ವ್ಯಾಕ್ಸಿನ್ ಸರ್ಟಿಫಿಕೇಟ್‌ನಿಂದ ಪ್ರಧಾನಿ ಮೋದಿ ಫೋಟೋ ತೆರವುಗೊಳಿಸಲಾಗಿದೆ!
ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಮೋದಿಯವರ ಫೋಟೋವನ್ನು ಹೊರಗಿಡಲು ಕೇಂದ್ರ ಆರೋಗ್ಯ ಸಚಿವಾಲಯವು Co-WIN ಪ್ಲಾಟ್‌ಫಾರ್ಮ್‌ನಲ್ಲಿ ಅಗತ್ಯ ಫಿಲ್ಟರ್‌ಗಳನ್ನು ಅಪ್ಲೈ ಮಾಡಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ಚುನಾವಣಾ ವೇಳಾಪಟ್ಟಿ ಪ್ರಕಟವಾದ ಕೂಡಲೇ ಫಿಲ್ಟರ್‌ಗಳನ್ನು ಶನಿವಾರ ರಾತ್ರಿಯೇ ಅಪ್ಲೈ ಮಾಡಲಾಗಿದೆ.
ಪಂಚರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆ
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ವಿಧಾನಸಭೆ ಚುನಾವಣೆಗಳು ಫೆಬ್ರವರಿ 10 ರಿಂದ ಮಾರ್ಚ್ 7 ರ ನಡುವೆ ಏಳು ಹಂತಗಳಲ್ಲಿ ನಡೆಯುತ್ತವೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಸರ್ಕಾರ, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ.
ವ್ಯಾಕ್ಸಿನ್ ಸರ್ಟಿಫಿಕೇಟ್‌ನಿಂದ ಮೋದಿ ಫೋಟೋ ತೆರವು
“ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತಿರುವ ಕಾರಣ, ಚುನಾವಣೆ ನಡೆಯಲಿರುವ ಈ 5 ರಾಜ್ಯಗಳಲ್ಲಿ ಜನರಿಗೆ ನೀಡಲಾಗುತ್ತಿರುವ COVID-19 ಪ್ರಮಾಣಪತ್ರಗಳಿಂದ ಪ್ರಧಾನ ಮಂತ್ರಿಯ ಫೋಟೋವನ್ನು ಹೊರಗಿಡಲು ಆರೋಗ್ಯ ಸಚಿವಾಲಯವು CoWIN ಪ್ಲಾಟ್‌ಫಾರ್ಮ್‌ನಲ್ಲಿ ಅಗತ್ಯ ಫಿಲ್ಟರ್‌ಗಳನ್ನು ಅನ್ವಯಿಸಿದೆ,” ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.
ಮಾರ್ಚ್ 2021 ರಲ್ಲಿ, ಕೆಲವು ರಾಜಕೀಯ ಪಕ್ಷಗಳು ಎತ್ತಿದ ದೂರುಗಳ ಬಳಿಕ ಚುನಾವಣಾ ಆಯೋಗವು ಸೂಚಿಸಿದಂತೆ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಆರೋಗ್ಯ ಸಚಿವಾಲಯವು ಇದೇ ರೀತಿಯ ಉಪಕ್ರಮವನ್ನು ತೆಗೆದುಕೊಂಡಿತ್ತು.
ಚುನಾವಣೆಗೆ ಕೆಲವು ನಿಯಮಗಳು
ಸುಮಾರು 1 ತಿಂಗಳ ಅವಧಿಯ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ಚುನಾವಣಾ ಆಯೋಗವು, ಕೋವಿಡ್ ಆತಂಕದಿಂದಾಗಿ ಜನವರಿ 15 ರವರೆಗೆ ಭೌತಿಕ ರ್ಯಾಲಿಗಳು ಮತ್ತು ರೋಡ್‌ಶೋಗಳನ್ನು ನಿಷೇಧಿಸಿದೆ. ರ್ಯಾಲಿಗಳು, ರೋಡ್‌ಶೋಗಳು, ನುಕ್ಕಡ್ ಸಭೆಗಳು, ಪಾದಯಾತ್ರೆಗಳು ಮತ್ತು ವಾಹನ ರ್ಯಾಲಿಗಳ ಮೇಲಿನ ನಿಷೇಧವನ್ನು ಜನವರಿ 15 ರಂದು ಪರಿಶೀಲಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.
ಚುನಾವಣೆಗಳ ವಿವರ
ಉತ್ತರ ಪ್ರದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ
ಫೆಬ್ರವರಿ 10ರಂದು ಮೊದಲ ಹಂತದ ಮತದಾನ
ಫೆಬ್ರವರಿ 14ರಂದು 2ನೇ ಹಂತದ ಮತದಾನ
ಫೆಬ್ರವರಿ 20ರಂದು 3ನೇ ಹಂತದ ಮತದಾನ
ಫೆಬ್ರವರಿ 23ರಂದು 4ನೇ ಹಂತದ ಮತದಾನ
ಫೆಬ್ರವರಿ 27ರಂದು 5ನೇ ಹಂತದ ಮತದಾನ
ಮಾರ್ಚ್ 3ರಂದು 6ನೇ ಹಂತದ ಮತದಾನ
ಮಾರ್ಚ್ 7ರಂದು 7ನೇ ಹಂತದ ಮತದಾನ
ಮಣಿಪುರದಲ್ಲಿ 2 ಹಂತಗಳಲ್ಲಿ ಮತದಾನ
ಫೆಬ್ರವರಿ 27ರಂದು ಮೊದಲ ಹಂತದ ಮತದಾನ
ಮಾರ್ಚ್ 3ರಂದು 2ನೇ ಹಂತದ ಮತದಾನ
ಪಂಜಾಬ್, ಗೋವಾ, ಉತ್ತರಾಖಂಡಗಳಲ್ಲಿ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ
ಮಾರ್ಚ್ 10ಕ್ಕೆ ಎಲ್ಲಾ 5 ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟ.
ನಿಯಮಗಳು:
ಚುನಾವಣೆ ನಡೆಯುವ 7 ರಾಜ್ಯಗಳಲ್ಲಿ ಶೇಕಡಾ 100ರಷ್ಟು ವ್ಯಾಕ್ಸಿನೇಷನ್ ಮಾಡುವಂತೆ ಅಲ್ಲಿನ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ಎರಡೂ ಡೋಸ್ ಗಳು ಕೂಡ ಶೇಕಡಾ 100ರಷ್ಟು ಆಗಿರಬೇಕೆಂದು ಸೂಚಿಸಲಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆನ್ ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ನೇರವಾಗಿ ನಾಮಪತ್ರ ಸಲ್ಲಿಸುವಾಗ ಇಬ್ಬರು ಮಾತ್ರ ಮತಗಟ್ಟೆಗೆ ಹೋಗಬೇಕು.
ಕೊರೋನಾ ಸೋಂಕು ಹರಡಬಾರದು ಎಂಬ ಕಾರಣಕ್ಕೆ ಜನವರಿ 15ರವರೆಗೆ ಚುನಾವಣಾ ಸಮಾವೇಶಗಳನ್ನು ನಿರ್ಬಂಧಿಸಲಾಗಿದೆ.
ದೊಡ್ಡ ದೊಡ್ಡ ಸಮಾವೇಶ ಮಾತ್ರವಲ್ಲ ಜನವರಿ 15ರವರೆಗೆ ಸಣ್ಣ ಪುಟ್ಟ ಸಭೆ, ಸಮಾರಂಭಗಳನ್ನೂ ಮಾಡುವಂತಿಲ್ಲ.
ಪಾದಯಾತ್ರೆ, ರೋಡ್ ಶೋ, ಸೈಕಲ್ ರ್ಯಾಲಿ, ಬೈಕ್ ರ್ಯಾಲಿಗಳನ್ನೂ ಮಾಡುವಂತಿಲ್ಲ.
5 ಜನರು ಮಾತ್ರ ಮನೆ ಮನೆಗೆ ಹೋಗಿ ಪ್ರಚಾರ ಮಾಡಬಹುದು.
ಚುನಾವಣೆ ಗೆದ್ದಮೇಲೆ ವಿಜಯೋತ್ಸವ, ಸಂಭ್ರಮಾಚರಣೆ ಮಾಡುವಂತಿಲ್ಲ.
ಕೊರೋನಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕ್ರಮಕ್ಕೆ ಸೂಚಿಸಲಾಗಿದೆ.