ಅಫ್ಘಾನಿಸ್ತಾನದಲ್ಲಿ ಭೂಕಂಪ, 26 ಮಂದಿ ಸಾವು!
ಅಪ್ಘಾನಿಸ್ತಾನದಲ್ಲಿ(Afghanistan) ಪ್ರಬಲ ಭೂಕಂಪ(Earthquake) ಸಂಭವಿಸಿ ಸುಮಾರು 26 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಅಪ್ಘಾನಿಸ್ತಾನದಲ್ಲಿ(Western Afghanistan) ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3 ರಷ್ಟು ತೀವ್ರತೆ ದಾಖಲಾಗಿದೆ.
ಬಾದ್ಘಿಸ್‌ನ ಪಶ್ಚಿಮ ಪ್ರಾಂತ್ಯದ ಖಾದಿಸ್ ಜಿಲ್ಲೆಯಲ್ಲಿ ಭೂಮಿ ಕಂಪಿಸಿದಾಗ ಮನೆಗಳ ಮೇಲ್ಛಾವಣಿ ಕುಸಿದು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತ್ಯದ ವಕ್ತಾರ ಬಾಜ್ ಮೊಹಮ್ಮದ್ ಸರ್ವಾರಿ ಎಎಫ್‌ಪಿಗೆ ತಿಳಿಸಿದ್ದಾರೆ. ಯುಎಸ್ ಜಿಯೋಲಾಜಿಕಲ್ ಸರ್ವೇ ಪ್ರಕಾರ, ಆಳವಿಲ್ಲದ ಭೂಕಂಪವು 5.3 ತೀವ್ರತೆಯನ್ನು ಹೊಂದಿದೆ.
ಈಗಾಗಲೇ ಅಪ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗಿದ್ದು, ಅಲ್ಲಿನ ಜನರು ಸಾಕಷ್ಟು ನಲುಗಿದ್ದರು. ಇದರ ಮಧ್ಯೆಯೇ ಪ್ರಕೃತಿಯು ಕೂಡ ತನ್ನ ಮುನಿಸನ್ನು ತೋರಿಸಿದೆ. ಪರಿಣಾಮ ಪ್ರಬಲ ಭೂಕಂಪಕ್ಕೆ ಸುಮಾರು 26 ಮಂದಿ ಅಸುನೀಗಿದ್ದಾರೆ.
ಐವರು ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಸೇರಿ ಒಟ್ಟು 26 ಜನರು ಈ ಭೂಕಂಪದಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಭೂಕಂಪವು ಪ್ರಾಂತ್ಯದ ಮುಖರ್ ಜಿಲ್ಲೆಯ ನಿವಾಸಿಗಳಿಗೆ ಹಾನಿಯನ್ನುಂಟು ಮಾಡಿದೆ. ಆದರೆ ಸಾವು-ನೋವುಗಳು ಸೇರಿದಂತೆ ಇತರೆ ವಿವರಗಳು ಇನ್ನೂ ಲಭ್ಯವಿಲ್ಲ.
ಕಳೆದ 20 ವರ್ಷಗಳಲ್ಲಿ ಅಂತರಾಷ್ಟ್ರೀಯ ನೆರವಿನಿಂದ ಕಡಿಮೆ ಲಾಭವನ್ನು ಪಡೆದಿರುವ, ವಿನಾಶಕಾರಿ ಬರಗಾಲದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಖಾದಿಸ್ ಸಹ ಒಂದಾಗಿದೆ. ಅಪ್ಘಾನಿಸ್ತಾನವು ಆಗಾಗ್ಗೆ ಭೂಕಂಪಗಳಿಗೆ ಸಾಕ್ಷಿಯಾಗುತ್ತಿದೆ. ವಿಶೇಷವಾಗಿ ಹಿಂದೂ ಕುಶ್ ಪರ್ವತ ಶ್ರೇಣಿಯಲ್ಲಿ ಹೆಚ್ಚಾಗಿ ಭೂಮಿ ಕಂಪಿಸುತ್ತದೆ. ಇದು ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್ಗಳ ಜಂಕ್ಷನ್ನ ಸಮೀಪದಲ್ಲಿದೆ.
ಬಡ ಅಫ್ಘಾನಿಸ್ತಾನದಲ್ಲಿ ಕಳಪೆಯಾಗಿ ನಿರ್ಮಿಸಲಾದ ಮನೆಗಳು ಮತ್ತು ಕಟ್ಟಡಗಳಿಗೆ ಭೂಕಂಪಗಳು ಗಮನಾರ್ಹ ಹಾನಿಯನ್ನುಂಟುಮಾಡುತ್ತಿವೆ. 2015 ರಲ್ಲಿ, ದಕ್ಷಿಣ ಏಷ್ಯಾದಾದ್ಯಂತ ಪರ್ವತ ಶ್ರೇಣಿಯಲ್ಲಿ ಕೇಂದ್ರೀಕೃತವಾದ 7.5 ತೀವ್ರತೆಯ ಪ್ರಬಲ ಭೂಕಂಪವು ಪಾಕಿಸ್ತಾನದಲ್ಲಿ ಸಂಭವಿಸಿದಾಗ ಸುಮಾರು 280 ಜನರು ಸಾವನ್ನಪ್ಪಿದ್ದರು.