆ.
ಸ್ಪಷ್ಟ ಕಾರಣವಿಲ್ಲದೆ ಜ್ವರ ಪುನರಾವರ್ತನೆಯಾಗುತ್ತಿದೆಯೇ, ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿ ಜ್ವರ ಬರುತ್ತಿದ್ದೆಯೇ ಎನ್ನುವುದನ್ನು ನೀವು ಗಮನಿಸಿ.
4. ವಿಪರೀತ ನೋವು:ತಜ್ಞರ ಪ್ರಕಾರ, ಕೆಲವು ರೀತಿಯ ಕ್ಯಾನ್ಸರ್ ರೋಗವು ನೋವಿನೊಂದಿಗೆ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ನಿಮ್ಮ ದೇಹದಲ್ಲಿರುವ ಮೂಳೆಗಳು ಆಗಾಗ್ಗೆ ನೋವುಂಟು ಮಾಡುತ್ತದೆ. ಕೆಲವು ಮೆದುಳಿನ ಗೆಡ್ಡೆಗಳು ತಲೆನೋವುಗಳನ್ನು ಉಂಟುಮಾಡುತ್ತವೆ.
ಅದು ತುಂಬಾ ದಿನಗಳವರೆಗೆ ಇರುತ್ತದೆ ಮತ್ತು ಚಿಕಿತ್ಸೆಯೊಂದಿಗೆ ಕಡಿಮೆಯಾಗುವುದಿಲ್ಲ. ತುಂಬಾ ದಿನಗಳವರೆಗೆ ಈ ನೋವುಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ನೀವು ವೈದ್ಯರನ್ನು ಭೇಟಿ ಮಾಡಿ.
5. ಚರ್ಮದಲ್ಲಿ ಬದಲಾವಣೆಗಳಾಗುತ್ತವೆ:ನಮ್ಮ ಚರ್ಮವು ನಮ್ಮ ದೇಹದ ಅತಿದೊಡ್ಡ ಅಂಗವಾಗಿದೆ ಮತ್ತು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಒಂದು ಕಿಟಕಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೊಸ ಮಚ್ಚೆಗಳು, ಉಬ್ಬುಗಳು, ಉಂಡೆಯಾಕಾರದ ಗಡ್ಡೆಗಳು ಅಥವಾ ನಿಮ್ಮ ದೇಹದ ಮೇಲಿನ ಗುರುತುಗಳನ್ನು ನೋಡಿಕೊಳ್ಳಿರಿ.
ನಿಮ್ಮ ಕಣ್ಣುಗಳು ಅಥವಾ ಬೆರಳ ತುದಿಗಳು ಹಳದಿಯಾಗುವುದು ಸಂಭಾವ್ಯ ಸೋಂಕು ಅಥವಾ ಕ್ಯಾನ್ಸರ್ ಸೂಚಿಸುವ ಒಂದು ಲಕ್ಷಣವಾಗಿದೆ. ಬಾಯಿಯ ಕ್ಯಾನ್ಸರ್ ನಿಮ್ಮ ಬಾಯಿಯಲ್ಲಿ ಹುಣ್ಣುಗಳಾಗಿ ಪ್ರಾರಂಭವಾಗಬಹುದು.