ಪಣಜಿ: ಗೋವಾ ವಿಧಾನಸಭೆ ಚುನಾವಣೆಗೆ ತಿಂಗಳಿರುವಾಗಲೇ ಬಿಜೆಪಿ ಭಾರೀ ಆಘಾತ ಅನುಭವಿಸಿದೆ. ಹಾಲಿ ಸಚಿವ ಮೈಕೆಲ್ ಲೋಬೋ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಲ್ಲದೆ ಬಿಜೆಪಿ ಪಕ್ಷವನ್ನೇ ತೊರೆದಿದ್ದಾರೆ. ಅವರ ಬೆನ್ನಿಗೆ ಇನ್ನೋರ್ವ ಶಾಸಕ ಪ್ರವೀಣ್ ಜಾಂತ್ಯೆಯೂ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ.
ಈ ಮೂಲಕ ಚುನಾವಣೆಗೂ ಮುನ್ನ ಕಮಲ ಪಾಳಯ ತೊರೆದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಕಮಲ ಪಾಳಯದ ಮೇಲೆ ಹರಿಹಾಯ್ದಿರುವ ಮೈಕೆಲ್ ಲೋಬೋ, “ಬಿಜೆಪಿ ಈಗ ಜನಸಾಮಾನ್ಯರ ಪಕ್ಷವಾಗಿ ಉಳಿದಿಲ್ಲ,” ಎಂದು ಟೀಕಿಸಿದ್ದಾರೆ. ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಈ ಮೂಲಕ ಟ್ರೆಂಡ್‌ನ ವಿರುದ್ಧ ದಿಕ್ಕಿನಲ್ಲಿ ಹೆಜ್ಜೆ ಹಾಕಲು ಹೊರಟಿದ್ದಾರೆ. ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಒಬ್ಬೊಬ್ಬರೇ ಶಾಸಕರು ಬಂದು ಬಂದು ಬಿಜೆಪಿ ಗೂಡು ಸೇರಿದ್ದರು. ಆದರೆ ಲೋಬೋ ವಿರುದ್ಧ ದಿಕ್ಕಿನಲ್ಲಿ ಹೊರಟಿದ್ದಾರೆ.
“ನಾನು ಎರಡೂ ಸ್ಥಾನಗಳಿಗೆ (ಸಚಿವ ಮತ್ತು ಶಾಸಕ) ರಾಜೀನಾಮೆ ಸಲ್ಲಿಸಿದ್ದೇನೆ. ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ನೋಡುತ್ತೇನೆ. ನಾನು ಬಿಜೆಪಿಗೂ ರಾಜೀನಾಮೆ ನೀಡಿದ್ದೇನೆ,” ಎಂದು ಲೋಬೋ ವರದಿಗಾರರಿಗೆ ಹೇಳಿದ್ದಾರೆ.
ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟ ಉತ್ತರ ನೀಡದ ಅವರು, ಪಕ್ಷಗಳ ಜತೆ ಮಾತುಕತೆ ನಡೆಸುತ್ತಿದ್ದೇನೆ. ಯಾವುದೇ ಪಕ್ಷ ಸೇರಿದರೂ, ಆ ಪಕ್ಷಕ್ಕೆ ಗರಿಷ್ಠ ಸ್ಥಾನಗಳು ಬರುವಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅವರು ಬಹಿರಂಗವಾಗಿ ಬಿಜೆಪಿಯನ್ನು ಟೀಕಿಸುತ್ತಾ ಬಂದಿದ್ದರು. ಮನೋಹರ್ ಪರಿಕ್ಕರ್ ಕಟ್ಟಿದ ಪಕ್ಷ ಇದಲ್ಲ ಎಂದು ಹೇಳುತ್ತಿದ್ದರು. ಹಾಲಿ ಸಿಎಂ ಪ್ರಮೋದ್ ಸಾವಂತ್ ಜತೆ ಅವರು ಬಹಿರಂಗವಾಗಿ ಭಿನ್ನಾಭಿಪ್ರಾಯ ಹೊಂದಿದ್ದರು.
ಪ್ರವೀಣ್ ಜಾಂತ್ಯೆಯೂ ರಾಜೀನಾಮೆ
ಲೋಬೋ ನಿರ್ಗಮನದ ಬೆನ್ನಲ್ಲೇ ಇನ್ನೋರ್ವ ಶಾಸಕ ಪ್ರವೀಣ್ ಜಾಂತ್ಯೆಯೂ ಬಿಜೆಪಿ ತೊರೆದಿದ್ದಾರೆ. ಈ ಮೂಲಕ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದ ಶಾಸಕರ ಸಂಖ್ಯೆ 4ಕ್ಕೆ ಏರಿಕೆಯಾಗಿದ್ದರೆ, ಬಿಜೆಪಿ ಶಾಸಕರ ಬಲ 23ಕ್ಕೆ ಕುಸಿದಿದೆ.
ಜಾಂತ್ಯೆ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರು. 2021ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದವರು 2017ರ ಚುನಾವಣೆಗೂ ಮುನ್ನ ಬಿಜೆಪಿ ಸೇರಿ ಜಯ ಸಾಧಿಸಿದ್ದರು. ಅವರು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಮತ್ತು ಸಂಸದ ಹರೀಶ್ ಜಾಂತ್ಯೆ ಪುತ್ರರಾಗಿದ್ದಾರೆ.