ದೇಶ

ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ.!

ದೇಶದಲ್ಲಿ ಜನವರಿ 3 ರಿಂದ 15-17ವರ್ಷದವರಿಗೂ ಕೊವಿಡ್ 19 ಲಸಿಕೆ ನೀಡಲಾಗುತ್ತಿದೆ. ಈ ಮೂಲಕ ಕೊರೊನಾ ಲಸಿಕೆ ಅಭಿಯಾನವನ್ನು(Covid 19 Vaccination Drive) ಇನ್ನೊಂದು ಹಂತಕ್ಕೆ ವಿಸ್ತರಿಸಲಾಗಿದೆ. ಹಾಗೇ, ಹೊಸ ಹಂತದ ಕೊರೊನಾ ಲಸಿಕೆ ಅಭಿಯಾನ ಶುರುವಾದ ಒಂದು ವಾರದ ಒಳಗೆ, 15-17ವರ್ಷದವರು 2 ಕೋಟಿಗೂ ಅಧಿಕ ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮಕ್ಕಳ ವ್ಯಾಕ್ಸಿನೇಶನ್​ ಅಭಿಯಾನ ವೇಗವಾಗಿ ಮುಂದುವರಿಯುತ್ತಿದೆ. ನನ್ನ ಕಿರಿಯ ಸ್ನೇಹಿತರೇ, ಅದ್ಭುತವಾಗಿ ಸಾಥ್​ ಕೊಡುತ್ತಿದ್ದೀರಿ ಎಂದು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ, ಕೊವಿಡ್ 19 ಹೊಸ ಹಂತದ ಅಭಿಯಾನ ಶುರುವಾದ ವಾರದಲ್ಲಿ 2 ಕೋಟಿಗೂ ಅಧಿಕ ಮಕ್ಕಳು ಲಸಿಕೆ ಪಡೆದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಕೊವಿನ್ ಆ್ಯಪ್​​ನಲ್ಲಿ ತೋರಿಸಲಾದ ಮಾಹಿತಿಯಂತೆ, ಜನವರಿ 1ರಿಂದ 7ರವರೆಗೆ, 15-17ವಯಸ್ಸಿನವರು ಒಟ್ಟು 20,226,790 ಮಂದಿ ಲಸಿಕೆ ಪಡೆದಿದ್ದಾರೆ. ದೇಶದಲ್ಲಿ ಶುಕ್ರವಾರ ಒಟ್ಟಾರೆ ಕೊರೊನಾ ಲಸಿಕೆ ಅಭಿಯಾನ 150 ಕೋಟಿ ಗಡಿದಾಟಿದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಶ್ಲಾಘಿಸಿದ್ದರು. ನಿನ್ನೆ ಕೋಲ್ಕತ್ತದಲ್ಲಿ ಚಿತ್ತರಂಜನ್​ ರಾಷ್ಟ್ರೀಯ ಕ್ಯಾನ್ಸರ್​ ಇನ್​ಸ್ಟಿಟ್ಯೂಟ್ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಇಂದು ದೇಶ ಕೊರೊನಾ ಲಸಿಕೆ ಅಭಿಯಾನದಲ್ಲಿ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿತು. ಈ ಹೊತ್ತಲ್ಲಿ ಕೊರೊನಾ ಲಸಿಕೆ ತಯಾರಕರು, ಕೇಂದ್ರ ಆರೋಗ್ಯ ಸಚಿವಾಲಯ, ವಿಜ್ಞಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು.

ಭಾರತದಲ್ಲಿ ಕೊವಿಡ್​ 19 ಲಸಿಕೆ ಅಭಿಯಾನ 2021ರ ಜನವರಿಯಿಂದ ಶುರುವಾಗಿದೆ. ಇನ್ನೂ ಒಂದು ವರ್ಷ ಪೂರ್ತಿಯಾಗುವುದರ ಒಳಗೇ ದೇಶದಲ್ಲಿ ಕೊರೊನಾ ಲಸಿಕೆ 150 ಕೋಟಿ ಡೋಸ್ ನೀಡಲಾಗಿದೆ. ಹಾಗೇ, ಡಿಸೆಂಬರ್​ 26ರಂದು ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಜನವರಿ ಮೂರರಿಂದ 15-18ವರ್ಷದವರಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ ಮತ್ತು ಜನವರಿ 10ರಿಂದ ಕೊರೊನಾ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಮತ್ತು 60 ವರ್ಷ ಮೇಲ್ಪಟ್ಟು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆ ಬೂಸ್ಟರ್​ ಡೋಸ್ ನೀಡಲಾಗುವುದು ಎಂದು ಘೋಷಿಸಿದ್ದರು. ಅದರಂತೆ ಈಗ 15-18 ವರ್ಷದವರಿಗೆ ಕೊರೊನಾ ಲಸಿಕೆ ಅಭಿಯಾನ ಪ್ರಾರಂಭವಾಗಿದೆ.

Related Articles

Leave a Reply

Your email address will not be published. Required fields are marked *

Back to top button